No flaws in fuel control system of Air India Boeing 787 aircraft: Report
x

ಸಾಂದರ್ಭಿಕ ಚಿತ್ರ

ಏರ್ ಇಂಡಿಯಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷಗಳಿಲ್ಲ; ವರದಿ

ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ (DGCA) ಎಲ್ಲಾ ಏರ್‌ಲೈನ್ಸ್‌ಗಳಿಗೆ ತಮ್ಮ ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸುವಂತೆ ಸೂಚಿಸಿತ್ತು.


ಏರ್ ಇಂಡಿಯಾ ತನ್ನ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳ (FCS) ಲಾಕಿಂಗ್ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಯಾವುದೇ ದೋಷಗಳು ಕಂಡುಬಂದಿಲ್ಲ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಸಂಭವಿಸಿದ ಬೋಯಿಂಗ್ 787-8 ವಿಮಾನ ಅಪಘಾತದಲ್ಲಿ 260 ಮಂದಿ ಮೃತಪಟ್ಟ ನಂತರ, ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ (DGCA) ಎಲ್ಲಾ ಏರ್‌ಲೈನ್ಸ್‌ಗಳಿಗೆ ತಮ್ಮ ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸುವಂತೆ ಸೂಚಿಸಿತ್ತು. ಈ ಆದೇಶವು ಅಪಘಾತದ ಕುರಿತಾದ ಎಎಐಬಿ (AAIB) ಯ ಪ್ರಾಥಮಿಕ ವರದಿಯನ್ನು ಆಧರಿಸಿದೆ, ಅದರಲ್ಲಿ ಇಂಧನ ಸ್ವಿಚ್‌ಗಳು ಒಂದು ಸೆಕೆಂಡ್‌ನಲ್ಲಿ "ರನ್" ನಿಂದ "ಕಟ್‌ಆಫ್" ಸ್ಥಾನಕ್ಕೆ ಬದಲಾಗಿವೆ ಎಂದು ಉಲ್ಲೇಖಿಸಲಾಗಿತ್ತು.

"ಸೋಮವಾರ ನಮ್ಮ ಇಂಜಿನಿಯರಿಂಗ್ ತಂಡವು ಎಲ್ಲಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ (FCS) ಲಾಕಿಂಗ್ ವ್ಯವಸ್ಥೆಯ ಮೇಲೆ ಎಚ್ಚರಿಕೆಯ ಪರೀಕ್ಷೆಯನ್ನು ಪ್ರಾರಂಭಿಸಿತು. ಪರೀಕ್ಷೆಗಳು ಪೂರ್ಣಗೊಂಡಿದ್ದು, ಯಾವುದೇ ತೊಡಕುಗಳು ಕಂಡುಬಂದಿಲ್ಲ" ಎಂದು ಏರ್ ಇಂಡಿಯಾದ ಅಧಿಕಾರಿಯೊಬ್ಬರು ವಿಮಾನಯಾನ ಸಂಸ್ಥೆಯು ಪೈಲಟ್‌ಗಳಿಗೆ ಕಳುಹಿಸಿದ ಆಂತರಿಕ ಸಂದೇಶವನ್ನು ಉಲ್ಲೇಖಿಸಿ ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಎಲ್ಲಾ ಬೋಯಿಂಗ್ 787-8 ವಿಮಾನಗಳಲ್ಲಿ ಬೋಯಿಂಗ್ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ಥ್ರಾಟಲ್ ಕಂಟ್ರೋಲ್ ಮಾಡ್ಯೂಲ್ (TCM) ಅನ್ನು ಬದಲಾಯಿಸಲಾಗಿದೆ. ಎಫ್‌ಸಿಎಸ್ (FCS) ಈ ಮಾಡ್ಯೂಲ್‌ನ ಒಂದು ಭಾಗವಾಗಿದ್ದು, ವಿಮಾನದ ಎಂಜಿನ್‌ಗಳಿಗೆ ಇಂಧನ ಹರಿವನ್ನು ನಿಯಂತ್ರಿಸುತ್ತದೆ.

ಜೂನ್‌ನಲ್ಲಿ ಸಂಭವಿಸಿದ ಬೋಯಿಂಗ್ 787-8 ಅಪಘಾತದ ಕುರಿತು ಎಎಐಬಿ ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯಲ್ಲಿ, ವಿಮಾನದ ಎರಡೂ ಎಂಜಿನ್‌ಗಳಿಗೆ ಒಂದು ಸೆಕೆಂಡ್‌ನ ಅಂತರದಲ್ಲಿ ಇಂಧನ ಪೂರೈಕೆ ಕಡಿತಗೊಂಡಿದ್ದು, ಟೇಕ್‌ಆಫ್‌ನ ನಂತರ ತಕ್ಷಣವೇ ಕಾಕ್‌ಪಿಟ್‌ನಲ್ಲಿ ಗೊಂದಲ ಸೃಷ್ಟಿಸಿತು ಎಂದು ತಿಳಿಸಲಾಗಿದೆ. 15 ಪುಟಗಳ ತನಿಖಾ ವರದಿಯಲ್ಲಿ, ಎರಡೂ ಎಂಜಿನ್‌ಗಳ ಇಂಧನ ನಿಯಂತ್ರಣ ಸ್ವಿಚ್‌ಗಳು ಒಂದು ಸೆಕೆಂಡ್‌ನಲ್ಲಿ "ರನ್" ನಿಂದ "ಕಟ್‌ಆಫ್" ಸ್ಥಿತಿಗೆ ಚಲಿಸಿದ್ದು, ತಕ್ಷಣವೇ ವಿಮಾನ ಎತ್ತರ ಕಳೆದುಕೊಂಡಿತು ಎಂದು ವಿವರಿಸಲಾಗಿದೆ.

"ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ನಲ್ಲಿ ಒಬ್ಬ ಪೈಲಟ್ ಮತ್ತೊಬ್ಬರನ್ನು 'ನೀವೇಕೆ ಕಟ್‌ಆಫ್ ಮಾಡಿದಿರಿ?' ಎಂದು ಕೇಳಿದ್ದು, ಇನ್ನೊಬ್ಬರು 'ನಾನು ಮಾಡಿಲ್ಲ' ಎಂದು ಉತ್ತರಿಸಿದ್ದಾರೆ" ಎಂದು ವರದಿ ತಿಳಿಸಿದೆ. ಎಎಐಬಿ ತನ್ನ ವರದಿಯಲ್ಲಿ ಎಫ್‌ಎಎ (FAA) ನ ಎಸ್‌ಎಐಬಿ (SAIB) ಯನ್ನು ಉಲ್ಲೇಖಿಸಿದ್ದರೂ, ಯಾವುದೇ ಶಿಫಾರಸು ಕ್ರಮವನ್ನು ಸೂಚಿಸಿಲ್ಲ.

ವಿಮಾನಯಾನ ಸಂಸ್ಥೆಯು ತಮ್ಮ ಪೈಲಟ್‌ಗಳಿಗೆ ಎಚ್ಚರಿಕೆಯಿಂದ ಇರುವಂತೆ ಮತ್ತು ತಾಂತ್ರಿಕ ಲಾಗ್‌ನಲ್ಲಿ ಯಾವುದೇ ದೋಷ ಕಂಡುಬಂದರೆ ಅದನ್ನು ನಿಯಮಿತ ಪ್ರಕ್ರಿಯೆಯಂತೆ ವರದಿ ಮಾಡುವಂತೆ ಸೂಚಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Read More
Next Story