Operation Sindoor | 100 ಉಗ್ರರು, 40 ಸೈನಿಕರು, 700 ಡ್ರೋನ್‌, ಉಗ್ರರ ನೆಲೆ, ಪಾಕ್‌ ವಾಯುನೆಲೆ ಧ್ವಂಸ; ಸಿಂದೂರ್‌ ಕಾರ್ಯಾಚರಣೆ ವಿವರ ನೀಡಿದ ಡಿಜಿಎಂಒ

ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಯಿತು. ದಾಳಿಯಲ್ಲಿ ಜೆಇಎಂ, ಲಷ್ಕರ್‌ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ.;

Update: 2025-05-11 15:10 GMT

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಲ್ಲಿ  100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾಹಿತಿ ನೀಡಿದ್ದಾರೆ.

ನವದೆಹಲಿಯಲ್ಲಿ ಮಹತ್ವದ ಮಾಧ್ಯಮಗೋಷ್ಠಿ ನಡೆಸಿ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯ ಉದ್ದೇಶ, ಕಾರ್ಯಾಚರಣೆಯ ಯಶಸ್ಸು ಹಾಗೂ ಉಗ್ರರ ನಿಗ್ರಹಕ್ಕೆ ಕೈಗೊಂಡ ಕ್ರಮಗಳ ಕುರಿತು ವಿವರಿಸಿದಾರೆ.

ಏ.22 ರಂದು ಪಹಲ್ಗಾಮ್‌ ದಾಳಿಯಲ್ಲಿ ಭಾರತದ 26 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಉಗ್ರರ ವಿರುದ್ಧ ಕಾರ್ಯಾಚರಣೆಗಾಗಿ ಮೇ 7 ರಿಂದ ಆರಂಭಿಸಿದ ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಯಿತು. ದಾಳಿಯಲ್ಲಿ ಜೆಇಎಂ, ಲಷ್ಕರ್‌ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ಭಯೋತ್ಪಾದಕರಾದ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್, ಮುದಾಸಿರ್ ಅಹ್ಮದ್ ಸೇರಿದಂತೆ ಒಟ್ಟು ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಅಲ್ಲದೇ ಉಗ್ರ ನೆಲೆಗಳ ಮೂಲಸೌಕರ್ಯಗಳನ್ನು ನಾಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

21 ಉಗ್ರರ ನೆಲೆಗಳ ಪತ್ತೆ, 9 ಧ್ವಂಸ

ಉಗ್ರರ ವಿರುದ್ಧ ಕಾರ್ಯಾಚರಣೆಗೂ ಮುನ್ನ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿ ಒಟ್ಟು 21 ಉಗ್ರರ ನೆಲೆಗಳನ್ನು ಪತ್ತೆ ಮಾಡಲಾಯಿತು. ಇವುಗಳಲ್ಲಿ 9 ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ನಿಖರ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ರಾಜೀವ್ ಘಾಯ್ ಅವರು ವಿವರಿಸಿದ್ದಾರೆ .

40 ಪಾಕ್‌ ಸೈನಿಕರ ಹತ್ಯೆ

ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದೆ. ಪಾಕ್‌ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಮೇ 7 ಮತ್ತು 10 ರ ನಡುವೆ ಎರಡೂ ಕಡೆ ನಡೆದ ಮಿಲಿಟರಿ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 35 ರಿಂದ 40 ಸೈನಿಕರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಸೇನಾಧಿಕಾರಿಗಳು ಸೇರಿದ್ದಾರೆ ಎಂದು ಹೇಳಿದ್ದಾರೆ.

ಪಾಕ್‌ ನಾಗರಿಕರಿಗೆ ತೊಂದರೆ ಮಾಡಿಲ್ಲ

ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಹಾಗೂ ಪಾಕ್‌ ದಾಳಿಗೆ ಕೈಗೊಂಡ ಪ್ರತಿ ದಾಳಿಯಲ್ಲಿ ಭಾರತ ಯಾವುದೇ ಪಾಕ್‌ ನಾಗರಿಕರನ್ನು ಗುರಿಯಾಗಿಸಿಲ್ಲ. ಭಾರತದ ದಾಳಿಯ ವೇಳೆ ಪಾಕಿಸ್ತಾನದ ನಾಗರಿಕ ವಿಮಾನಗಳು ಹಾರಾಟ ಮಾಡುತ್ತಿದ್ದವು. ಆದರೆ, ಅವರಿಗೆ ನಾವು ಯಾವುದೇ ತೊಂದರೆ ಮಾಡಿಲ್ಲ. ಆದರೆ, ಪಾಕಿಸ್ತಾನ ನಮ್ಮ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನದ 700 ಡ್ರೋನ್‌ ಧ್ವಂಸ

ಉಗ್ರ ನೆಲೆಗೆ ಮೇಲೆ ಕಾರ್ಯಾಚರಣೆ ನಡೆಸಿದ ಬಳಿಕ ಪಾಕಿಸ್ತಾನವು ಭಾರತದ ಮೇಲೆ 700ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಆದರೆ, ಆ ಎಲ್ಲಾ ಪ್ರಯತ್ನಗಳನ್ನು ಭಾರತೀಯ ಸೇನೆ ವಿಫಲಗೊಳಿಸಿ, ಡ್ರೋನ್‌ಗಳನ್ನು ಧ್ವಂಸ ಮಾಡಿದೆ. ಲಾಹೋರ್‌ನಲ್ಲಿರುವ ರಾಡಾರ್‌ ವ್ಯವಸ್ಥೆಯನ್ನೂ ನಾಶ ಮಾಡಲಾಗಿದೆ ಎಂದು ವಾಯುಪಡೆಯ ಏರ್ ಮಾರ್ಷಲ್‌ ಎ.ಕೆ.ಭಾರ್ತಿ ತಿಳಿಸಿದ್ದಾರೆ.

ಪಾಕಿಸ್ತಾನದ ವಾಯುನೆಲೆ ಹಾಗೂ ಉಗ್ರರ ನೆಲೆಗಳ ಮೇಲೆ ನಡೆಸಿದ ಪ್ರತಿ ದಾಳಿಗೆ ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದಾರೆ.

ಮುರಿದ್ಕೆಯಲ್ಲಿ ಭಾರತದ ವಾಯುದಾಳಿಗೆ ಉಗ್ರರ ನಾಲ್ಕು ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅಲ್ಲದೇ ಮೂಲಸೌಕರ್ಯ ನಾಶಪಡಿಸಲಾಗಿದೆ. ಇದರ ಜೊತೆಗೆ ಪಾಕಿಸ್ತಾನದ ಅಪ್ರಚೋದಿತ ದಾಳಿ ನಂತರ ನಡೆಸಿದ ಪ್ರತಿದಾಳಿಯಲ್ಲಿ ನೂರ್‌ ಖಾನ್‌, ಮುರಿದ್‌, ರಫಿಕಿ, ರಹ್ಮಯಾರ್‌ ವಾಯುನೆಲೆಯನ್ನು ಧ್ವಂಸ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

Tags:    

Similar News