ಶ್ರೀಜೇಶ್ ಜೂನಿಯರ್ ಹಾಕಿ ತಂಡದ ಕೋಚ್

ʻಶ್ರೀಜೇಶ್ ಅವರನ್ನು ಪುರುಷರ ಜೂನಿಯರ್ ತಂಡದ ಕೋಚ್ (21 ವರ್ಷದೊಳಗಿನವರು) ಆಗಿ ನೇಮಿಸುತ್ತೇವೆ. ಯುವಕರಿಗೆ ಮಾರ್ಗದರ್ಶನ ಮತ್ತು ಪೋಷಣೆಗೆ ಅವರಿಗಿಂತ ಉತ್ತಮರು ಯಾರೂ ಇಲ್ಲ,ʼ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ಹೇಳಿದ್ದಾರೆ.;

Update: 2024-08-10 07:06 GMT

ನವದೆಹಲಿ: 'ಭಾರತೀಯ ಹಾಕಿಯ ಮಹಾಗೋಡೆ' ಪಿ.ಆರ್. ಶ್ರೀಜೇಶ್ ಅವರನ್ನು ಜೂನಿಯರ್ ರಾಷ್ಟ್ರೀಯ ತಂಡದ ಕೋಚ್ ಆಗಿ ಘೋಷಿಸಲು ಹಾಕಿ ಇಂಡಿಯಾ ನಿರ್ಧರಿಸಿದೆ. 

ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ ಜಯ ಗಳಿಸಿದ ನಂತರ ಶ್ರೀಜೇಶ್(36), ತಮ್ಮ ಸುಪ್ರಸಿದ್ಧ ಗೋಲ್‌ಕೀಪಿಂಗ್ ವೃತ್ತಿಜೀವನಕ್ಕೆ ತೆರೆ ಎಳೆದರು. 

ಅವರ 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತ ಎರಡು ಒಲಿಂಪಿಕ್ ಕಂಚಿನ ಪದಕ (2020 ಟೋಕಿಯೊ ಮತ್ತು 2024 ಪ್ಯಾರಿಸ್) ಗೆದ್ದುಕೊಂಡಿದೆ.ಅವರನ್ನು ದೇಶದ ಅತ್ಯುತ್ತಮ ಹಾಕಿ ಗೋಲ್‌ಕೀಪರ್ ಎಂದು ಪರಿಗಣಿಸಲಾಗಿದೆ. 

ʻಕೆಲವೇ ದಿನಗಳಲ್ಲಿ ನಾವು ಶ್ರೀಜೇಶ್ ಅವರನ್ನು ಪುರುಷರ ಜೂನಿಯರ್ ತಂಡದ ಕೋಚ್ (21 ವರ್ಷದೊಳಗಿನವರು) ಆಗಿ ನೇಮಿಸುತ್ತೇವೆ. ನಾವು ಅವರೊಂದಿಗೆ ಚರ್ಚಿಸಿದ್ದೇವೆ. ಯುವಕರಿಗೆ ಮಾರ್ಗದರ್ಶನ ಮತ್ತು ಪೋಷಣೆಗೆ ಅವರಿಗಿಂತ ಉತ್ತಮರು ಯಾರೂ ಇಲ್ಲ,ʼ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ಹೇಳಿದ್ದಾರೆ.

ʻಅವರು ತಮ್ಮ ಅಸಾಧಾರಣ ಸಾಮರ್ಥ್ಯವನ್ನು ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ತೋರಿಸಿದರು. ಶ್ರೀಜೇಶ್ ಅವರು ಹಿರಿಯರ ತಂಡದ ಗೋಲ್‌ಕೀಪರ್‌ಗಳಾದ ಕ್ರಿಶನ್ ಬಹದ್ದೂರ್ ಪಾಠಕ್ ಮತ್ತು ಸೂರಜ್ ಕರ್ಕೇರಾ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ನಾವು ಬಯಸುತ್ತೇವೆ. ಶ್ರೀಜೇಶ್ ಅಪಾರ ಅನುಭವ ಹೊಂದಿದ್ದಾರೆ ಮತ್ತು ಆಟದ ತಂತ್ರಗಳನ್ನು ತಿಳಿದಿದ್ದಾರೆ,ʼ ಎಂದು ಟಿರ್ಕೆ ಹೇಳಿದರು.

ʻ2025ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಪುರುಷರ ಜೂನಿಯರ್ ವಿಶ್ವಕಪ್‌ನಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲು ಮತ್ತು ಪ್ರೇರೇಪಿಸಲು ಶ್ರೀಜೇಶ್ ನಿರ್ಣಾಯಕ ಆಗಲಿದ್ದಾರೆ. ಹಿಂದೆ ಅವರು ಜೂನಿಯರ್ ತಂಡಕ್ಕೆ ಸಹಾಯ ಮಾಡಿದ್ದಾರೆ,ʼ ಎಂದು ಟಿರ್ಕೆ ಹೇಳಿದರು.

ತೃಪ್ತಿಕರ ಪ್ರದರ್ಶನ: ʻಪ್ಯಾರಿಸ್‌ನಲ್ಲಿ ಭಾರತ ಹಾಕಿ ತಂಡದ ಪ್ರದರ್ಶನದ ಬಗ್ಗೆ ತೃಪ್ತಿಯಿದೆ. ತಂಡವು ಘಟಕದಂತೆ ಆಡುತ್ತದೆ. ಚಿನ್ನದ ಪದಕ ನಮ್ಮ ಗುರಿಯಾಗಿದ್ದರೂ, ಟೋಕಿಯೊ 2021ರ ಪ್ರದರ್ಶನವನ್ನು ಪುನರಾವರ್ತಿಸಿದ್ದೇವೆ. ಕಂಚಿನ ಪದಕ ಚಿನ್ನದಷ್ಟೇ ಉತ್ತಮವಾಗಿದೆ. ತಂಡವು ಅತ್ಯುತ್ತಮ ಆಡಿತು ಮತ್ತು ಆಟಗಾರರಲ್ಲಿ ಏಕತೆ ಇತ್ತು. ಅದು ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಗೋಚರಿಸಿತು,ʼ ಎಂದು ಅವರು ಸೇರಿಸಿದರು. 

Tags:    

Similar News