ಮೋದಿ 3.0: ಒಂದು ತಿಂಗಳಲ್ಲಿ 4 ನಿರ್ಧಾರ ವಾಪಸು
ವಿರೋಧ ಪಕ್ಷಗಳು ಮಾತ್ರವಲ್ಲದೆ ಬಿಜೆಪಿಯ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಲ್ಯಾಟರಲ್ ಎಂಟ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ನಿರ್ಧಾರ ವಾಪಸ್ ತೆಗೆದುಕೊಳ್ಳಬೇಕಾಗಿ ಬಂದಿತು.;
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ಸರ್ಕಾರದ ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಕುರಿತ ಜಾಹೀರಾತು ಹಿಂಪಡೆಯು ವಂತೆ ಕೇಂದ್ರ ಕೇಳಿಕೊಂಡಿದೆ. ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಒಂದು ತಿಂಗಳಲ್ಲಿ ನಾಲ್ಕನೇ ನಿರ್ಧಾರವನ್ನು ಬದಲಿಸಬೇಕಾಗಿ ಬಂದಿದೆ.
ಲ್ಯಾಟರಲ್ ಎಂಟ್ರಿಯು ಕೇಂದ್ರ ಸರ್ಕಾರದ ಸ್ಥಾನಗಳಲ್ಲಿ ಮೀಸಲು ತಪ್ಪಿಸಲು ಒಂದು ಮಾರ್ಗ ಎಂದು ಪ್ರತಿಪಕ್ಷಗಳು ತರಾಟೆ ತೆಗೆದುಕೊಂಡವು. ಕೇಂದ್ರ ಆರಂಭದಲ್ಲಿ ಬಿಗಿ ನಿಲುವು ತಳೆಯಿತು. ಆದರೆ, ವಿರೋಧ ಪಕ್ಷಗಳು ಮತ್ತು ಕೆಲವು ಪ್ರಮುಖ ಪಾಲುದಾರರ ಒತ್ತಡದಿಂದ ಒಂದು ನಂತರ ಪಟ್ಟುಸಡಿಲಿಸಬೇಕಾಯಿತು.
ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ: ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮದ ಮೇಲಿನ ನಿರ್ಬಂಧ ಕುರಿತ ಕಳವಳಗಳ ನಡುವೆ ಪ್ರಸಾರ ಮಸೂದೆಯ ಹೊಸ ಕರಡು ತಯಾರಿಸಲು ಹೆಚ್ಚಿನ ಸಮಾಲೋಚನೆ ನಡೆಸುವುದಾಗಿ ಸರ್ಕಾರ ಕಳೆದ ವಾರ ಹೇಳಿದೆ.
ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆಯ ಕರಡು ಡಿಜಿಪಬ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದಂತಹ ಮಾಧ್ಯಮ ಸಂಸ್ಥೆಗಳಿಂದ ಟೀಕೆಗೆ ಗುರಿಯಾಯಿತು. ʻಸಚಿವಾಲಯವು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆಗಳ ಸರಣಿ ನಡೆಸುತ್ತಿದೆ. 15ನೇ ಅಕ್ಟೋಬರ್ 2024 ರವರೆಗೆ ಆಕ್ಷೇಪ/ಸಲಹೆ ಸ್ವೀಕರಿಸಲಾಗುತ್ತದೆ,ʼ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.
ವಕ್ಫ್ (ತಿದ್ದುಪಡಿ) ಮಸೂದೆ, 2024: ತಿಂಗಳ ಆರಂಭದಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2024 ರಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಿತು . ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8 ರಂದು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿದವು. ಕೆಲವೇ ಗಂಟೆಗಳಲ್ಲಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲು ಸರ್ಕಾರ ನಿರ್ಧರಿಸಿತು.
ವಿಧೇಯಕವು ಅಸಾಂವಿಧಾನಿಕ. ಮುಸ್ಲಿಂ ಪೂಜಾ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಮಸೂದೆಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮತ್ತು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಇಂಡಿಯಾ ಒಕ್ಕೂಟದ ಪಕ್ಷಗಳು ಆರೋಪಿಸಿದವು.
ಟಿಡಿಪಿ, ಜನಸೇನಾ ಪಾರ್ಟಿ (ಜೆಎಸ್‌ಪಿ) ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಸೇರಿದಂತೆ ಹಲವು ಮಿತ್ರಪಕ್ಷಗಳು ಕೂಲಂಕಷ ಸಮಾಲೋಚನೆಯಿಲ್ಲದೆ ಮುಂದುವರಿಯಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿವೆ ಎಂದು ಮೂಲಗಳು ಹೇಳಿವೆ.
ಇಂಡೆಕ್ಸೇಶನ್ ಪ್ರಯೋಜನ ವಾಪಸು: ಜುಲೈ 23, 2024ರ ಮೊದಲು ಖರೀದಿಸಿದ ಆಸ್ತಿ ಮಾರಾಟದ ಮೇಲೆ ಸೂಚ್ಯಂಕ ಪ್ರಯೋಜನ ದೊಂದಿಗೆ ಶೇ.20 ಎಲ್‌ಟಿಜಿಸಿ ತೆರಿಗೆ ಪಾವತಿಸುವ ಆಯ್ಕೆಯನ್ನು ತೆರಿಗೆದಾರರಿಗೆ ನೀಡಲು ನಿರ್ಧರಿಸುವ ಮೂಲಕ ತಿಂಗಳ ಆರಂಭದಲ್ಲಿ ಹಿಂದೆ ಸರಿಯಿತು.
ದೀರ್ಘಾವಧಿಯ ಬಂಡವಾಳ ಲಾಭ (ಎಲ್‌ಟಿಸಿಜಿ) ಮೇಲೆ ಸೂಚ್ಯಂಕ ಪ್ರಯೋಜನ ತೆಗೆದುಹಾಕುವ ಕೇಂದ್ರ ಬಜೆಟ್ ಪ್ರಸ್ತಾಪಕ್ಕೆ ಕೆಲವು ವಲಯಗಳಿಂದ ಆಕ್ರೋಶ ಮತ್ತು ಕಳವಳ ವ್ಯಕ್ತವಾಗಿತ್ತು. ಹಣಕಾಸು ಮಸೂದೆಯಲ್ಲಿ ಮಂಡಿಸಿದ ತಿದ್ದುಪಡಿಗಳ ಪಟ್ಟಿ ಪ್ರಕಾರ, ಎಲ್‌ಟಿಸಿಜಿ ಮೇಲಿನ ತೆರಿಗೆಯನ್ನು ಶೇ.12.5 ರಷ್ಟು ಕಡಿಮೆ ದರದಲ್ಲಿ ಸೂಚ್ಯಂಕವಿಲ್ಲದೆ ಪಾವತಿಸುವ ಆಯ್ಕೆ ತೆರಿಗೆದಾರರಿಗೆ ಲಭ್ಯವಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ತೆರಿಗೆದಾರರು ಎರಡು ಆಯ್ಕೆಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಬಹುದು. ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಹಿಂಪಡೆಯುವಿಕೆ ಎಂದು ಪರಿಗಣಿಸಲಾಗಿದೆ.