Paris Paralympics 2024 | ಭಾರತಕ್ಕೆ ಚಿನ್ನ ಸೇರಿದಂತೆ 4 ಪದಕ

ಶೂಟರ್ ಅವನಿ ಲೇಖರಾ ಸತತ ಪ್ಯಾರಾಲಿಂಪಿಕ್ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರೀತಿ ದೇಶದ ಮೊದಲ ಟ್ರ್ಯಾಕ್ ಪದಕವನ್ನು ಗೆದ್ದಿದ್ದಾರೆ.

Update: 2024-08-31 06:10 GMT
ಮಹಿಳೆಯರ 10 ಮೀಟರ್ ಏರ್ ರೈಫಲ್ (ಎಸ್‌ಎಚ್‌1) ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖರಾ (ಬಲ), ಕೋಚ್ ಸುಮಾ ಶಿರೂರ್ ಅವರೊಂದಿಗೆ.

ಭಾರತವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದೆ.

ಶೂಟರ್ ಅವನಿ ಲೇಖರಾ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ (ಎಸ್‌ಎಚ್‌ 1) ಶೂಟಿಂಗ್ ಸ್ಪರ್ಧೆಯಲ್ಲಿ ದಾಖಲೆಯ ಅಗ್ರ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದರು. ಇದು ಅವರ ಸತತ 2ನೇ ಚಿನ್ನದ ಪದಕ. ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ (22), ಚಿನ್ನದ ಪದಕ ಗಳಿಸಿದ್ದರು. ಇದೇ ಸ್ಪರ್ಧೆಯಲ್ಲಿ ಭಾರತದ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದರು. 

ಪುರುಷರ 10 ಮೀಟರ್ ಏರ್ ಪಿಸ್ತೂಲ್ (ಎಸ್‌ಎಚ್ 1) ಫೈನಲ್‌ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಗೆದ್ದರು. ಪ್ರೀತಿ ಪಾಲ್ ಮಹಿಳೆಯರ ಟಿ35 100ಮೀ ಸ್ಪರ್ಧೆಯಲ್ಲಿ 14.21 ಸೆಕೆಂಡುಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಮೂರನೇ ಸ್ಥಾನ ಪಡೆದರು. ಕಂಚಿನ ಪದಕಕ್ಕೆ ಪಾತ್ರರಾದರು. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಟ್ರ್ಯಾಕ್ ಈವೆಂಟ್ ಪದಕವಾಗಿದೆ. 1984ರ ಪ್ಯಾರಾಲಿಂಪಿಕ್ಸ್‌ ನಿಂದ ಭಾರತ ಗೆದ್ದಿರುವ ಎಲ್ಲಾ ಪದಕಗಳು ಫೀಲ್ಡ್ ಈವೆಂಟ್‌ಗಳಿಂದ ಬಂದಿವೆ. 

ನಿಕಟ ಫೈನಲ್: ಅವನಿ-‌ ʻಇದು ಅತ್ಯಂತ ನಿಕಟವಾದ ಫೈನಲ್ ಆಗಿತ್ತು. 1, 2 ಮತ್ತು 3 ರ ಸ್ಥಾನಗಳ ನಡುವೆ ತುಂಬಾ ಕಡಿಮೆ ಅಂತರವಿತ್ತು. ನಾನು ನನ್ನ ಚಿಂತನೆ ಪ್ರಕ್ರಿಯೆ ಮೇಲೆ ಕೇಂದ್ರೀಕರಿಸಿದ್ದೆ ಮತ್ತು ಫಲಿತಾಂಶದ ಮೇಲೆ ಅಲ್ಲ,ʼ ಎಂದು ಅವನಿ ತನ್ನ ಐತಿಹಾಸಿಕ ಗೆಲುವಿನ ನಂತರ ಹೇಳಿದರು. 

ʻಭಾರತದ ರಾಷ್ಟ್ರಗೀತೆಯು ಈ ಬಾರಿಯೂ ಮೊದಲಿಗೆ ಪ್ರಸಾರವಾಗಿರುವುದು ನನಗೆ ಸಂತೋಷ ತಂದಿದೆ. ನನ್ನ ಇನ್ನೂ ಎರಡು ಪಂದ್ಯಗಳು ಬಾಕಿಯಿದೆ. ನಾನು ದೇಶಕ್ಕಾಗಿ ಹೆಚ್ಚಿನ ಪದಕಗಳನ್ನು ಗೆಲ್ಲುವತ್ತ ಗಮನಹರಿಸುತ್ತಿದ್ದೇನೆ,ʼ ಎಂದು ಅವನಿ ಹೇಳಿದರು. 

ಮೋನಾ, ʻಕಠಿಣ ಸ್ಪರ್ಧೆಯಿತ್ತು. ಅವನಿ ಕಂಪನಿಯಲ್ಲಿರುವುದು ಖಂಡಿತವಾಗಿಯೂ ಸಹಾಯ ಮಾಡಿದೆ. ಅವಳು ಚಾಂಪಿಯನ್ ಮತ್ತು ಅವಳು ನನಗೆ ಸ್ಫೂರ್ತಿ ನೀಡುತ್ತಾಳೆ,ʼ ಎಂದು ಹೇಳಿದರು.

ಮನೀಶ್‌ಗೆ ತಪ್ಪಿದ ಚಿನ್ನ: ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ 50 ಮೀಟರ್ ಪಿಸ್ತೂಲ್ ಚಿನ್ನ ಗೆದ್ದ ಮನೀಶ್(22), ಪದಕ ಕೈ ಅಳತೆಯಲ್ಲಿದ್ದಾಗ ಕಳಪೆ ಹೊಡೆತಗಳನ್ನು ಹೊಡೆದರು. ಅಂತಿಮವಾಗಿ ಬೆಳ್ಳಿ( 234.9 ಅಂಕ) ತೃಪ್ತಿಪಡಬೇಕಾಯಿತು.

ದಕ್ಷಿಣ ಕೊರಿಯಾದ ಅನುಭವಿ ಗುರಿಕಾರ ಜೋ ಜಿಯೊಂಗ್ಡು(37) ಅವರು 237.4 ಅಂಕಗಳೊಂದಿಗೆ ಚಿನ್ನ ಗೆದ್ದರು. ಶೂಟರ್‌ಗಳ ಕುಟುಂಬದಿಂದ ಬಂದಿರುವ ಮತ್ತು ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನವನ್ನು ಪಡೆದಿರುವ ಮನೀಶ್, ಐದನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು.

ಈ ಈವೆಂಟ್‌ನಲ್ಲಿದ್ದ ಇನ್ನೊಬ್ಬ ಭಾರತೀಯ ರುದ್ರಾಂಶ್ ಕಹೆಂಡೆಲ್ವಾಲ್(17) 561 ಅಂಕದೊಂದಿಗೆ ಒಂಬತ್ತನೇ ಸ್ಥಾನ ಗಳಿಸಿ ಫೈನಲ್‌ ನಿಂದ ಹೊರಗುಳಿದರು.

ಪ್ರೀತಿ ಅಪೂರ್ವ ಸಾಧನೆ: ಉತ್ತರ ಪ್ರದೇಶದ ಮುಜಾಫರ್‌ನಗರದ ರೈತನ ಮಗಳು ಪ್ರೀತಿ(23) ಎರಡನೇ ದಿನದ ಸ್ಪರ್ಧೆಯಲ್ಲಿ ಭಾರತದ ಅಥ್ಲೆಟಿಕ್ಸ್ ಪದಕ ಖಾತೆಯನ್ನು ತೆರೆದರು. ಮೇ ತಿಂಗಳಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇದೇ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು. ಚೀನಾದ ಝೌ ಕ್ಸಿಯಾ (13.58) ಚಿನ್ನ ಮತ್ತು ಗುವೊ ಕಿಯಾನ್ಕಿಯಾನ್ (13.74) ಬೆಳ್ಳಿ ಗೆದ್ದರು.

ಈ ಫಲಿತಾಂಶ ಜಪಾನ್‌ನ ಕೋಬೆಯಲ್ಲಿ ನಡೆದ 2024 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುನರಾವರ್ತನೆಯಾಗಿದೆ; ಅಲ್ಲಿ ಚೀನಾದ ಕ್ಸಿಯಾ ಚಿನ್ನ ಮತ್ತು ಕಿಯಾನ್‌ಕಿಯಾನ್ ಬೆಳ್ಳಿ ಗೆದ್ದಿದ್ದರು. ʻಇದು ನನ್ನ ಮೊದಲ ಪ್ಯಾರಾಲಿಂಪಿಕ್ಸ್ ಆಗಿದ್ದು, ಪದಕವನ್ನು ಗೆದ್ದಿದ್ದೇನೆ ಎಂದು ನಂಬಲು ಆಗುತ್ತಿಲ್ಲ. ನಾನು ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶದ ಮೊದಲ ಟ್ರ್ಯಾಕ್ ಪದಕವನ್ನು ಗೆದ್ದಿದ್ದೇನೆ ಎಂಬ ಹೆಮ್ಮೆ ಇದೆʼ. 

Tags:    

Similar News