ಪ್ಯಾಲೆಸ್ತೀನ್ಗೆ ರಾಷ್ಟ್ರದ ಮಾನ್ಯತೆ: ವಿಶ್ವಸಂಸ್ಥೆ ನಿರ್ಣಯದ ಪರವಾಗಿ ಭಾರತ ಮತ
ಶುಕ್ರವಾರ ನಡೆದ ಮತದಾನದಲ್ಲಿ, 193 ಸದಸ್ಯ ರಾಷ್ಟ್ರಗಳ ಪೈಕಿ 142 ದೇಶಗಳು "ನ್ಯೂಯಾರ್ಕ್ ಘೋಷಣೆ"ಯನ್ನು ಅನುಮೋದಿಸುವ ಈ ನಿರ್ಣಯದ ಪರವಾಗಿ ಮತ ಚಲಾಯಿಸಿದವು.;
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳ ನಡುವೆ ಬೀಟ್ ಲಾಹಿಯಾದಿಂದ ಪಲಾಯನ ಮಾಡುತ್ತಿರುವ ಪ್ಯಾಲೆಸ್ಟೀನಿಯನ್ನರು
ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಕೊನೆಗೊಳಿಸಿ, ದ್ವಿ-ರಾಷ್ಟ್ರ ಪರಿಹಾರ ಬೆಂಬಲಿಸುವ ವಿಶ್ವಸಂಸ್ಥೆಯ ಮಹಾಧಿವೇಶನದ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ತೀವ್ರ ವಿರೋಧದ ನಡುವೆಯೂ, ಪ್ಯಾಲೆಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಬದ್ಧವಾಗಿರುವಂತೆ ಇಸ್ರೇಲ್‌ಗೆ ಒತ್ತಾಯಿಸುವ ಈ ನಿರ್ಣಯಕ್ಕೆ ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಬೆಂಬಲ ಸೂಚಿಸಿವೆ.
ಶುಕ್ರವಾರ ನಡೆದ ಮತದಾನದಲ್ಲಿ, 193 ಸದಸ್ಯ ರಾಷ್ಟ್ರಗಳ ಪೈಕಿ 142 ದೇಶಗಳು "ನ್ಯೂಯಾರ್ಕ್ ಘೋಷಣೆ"ಯನ್ನು ಅನುಮೋದಿಸುವ ಈ ನಿರ್ಣಯದ ಪರವಾಗಿ ಮತ ಚಲಾಯಿಸಿದವು. 10 ದೇಶಗಳು ವಿರುದ್ಧವಾಗಿ ಮತ ಹಾಕಿದರೆ, 12 ದೇಶಗಳು ಮತದಾನದಿಂದ ದೂರ ಉಳಿದವು. ಸುಮಾರು 80 ವರ್ಷಗಳಷ್ಟು ಹಳೆಯದಾದ ಈ ಸಂಘರ್ಷವನ್ನು ಹಂತಹಂತವಾಗಿ ಕೊನೆಗೊಳಿಸುವ ಯೋಜನೆಯನ್ನು ಈ ಘೋಷಣೆ ಒಳಗೊಂಡಿದೆ.
ನಿರ್ಣಯಕ್ಕೆ ಇಸ್ರೇಲ್, ಅಮೆರಿಕ ವಿರೋಧ
ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ಮಾತನಾಡಿದ್ದ ಇಸ್ರೇಲ್ ಪ್ರಧಾನಿ ನೆತನ್ಯಾಹು, "ಪ್ಯಾಲೆಸ್ತೀನ್ ರಾಷ್ಟ್ರ ಎಂದಿಗೂ ಅಸ್ತಿತ್ವಕ್ಕೆ ಬರುವುದಿಲ್ಲ. ಈ ಸ್ಥಳ ನಮಗೆ ಸೇರಿದ್ದು," ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.
ಇಸ್ರೇಲ್‌ನ ಆಪ್ತ ರಾಷ್ಟ್ರವಾದ ಅಮೆರಿಕ ಕೂಡ ಈ ನಿರ್ಣಯವನ್ನು ವಿರೋಧಿಸಿದೆ. "ಈ ನಿರ್ಣಯವು ಹಮಾಸ್‌ಗೆ ನೀಡಿದ ಉಡುಗೊರೆ. ಇದು ಸಂಘರ್ಷವನ್ನು ಕೊನೆಗೊಳಿಸುವ ಗಂಭೀರ ರಾಜತಾಂತ್ರಿಕ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ" ಎಂದು ಅಮೆರಿಕದ ಪ್ರತಿನಿಧಿ ಮೋರ್ಗಾನ್ ಒರ್ಟಾಗಸ್ ಹೇಳಿದ್ದಾರೆ.
ನ್ಯೂಯಾರ್ಕ್ ಘೋಷಣೆಯಲ್ಲೇನಿದೆ?
ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ನೇತೃತ್ವದಲ್ಲಿ ಜುಲೈನಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನದಲ್ಲಿ "ನ್ಯೂಯಾರ್ಕ್ ಘೋಷಣೆ"ಯನ್ನು ಅಂಗೀಕರಿಸಲಾಗಿತ್ತು. ಈ ಘೋಷಣೆಯು 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ಖಂಡಿಸುತ್ತದೆ. ಇದೇ ವೇಳೆ, ಇಸ್ರೇಲ್‌ನ ಪ್ರತೀಕಾರದ ಕಾರ್ಯಾಚರಣೆಯನ್ನೂ ಟೀಕಿಸುತ್ತದೆ. ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ನ ರಾಯಭಾರಿ ರಿಯಾದ್ ಮನ್ಸೂರ್, ಈ ನಿರ್ಣಯಕ್ಕೆ ಸಿಕ್ಕಿರುವ ಬೆಂಬಲ "ಶಾಂತಿಯ ಬಾಗಿಲು ತೆರೆಯಲು ಅಂತರಾಷ್ಟ್ರೀಯ ಸಮುದಾಯಕ್ಕಿರುವ ಹಂಬಲವನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ. ಆದರೆ, ಇಸ್ರೇಲ್‌ನ ರಾಯಭಾರಿ ಡ್ಯಾನಿ ಡಾನೊನ್ ಇದನ್ನು "ನಾಟಕ" ಎಂದು ತಳ್ಳಿಹಾಕಿದ್ದು, ಇದರಿಂದ ಹಮಾಸ್‌ಗೆ ಮಾತ್ರ ಲಾಭವಾಗಲಿದೆ ಎಂದಿದ್ದಾರೆ.