ಶ್ರೀನಗರ, ಜೂನ್ 4- ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಇತಿಹಾಸದಲ್ಲಿ ಅತಿ ದೊಡ್ಡ ಬದಲಾವಣೆಯೊಂದರಲ್ಲಿ ಮಾಜಿ ಶಾಸಕ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ಅವರು ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ. ಇನ್ನೊಬ್ಬರು ಮಾಜಿ ಮುಖ್ಯಮಂತ್ರಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಅನಂತನಾಗ್-ರಜೋರಿ ಕ್ಷೇತ್ರದಲ್ಲಿ ಹಿನ್ನಡೆ ಹೊಂದಿದ್ದಾರೆ.
ಯುಎಪಿಎ ಅಡಿ ದಾಖಲಾದ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ರಶೀದ್(56), ಚುನಾವಣೆಯಲ್ಲಿ ಒಮರ್ ಅವರನ್ನು ಹಿಂದೆ ತಳ್ಳಿದ್ದಾರೆ. ಸಜಾದ್ ಗನಿ ಲೋನೆ ಮೂರನೇ ಸ್ಥಾನಕ್ಕೆ ಹೋಗಿದ್ದಾರೆ. 2019 ರಲ್ಲಿ ಬಂಧಿಸಲ್ಪಟ್ಟ ರಶೀದ್, ಯುಎಪಿಎ ಅಡಿ ಬಂಧನಕ್ಕೊಳಗಾದ ಮೊದಲ ಮುಖ್ಯವಾಹಿನಿಯ ರಾಜಕಾರಣಿ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ 2008 ರಲ್ಲಿ ಲ್ಯಾಂಗೇಟ್ ವಿಭಾಗದಿಂದ ಮೊದಲ ಬಾರಿಗೆ 2014 ರಲ್ಲಿ ಮರು ಆಯ್ಕೆಯಾದರು.
ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಲ್ಲಿ ಎಣಿಕೆಗೆ 1.5 ಲಕ್ಷ ಮತಗಳು ಉಳಿದಿವೆ. ಸ್ವತಂತ್ರ ಅಭ್ಯರ್ಥಿ ರಶೀದ್ ಅವರು ಅಬ್ದುಲ್ಲಾ ಅವರಿಗಿಂತ 1.84 ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ. ʻಸೋಲು ಒಪ್ಪಿಕೊಳ್ಳುವ ಸಮಯ ಬಂದಿದೆ. ಗೆಲುವಿಗಾಗಿ ರಶೀದ್ ಅವರಿಗೆ ಅಭಿನಂದನೆಗಳು,ʼ ಎಂದು ಒಮರ್ ಟ್ವೀಟ್ ಮಾಡಿದ್ದಾರೆ.
ರಶೀದ್ ಅವರ ಮಗ, ಅಬ್ರಾರ್, ತಂದೆ ಪರವಾಗಿ ವ್ಯಾಪಕ ಪ್ರಚಾರ ಮಾಡಿದರು. ʻನಮ್ಮ ಅಭಿಯಾನವನ್ನು ಬೆಂಬಲಿಸುವುದು ಮಾತ್ರವಲ್ಲದೆ, ತಮ್ಮ ಪ್ರೀತಿಯನ್ನು ಧಾರೆ ಎರೆದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನಮಗೆ ಸೋಲು-ಗೆಲುವು ಮುಖ್ಯವಲ್ಲ; ಮುಖ್ಯವಾದುದು ನಾವು ಜನರಿಂದ ಪಡೆದ ಪ್ರೀತಿ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಫ್ತಿ ಅಪಜಯ: ಜಮ್ಮು ಮತ್ತು ಕಾಶ್ಮೀರದ ರಾಜಕೀಯದ ಮತ್ತೊಬ್ಬ ಪ್ರಮುಖ ರಾಜಕಾರಣಿ ಮುಫ್ತಿ ಅವರು ಅನಂತನಾಗ್-ರಜೌರಿ ಲೋಕಸಭೆ ಕ್ಷೇತ್ರದಲ್ಲಿ ಎನ್‌ಸಿ ಅಭ್ಯರ್ಥಿ ಮಿಯಾನ್ ಅಲ್ತಾಫ್ ಅಹ್ಮದ್ ಅವರಿಗಿಂತ 2.78 ಲಕ್ಷಕ್ಕೂ ಹೆಚ್ಚು ಮತಗಳಿಂದ ಹಿಂದುಳಿದರು. ಕೆಲವು ಸಾವಿರ ಮತಗಳ ಎಣಿಕೆ ಬಾಕಿ ಉಳಿದಿದೆ.
ಎನ್‌ಸಿ ನಾಯಕ ಅಗಾ ರೂಹುಲ್ಲಾ ಮೆಹದಿ ಅವರು ಶ್ರೀನಗರ ಲೋಕಸಭಾ ಕ್ಷೇತ್ರದಿಂದ ಪಿಡಿಪಿಯ ವಹೀದ್ ಪಾರಾ ಅವರಿಗಿಂತ 1.62 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ.