Paris Paralympics | ನಿತೇಶ್, ಅಂಟಿಲ್ ಅವರಿಗೆ ಚಿನ್ನ; ಭಾರತಕ್ಕೆ ಒಂದೇ ದಿನ 8 ಪದಕ

ಡಿಸ್ಕಸ್ ಎಸೆತಗಾರ ಯೋಗೇಶ್ ಕಥುನಿಯಾ ಮತ್ತು ಕುಮಾರ್ ನಿತೇಶ್‌ ಅವರ ಚಿನ್ನ, ಶಟ್ಲರ್‌ ತುಳಸಿಮತಿ ಮುರುಗೇಶನ್ ಬೆಳ್ಳಿ ಪದಕ ಗಳಿಸಿದರು.ಶಟ್ಲರ್‌ ಕರ್ನಾಟಕದ ಸುಹಾಸ್ ಯತಿರಾಜ್ (ಎಸ್‌ಎಲ್ 4) ಸತತ ಎರಡನೇ ಬೆಳ್ಳಿ ಪದಕಕ್ಕೆ ಪಾತ್ರವಾದರು.

Update: 2024-09-03 06:50 GMT
ಸುಮಿತ್‌ ಅಂಟಿಲ್‌ ಅವರ ಚಿನ್ನದ ಪದಕದ ಸಂಭ್ರಮ

ದೇಶದ ಸಶಸ್ತ್ರ ಪಡೆಗಳು ಮತ್ತು ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯಿಂದ ಪ್ರೇರಿತರಾಗಿ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ ಕುಮಾರ್‌ ನಿತೇಶ್‌ ಹಾಗೂ ಜಾವೆಲಿನ್ ಛಾಂಪಿಯನ್‌ ಸುಮಿತ್ ಅಂಟಿಲ್, ಚಿನ್ನದ ಪದಕದೊಂದಿಗೆ ಮಿಂಚಿದ್ದಾರೆ.

2009ರಲ್ಲಿ ರೈಲು ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದ ಐಐಟಿ ಮಂಡಿಯ ಎಂಜಿನಿಯರಿಂಗ್ ಪದವೀಧರ ನಿತೇಶ್(29), ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಟೋಕಿಯೊ ಬೆಳ್ಳಿ ಪದಕ ವಿಜೇತ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪ್ರಯಾಸಕರ ಫೈನಲ್‌ ನಲ್ಲಿ 21-14, 18-21, 23-21ರಿಂದ ಸೋಲಿಸಿ ಅಗ್ರ ಗೌರವ ಪಡೆದರು. 

ಪ್ರಶಸ್ತಿ ಉಳಿಸಿಕೊಂಡ ಮೊದಲ ಭಾರತೀಯ: ಅಂಟಿಲ್ ಅವರು ಜಾವೆಲಿನ್ ಥ್ರೋ (ಎಫ್‌ 64 ) ಫೈನಲ್ ನಲ್ಲಿ 70.59 ಮೀಟರ್‌ಗಳ ದಾಖಲೆಯೊಂದಿಗೆ ಪ್ಯಾರಾಲಿಂಪಿಕ್ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ಭಾರತೀಯ ವ್ಯಕ್ತಿಯಾದರು. ಹರಿಯಾಣದ ಸೋನಿಪತ್‌ನ ಆಂಟಿಲ್(26)‌, ಮೂರು ವರ್ಷಗಳ ಹಿಂದೆ 68.55 ಮೀ ಎಸೆದು ಟೋಕಿಯೋದಲ್ಲಿ ಚಿನ್ನ ಗೆದ್ದಿದ್ದರು. ಅವರ ವಿಶ್ವ ದಾಖಲೆ 73.29 ಮೀಟರ್. ಆಂಟಿಲ್‌ ಅವರು ಶೂಟರ್ ಅವನಿ ಲೇಖರಾ ಅವರ ನಂತರ ಪ್ಯಾರಾಲಿಂಪಿಕ್ ಪ್ರಶಸ್ತಿ ಉಳಿಸಿಕೊಂಡ ಎರಡನೇ ಭಾರತೀಯ. 

ಎಫ್‌ 64 ವರ್ಗದಲ್ಲಿ ಕೆಳ ಅಂಗಗಳ ಸಮಸ್ಯೆಗಳಿರುವ ಅಥ್ಲೀಟ್‌ಗಳು, ಕೃತಕ ಅಂಗಗಳೊಂದಿಗೆ ಸ್ಪರ್ಧಿಸುವ ಅಥವಾ ಕಾಲಿನ ಉದ್ದದಲ್ಲಿ ವ್ಯತ್ಯಾಸ ಇರುವವರು ಸ್ಪರ್ಧಿಸುತ್ತಾರೆ.

ಎರಡು ಬೆಳ್ಳಿ: ಡಿಸ್ಕಸ್ ಎಸೆತಗಾರ ಯೋಗೇಶ್ ಕಥುನಿಯಾ (ಎಫ್ 56) ಮತ್ತು ಪ್ಯಾರಾ ಶಟ್ಲರ್‌ಗಳಾದ ತುಳಸಿಮತಿ ಮುರುಗೇಶನ್ (ಎಸ್‌ಯು 5) ಮತ್ತು ಸುಹಾಸ್ ಯತಿರಾಜ್ (ಎಸ್‌ಎಲ್ 4) ಮೂಲಕ ಭಾರತ ಎರಡು ಬೆಳ್ಳಿ ಪದಕ ಗಳಿಸಿತು. ಶಟ್ಲರ್‌ ಮನೀಶಾ ರಾಮದಾಸ್ (ಎಸ್‌ಯು5) ಅವರು ಕಂಚು ಪದಕ ಗಳಿಸಿದರು. 

ಶೀತಲ್ ದೇವಿ(17) ಮತ್ತು ರಾಕೇಶ್ ಕುಮಾರ್ ಜೋಡಿ ಮೂಲಕ ಬಿಲ್ಲುಗಾರಿಕೆಯಲ್ಲಿ ಯಶಸ್ಸು ಕಂಡಿತು. ಮಿಶ್ರ ತಂಡವು ಸಂಯುಕ್ತ ಮುಕ್ತ ಸ್ಪರ್ಧೆಯಲ್ಲಿ ಇಟಲಿಯ ಎಲಿಯೊನೊರಾ ಸರ್ತಿ ಮತ್ತು ಮ್ಯಾಟಿಯೊ ಬೊನಾಸಿನಾ ವಿರುದ್ಧ 156-155 ಅಂತರದಲ್ಲಿ ಗೆದ್ದು, ಕಂಚಿನ ಪದಕ ಗಳಿಸಿತು. ಶೀತಲ್ ದೇವಿ ಬಿಲ್ಲುಗಾರಿಕೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ.

ಬಿಲ್ಲುಗಾರಿಕೆಯಲ್ಲಿ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವುದು ಇದು ಎರಡನೇ ಬಾರಿ. ಮೂರು ವರ್ಷಗಳ ಹಿಂದೆ ಟೋಕಿಯೊ ಆವೃತ್ತಿಯಲ್ಲಿ ಹರ್ವಿಂದರ್ ಸಿಂಗ್ ವೈಯಕ್ತಿಕ ಕಂಚಿನ ಪದಕ ಗೆದ್ದಿದ್ದರು.

ಎರಡನೇ ಚಿನ್ನ: ಕಳೆದ ವಾರ ಮಹಿಳೆಯರ 10 ಮೀಟರ್ ಏರ್ ರೈಫಲ್ (ಎಸ್‌ಎಚ್1) ಸ್ಪರ್ಧೆಯಲ್ಲಿ ಗಾಲಿಕುರ್ಚಿಯಲ್ಲಿ ಶೂಟರ್ ಅವನಿ ಲೇಖರಾ ಅಗ್ರ ಸ್ಥಾನ ಗಳಿಸಿದ ನಂತರ ನಿತೇಶ್ ಅವರ ಚಿನ್ನ ಎರಡನೆಯದು. 

ʻನಾನು ಬೆಥೆಲ್‌ ವಿರುದ್ಧ ಸೋತಿದ್ದೇನೆ ಮತ್ತು ಅದೇ ತಪ್ಪುಗಳನ್ನು ಮಾಡಲು ಬಯಸುವುದಿಲ್ಲ. ನಾನು ಪ್ರತಿ ಪಾಯಿಂಟ್‌ಗೆ ಹೋರಾಡುತ್ತಲೇ ಇರಬೇಕೆಂದು ಹೇಳಿಕೊಂಡೆ,ʼ ಎಂದು ನಿತೇಶ್‌ ಹೇಳಿದರು. ಬೆಥೆಲ್‌ ಈ ಹಿಂದೆ ಒಂಬತ್ತು ಬಾರಿ ನಿತೇಶ್‌ ಅವರನ್ನು ಸೋಲಿಸಿದ್ದರು. 

ತನ್ನ ತಂದೆಯ ಹೆಜ್ಜೆಯನ್ನು ಅನುಸರಿಸಲು ಮತ್ತು ಸಶಸ್ತ್ರ ಪಡೆ ಸೇರುವ ಆಕಾಂಕ್ಷೆ ಹೊಂದಿದ್ದ ನಿತೇಶ್, ಕೃತಕ ಕಾಲಿನೊಂದಿಗೆ ಸ್ಪರ್ಧಿಸುತ್ತಾರೆ. ಅಪಘಾತಕ್ಕೆ ಮೊದಲು ಫುಟ್‌ಬಾಲ್ ಆಟಗಾರನಾಗಿದ್ದರು. ʻನಾನು ವಿರಾಟ್ ಕೊಹ್ಲಿಯನ್ನು ಮೆಚ್ಚುತ್ತೇನೆ. ಏಕೆಂದರೆ, ಅವರು ತಮ್ಮನ್ನು ಅಥ್ಲೀಟ್ ಆಗಿ ಪರಿವರ್ತಿಸಿಕೊಂಡಿದ್ದಾರೆ,ʼ ಎಂದು ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಹೇಳಿದರು. 

ಬೆಳ್ಳಿ ರೇಖೆಗಳು: ಡಿಸ್ಕಸ್ ಎಸೆತಗಾರ ಯೋಗೇಶ್ ಕಥುನಿಯಾ(27)ಗೆ ಇದು ಎರಡನೇ ಪ್ಯಾರಾಲಿಂಪಿಕ್ ಬೆಳ್ಳಿ ಪದಕ. ಋತುವಿನ ಅತ್ಯುತ್ತಮ ಪ್ರಯತ್ನವಾದ 42.22 ಮೀಟರ್‌ ಎಸೆತದ ಮೂಲಕ ಪದಕಕ್ಕೆ ಪಾತ್ರರಾದರು.

ಎಫ್‌ 56 ವರ್ಗೀಕರಣವು ಅಂಗಗಳ ಕೊರತೆ, ಕಾಲಿನ ಉದ್ದದ ವ್ಯತ್ಯಾಸ, ದುರ್ಬಲಗೊಂಡ ಸ್ನಾಯು ಶಕ್ತಿ ಮತ್ತು ದುರ್ಬಲಗೊಂಡ ಚಲನೆಯನ್ನು ಒಳಗೊಂಡಿರುತ್ತದೆ. ಕಥುನಿಯಾ 9 ನೇ ವಯಸ್ಸಿನಲ್ಲಿ ಗುಯಿಲಿನ್-ಬಾರೆ ಸಿಂಡ್ರೋಮ್ ಗೆ ತುತ್ತಾದರು. ಇದೊಂದು ಅಪರೂಪದ ಸ್ವಯಂನಿರೋಧ ಸ್ಥಿತಿಯಾಗಿದ್ದು, ಸ್ನಾಯುದೌರ್ಬಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣ ಆಗಬಹುದು. ಗಾಲಿಕುರ್ಚಿಗೆ ಬಂಧಿತರಾಗಿದ್ದ ಅವರು ತಾಯಿ ಮೀನಾ ದೇವಿ ಅವರ ಸಹಾಯದಿಂದ ಅಡೆತಡೆಗಳನ್ನು ಮೀರಿದರು.

ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಶಟ್ಲರ್ ಮುರುಗೇಶನ್, ಬೆಳ್ಳಿ ಗೆದ್ದರು. ಫೈನಲ್‌ನಲ್ಲಿ ಚೀನಾದ ಹಾಲಿ ಚಾಂಪಿಯನ್ ಯಾಂಗ್ ಕ್ಯುಕ್ಸಿಯಾ ವಿರುದ್ಧ 17-21, 10-21 ಅಂತರದಲ್ಲಿ ಸೋತರು. ಸೆಮಿಫೈನಲ್‌ನಲ್ಲಿ ಮುರುಗೇಶನ್ ವಿರುದ್ಧ ಸೋತ ಎರಡನೇ ಶ್ರೇಯಾಂಕದ ಮನೀಶಾ, ಡೆನ್ಮಾರ್ಕ್‌ನ ಮೂರನೇ ಶ್ರೇಯಾಂಕದ ಕ್ಯಾಥ್ರಿನ್ ರೋಸೆಂಗ್ರೆನ್ ಅವರನ್ನು 21-12, 21-8 ಅಂತರದಿಂದ ಸೋಲಿಸಿ ಕಂಚಿನ ಪದಕ ಪಡೆದರು. 

ಎಸ್‌ಎಲ್‌ 4 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸುಹಾಸ್ ಅವರನ್ನು 9-21, 13-21 ರಿಂದ ಫ್ರೆಂಚ್ ಆಟಗಾರ ಲುಕಾಸ್ ಮಜೂರ್ ಸೋಲಿಸಿದರು. ಈ ವರ್ಗೀಕರಣವು ನಡಿಗೆ ಮತ್ತು ಓಟದ ಸಮತೋಲಕ್ಕೆ ಅಡ್ಡಿಪಡಿಸುವ ಕೆಳಗಿನ ಅಂಗಗಳ ದುರ್ಬಲತೆಯನ್ನು ಒಳಗೊಳ್ಳುತ್ತದೆ. ಸುಹಾಸ್ ಎಡ ಪಾದದ ಜನ್ಮಜಾತ ವಿರೂಪತೆಯಿಂದ ಹುಟ್ಟಿದ್ದಾರೆ. 

ನಿತ್ಯಶ್ರೀ ಶಿವನ್(19) ಮಹಿಳೆಯರ ಸಿಂಗಲ್ಸ್ ಎಸ್‌ಎಚ್‌ 6 ಪಂದ್ಯದಲ್ಲಿ ಕಂಚಿನ ಪದಕ ಗೆದ್ದರು. ಅವರು ಇಂಡೋನೇಷ್ಯಾದ ರಿನಾ ಮರ್ಲಿನಾ ಅವರನ್ನು 21-14, 21-6 ಸೆಟ್‌ಗಳಿಂದ ಸೋಲಿಸಿದರು.

ಭಾರತ ಈವರೆಗೆ 14 ಪದಕ ಗಳಿಸಿದ್ದು, ದೇಶ ಮೇಲಿನ 20 ದೇಶಗಳಲ್ಲಿ ಸ್ಥಾನ ಕಂಡುಕೊಂಡಿದೆ. ಟೋಕಿಯೊದಲ್ಲಿ ಗಳಿಸಿರುವ 19 ಪದಕಗಳನ್ನು ಉತ್ತಮಗೊಳಿಸುವ ಗುರಿ ಹೊಂದಿದೆ.

Tags:    

Similar News