ಸಿಎಎ ಅನುಷ್ಠಾನಕ್ಕೆ ತಡೆ ಇಲ್ಲ: ಸುಪ್ರೀಂ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಕಾನೂನು ಪ್ರಶ್ನಿಸಿ ಸಲ್ಲಿಕೆಯಾದ 237 ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಮೂರು ವಾರ ಕಾಲಾವಕಾಶ ನೀಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಕಾನೂನು ಪ್ರಶ್ನಿಸಿ ಸಲ್ಲಿಕೆಯಾದ 237 ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಮೂರು ವಾರ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಏಪ್ರಿಲ್ 8ಕ್ಕೆ ಮೊದಲು ಯಾವುದೇ ವ್ಯಕ್ತಿ ಈ ಕಾನೂನಿನಡಿಯಲ್ಲಿ ಪೌರತ್ವ ಪಡೆದಿದ್ದರೆ, ಸಂಪರ್ಕಿಸಲು ಅವಕಾಶ ನೀಡಿದರು. ಇದೇ ಹೊತ್ತಿನಲ್ಲಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಇಂದಿರಾ ಜೈಸಿಂಗ್ ಅವರ ಮನವಿ ಸಲ್ಲಿಕೆಯಾಯಿತು.
ಮೆಹ್ತಾ ಅವರಿಂದ ಕಾಲಾವಕಾಶ ಕೋರಿಕೆ: ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ನಾಲ್ಕು ವಾರ ಕಾಲಾವಕಾಶ ಕೋರಿದರು. ʻ237 ಅರ್ಜಿಗಳ ಅರ್ಹತೆ ಕುರಿತು ವಿವರವಾದ ಅಫಿಡವಿಟ್ ಸಲ್ಲಿಸಬೇಕಿದೆ. ಇಪ್ಪತ್ತು ಮಧ್ಯಂತರ ಅರ್ಜಿಗಳು ಈಗಾಗಲೇ ಸಲ್ಲಿಕೆಯಾಗಿವೆ ಮತ್ತು ಇನ್ನಷ್ಟು ಸಲ್ಲಿಕೆಯಾಗಲಿವೆ. ನಮಗೆ ನಾಲ್ಕು ವಾರ ಕಾಲಾವಕಾಶ ಅಗತ್ಯವಿದೆ,ʼ ಎಂದು ತಿಳಿಸಿದರು.
ಅರ್ಜಿದಾರರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಮತ್ತು ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಸೇರಿದ್ದಾರೆ.
ತಾರತಮ್ಯ ಕಾಯಿದೆ: ಮುಸ್ಲಿಂ ಸಮುದಾಯಕ್ಕೆ ತಾರತಮ್ಯ ನೀತಿ ಅನುಸರಿಸುವ ಸಿಎಎ ಅನುಷ್ಠಾನಕ್ಕೆ ಕೂಡದು ಎಂದು ಅರ್ಜಿದಾರರು ಕೋರಿದ್ದರು. 2019ರಲ್ಲಿ ಸಂಸತ್ತು ಮಸೂದೆಯನ್ನು ಅಂಗೀಕರಿಸಿದ ನಂತರ, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಪ್ರಕರಣ ಗಳನ್ನು ಎದುರಿಸಬೇಕಾಯಿತು. ನಿಯಮ ಕುರಿತು ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಿಎಎ ಅನುಷ್ಠಾನ ಸ್ಥಗಿತಗೊಳಿಸಲಿಲ್ಲ. ಆದರೆ, ಲೋಕಸಭೆ ಚುನಾವಣೆ ಘೋಷಣೆಗೆ ಮುನ್ನ ಕಳೆದ ವಾರ ನಿಯಮ ಪ್ರಕಟಿಸಲಾಗಿತ್ತು. ಚುನಾವಣೆಗೂ ಮುನ್ನವೇ ನಿಯಮಗಳ ಅಧಿಸೂಚನೆ ಹೊರಡಿಸಿರುವುದು ಅಪ್ರಸ್ತುತ ಎಂದು ತುಷಾರ್ ಮೆಹ್ತಾ ಹೇಳಿದರು.
ಸುಪ್ರೀಂ ಕೋರ್ಟ್ ಏಪ್ರಿಲ್ 9 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.