ಅಹಮದಾಬಾದ್ ವಿಮಾನ ದುರಂತ; ಊಹಾಪೋಹಗಳಿಗೆ ಕಡಿವಾಣ ಹಾಕಲು NTSB ಮನವಿ
ಜೂನ್ 12 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಬೋಯಿಂಗ್ 787-7 ಅಪಘಾತದಲ್ಲಿ 260 ಮಂದಿ ಮೃತಪಟ್ಟಿದ್ದರು.;
ಅಪಘಾತಕ್ಕೀಡಾಗ ಏರ್ ಇಂಡಿಯಾ ವಿಮಾನ
ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣ ಏನೆಂಬುದನ್ನು ತೀರ್ಮಾನಿಸಲು ಆತುರ ಪಡಬೇಡಿ ಎಂದು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಮುಖ್ಯಸ್ಥರು ಸಲಹೆ ನೀಡಿದ್ದಾರೆ.
ವಿಮಾನದ ಕ್ಯಾಪ್ಟನ್ ಎರಡೂ ಎಂಜಿನ್‌ಗಳ ಇಂಧನ ಸ್ವಿಚ್‌ಗಳನ್ನು ಆಫ್ ಮಾಡಿರಬಹುದು ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಜೂನ್ 12 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಬೋಯಿಂಗ್ 787-7 ಅಪಘಾತದಲ್ಲಿ 260 ಮಂದಿ ಮೃತಪಟ್ಟಿದ್ದರು. ಈ ಅಪಘಾತದ ತನಿಖೆಯನ್ನು ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಅಮೆರಿಕದ NTSB ಸಹಯೋಗದಲ್ಲಿ ನಡೆಸುತ್ತಿದೆ.
ಎಚ್ಚರಿಕೆ ವಹಿಸುವಂತೆ NTSB ಮುಖ್ಯಸ್ಥರ ಒತ್ತಾಯ
ಏರ್ ಇಂಡಿಯಾ ಅಪಘಾತದ ಕುರಿತು ಮಾಧ್ಯಮಗಳಲ್ಲಿ ಬಂದಿರುವ ಆರಂಭಿಕ ವರದಿಗಳ ಬಗ್ಗೆ ಜಾಗರೂಕರಾಗಿರಲು NTSB ಅಧ್ಯಕ್ಷೆ ಜೆನ್ನಿಫರ್ ಹೋಮೆಂಡಿ ಒತ್ತಾಯಿಸಿದ್ದಾರೆ.
ತನಿಖೆಗೆ ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಅಧಿಕೃತ ಮಾಹಿತಿ ಭಾರತದ ವಿಮಾನಯಾನ ಅಧಿಕಾರಿಗಳಿಂದಲೇ ಬರಬೇಕು ಎಂದು ಪುನರುಚ್ಚರಿಸಿದ್ದಾರೆ.
NTSB ತನ್ನ 'X' (ಹಿಂದಿನ ಟ್ವಿಟರ್) ಖಾತೆಯಲ್ಲಿ ಹೋಮೆಂಡಿ ಅವರ ಹೇಳಿಕೆ ಹಂಚಿಕೊಂಡಿದೆ: "ಏರ್ ಇಂಡಿಯಾ 171 ಅಪಘಾತದ ಕುರಿತು ಇತ್ತೀಚಿನ ಮಾಧ್ಯಮ ವರದಿಗಳು ಅಕಾಲಿಕ ಮತ್ತು ಊಹಾಪೋಹಗಳಾಗಿವೆ. ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ, ಇಂತಹ ಪ್ರಕರಣಗಳಲ್ಲಿ ತನಿಖೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
"ಗುರುವಾರ ಬಿಡುಗಡೆಯಾದ AAIB ಯ ಸಾರ್ವಜನಿಕ ಮನವಿಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಜತೆಗೆ ತನಿಖೆಯ ಗೌಪ್ಯತೆ ಕಾಪಾಡುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.
ಇಂಧನ ಸ್ವಿಚ್ ಕಡಿತ ಮತ್ತು ಪ್ರಾಥಮಿಕ ವರದಿ
ತನಿಖೆ ನಡೆಯುತ್ತಿರುವಾಗ ಊಹಾಪೋಹಗಳನ್ನು ಹರಡದಂತೆ AAIB ಮತ್ತು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಕೂಡ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
AAIB ಯ ಪ್ರಾಥಮಿಕ ವರದಿಯ ಪ್ರಕಾರ, ಬೋಯಿಂಗ್ 787 ಡ್ರೀಮ್‌ಲೈನರ್‌ನಲ್ಲಿ ಎರಡು ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ "ಕಟ್‌ಆಫ್" ಸ್ಥಾನಕ್ಕೆ ಬದಲಾಯಿಸಲಾಗಿತ್ತು. ಇದರಿಂದ ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತು ಹೋಗಿದೆ. ಸುಮಾರು 10 ಸೆಕೆಂಡುಗಳ ನಂತರ ಸ್ವಿಚ್‌ಗಳನ್ನು ಪುನಃಸ್ಥಾಪಿಸಲಾಗಿದ್ದರೂ, ವಿಮಾನವು ಈಗಾಗಲೇ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಯಿತು ಎಂಬ ವರದಿಗಳು ಬಿತ್ತರವಾಗಿದ್ದವು.
AAIB ಬಿಡುಗಡೆ ಮಾಡಿರುವ ಪ್ರಾಥಮಿಕ ವರದಿಯ ಪ್ರಕಾರ, ವಿಮಾನ ಹಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ಎರಡು ಇಂಧನ ನಿಯಂತ್ರಣ ಸ್ವಿಚ್‌ಗಳು "ಕಟ್‌ಆಫ್" ಸ್ಥಿತಿಗೆ ಬದಲಾಗಿದ್ದರಿಂದ ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತುಹೋಯಿತು. ಈ ತಪ್ಪನ್ನು ಸರಿಪಡಿಸಲು ಸ್ವಲ್ಪ ವಿಳಂಬವಾದ ಪರಿಣಾಮ ವಿಮಾನ ನಿಯಂತ್ರಣ ತಪ್ಪಿ ಅಪಘಾತವಾಯಿತು ಎಂದು ತಿಳಿದು ಬಂದಿದೆ.
ಕಾಕ್‌ಪಿಟ್ ಧ್ವನಿಮುದ್ರಣದ ಪ್ರಕಾರ, ಫ್ಲೈಟ್‌ನ ಮೊದಲ ಅಧಿಕಾರಿ ಕ್ಲೈವ್ ಕುಂದರ್, ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಅವರನ್ನು "ಇಂಧನ ಸ್ವಿಚ್‌ಗಳನ್ನು ಏಕೆ ಆಫ್ ಮಾಡಿದಿರಿ?" ಎಂದು ಕೇಳಿದಾಗ, ಅವರು "ನಾನು ಮಾಡಿಲ್ಲ" ಎಂದು ಪ್ರತಿಕ್ರಿಯಿಸಿದ್ದರು.
ಅಮೆರಿಕದ ಅಧಿಕಾರಿಗಳ ಮೂಲಗಳ ಪ್ರಕಾರ, ಪೈಲಟ್ ಸ್ವಯಂ ಸ್ವಿಚ್‌ಗಳನ್ನು ಆಫ್ ಮಾಡಿರುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. 'ವಾಲ್ ಸ್ಟ್ರೀಟ್ ಜರ್ನಲ್' ಇದನ್ನು ಪ್ರಕಟಿಸಿದ್ದು, AAIB ಈ ವರದಿಯನ್ನು "ಪೂರ್ಣ ಪರಿಶೀಲನೆ ಇಲ್ಲದ, ಆಯ್ದ ಮಾಧ್ಯಮ ವರದಿ" ಎಂದು ಟೀಕಿಸಿದೆ.
ಪ್ರಾಥಮಿಕ ವರದಿಯ ಉದ್ದೇಶ ಅಪಘಾತದ ಕಾರಣವನ್ನು ನಿರ್ಧರಿಸುವುದಲ್ಲ, ತನಿಖೆಯ ಪ್ರಾರಂಭಿಕ ಅಂಶಗಳನ್ನು ಹಂಚಿಕೊಳ್ಳುವುದಷ್ಟೆ. ಈ ಸಂದರ್ಭದಲ್ಲಿ ಎಲ್ಲ ಮಾಧ್ಯಮಗಳು ಮತ್ತು ಸಾರ್ವಜನಿಕರು ಅಧಿಕೃತ ಮಾಹಿತಿ ಹೊರಬರುವವರೆಗೆ ಸನ್ನಿಹಿತ ಮತ್ತು ಜವಾಬ್ದಾರಿಯುತ ವರದಿಗಳನ್ನು ನೀಡಬೇಕು ಎಂಬುದಾಗಿ ಸಂಸ್ಥೆಯು ಮನವಿ ಮಾಡಿದೆ.