ಕೇಜ್ರಿವಾಲ್ ಜಾಮೀನಿಗೆ ಹೈಕೋರ್ಟ್ ತಡೆ: ಸುಪ್ರೀಂಗೆ ಮೇಲ್ಮನವಿ ನಿರ್ಧಾರ
ನವದೆಹಲಿ, ಜೂನ್ 25- ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನಿಗೆ ತಡೆ ನೀಡಿರುವ ದೆಹಲಿ ಹೈಕೋರ್ಟ್ ಆದೇಶ ವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಹೇಳಿದೆ.
ಕೇಜ್ರಿವಾಲ್‌ಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ರಜಾಕಾಲದ ಪೀಠ, ಜಾರಿ ನಿರ್ದೇಶನಾಲಯ ತನ್ನ ಮುಂದೆ ಇರಿಸಿರುವ ವಿಷಯವನ್ನು ಪರಿಶೀಲಿಸುವಲ್ಲಿ ವಿಚಾ ರಣಾ ನ್ಯಾಯಾಲಯ ವಿಫಲವಾಗಿದೆ. ಎಎಪಿ ನಾಯಕನ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ, ಸಮರ್ಪಕ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದೆ.
ವಿಚಾರಣಾ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ಪ್ರಕರಣವನ್ನು ವಾದಿಸಲು ಅವಕಾಶ ನೀಡಬೇಕಿತ್ತು ಎಂದು ನ್ಯಾಯಾಧೀಶರು ಹೇಳಿದರು.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಎಎಪಿ, ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ಹೇಳಿದೆ. ʻದಿಲ್ಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆʼ ಎಂದು ಹೇಳಿದೆ.
ವಿಚಾರಣಾ ನ್ಯಾಯಾಲಯವು ಜೂನ್ 20 ರಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿತ್ತು ಮತ್ತು 1 ಲಕ್ಷ ರೂ. ವೈಯಕ್ತಿಕ ಬಾಂಡ್ ನಲ್ಲಿ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಆದರೆ, ಜಾರಿ ನಿರ್ದೇಶನಾಲಯ ಮರುದಿನ ಹೈಕೋರ್ಟ್‌ನಲ್ಲಿ ಈ ಆದೇಶವನ್ನು ಪ್ರಶ್ನಿಸಿತು.