Paris Paralympics| ಭಾರತ ಅತ್ಯುತ್ತಮ ಪದಕ ಸಾಧನೆ
ಪ್ಯಾರಿಸ್ ನ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಸತತ ಎರಡನೇ ದಿನವೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಐದು ಪದಕಗಳನ್ನು ಪಡೆದರು.;
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ.
ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳ ಅಮೋಘ ಪ್ರದರ್ಶನದ ಹಿನ್ನೆಲೆಯಲ್ಲಿ 20 ಪದಕ (3 ಚಿನ್ನ, 7 ಬೆಳ್ಳಿ, 10 ಕಂಚು) ಗಳಿಸಿದ್ದು, 3 ವರ್ಷಗಳ ಹಿಂದಿನ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿನ ಸಾಧನೆಯನ್ನು(19 ಪದಕ; 5 ಚಿನ್ನ, 8 ಬೆಳ್ಳಿ, 6 ಕಂಚು) ಹಿಂದಿಕ್ಕಿದೆ.
ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಐಕಾನಿಕ್ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಸತತ ಎರಡನೇ ದಿನ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಐದು ಪದಕಗಳನ್ನು ಪಡೆದರು( ಎರಡು ಬೆಳ್ಳಿ ಮತ್ತು ಮೂರು ಕಂಚು). ದೇಶ ಈಗ 17 ನೇ ಸ್ಥಾನದಲ್ಲಿದೆ.
ಜಾವೆಲಿನ್ ಎಸೆತದಲ್ಲಿ 2 ಪದಕ: ಜಾವೆಲಿನ್ ಎಸೆತಗಾರರು ಎಫ್ 46 ವಿಭಾಗದಲ್ಲಿ ಅಜೀತ್ ಸಿಂಗ್ ಮತ್ತು ವಿಶ್ವದಾಖಲೆದಾರ ಸುಂದರ್ ಸಿಂಗ್ ಗುರ್ಜರ್ ಕ್ರಮವಾಗಿ 65.62 ಮೀ ಮತ್ತು 64.96 ಮೀಟರ್ ಎಸೆದು, ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಎತ್ತರ ಜಿಗಿತ ಪಟುಗಳಾದ ಶರದ್ ಕುಮಾರ್ ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು(ಟಿ63 ವಿಭಾಗ) ಫೈನಲ್‌ನಲ್ಲಿ 1.88ಮೀ ಮತ್ತು 1.85ಮೀ ಜಿಗಿತದೊಂದಿಗೆ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
ಇದಕ್ಕೂ ಮೊದಲು, ವಿಶ್ವ ಚಾಂಪಿಯನ್ ಓಟಗಾರ್ತಿ ದೀಪ್ತಿ ಜೀವನಜಿ(20) ಮಹಿಳೆಯರ 400 ಮೀ (ಟಿ 20) ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಖಚಿತಪಡಿಸಿದರು. ಅವರು ತಮ್ಮ ಚೊಚ್ಚಲ ಕ್ರೀಡಾಕೂಟದಲ್ಲಿ 55.82 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ದರು. ಉಕ್ರೇನ್‌ನ ಯೂಲಿಯಾ ಶುಲಿಯಾರ್ (55.16 ಸೆಕೆಂಡ್) ಪ್ರಥಮ ಮತ್ತು ವಿಶ್ವ ದಾಖಲೆ ಹೊಂದಿರುವ ಟರ್ಕಿಯ ಐಸೆಲ್ ಒಂಡರ್ (55.23 ಸೆಕೆಂಡ್) ನಂತರ ಓಟ ಮುಗಿಸಿದರು.
ತೆಲಂಗಾಣದ ವಾರಂಗಲ್ ಜಿಲ್ಲೆಯ ಕಲ್ಲೆಡಾ ಗ್ರಾಮದ ಕೃಷಿ ಕಾರ್ಮಿಕರ ಮಗಳಾದ ಜೀವನಜಿ ಅವರನ್ನು ಶಿಕ್ಷಕರೊಬ್ಬರು ಶಾಲಾ ಮಟ್ಟದ ಅಥ್ಲೆಟಿಕ್ಸ್ ಕೂಟದಲ್ಲಿ ಗುರುತಿಸಿದರು. ಅಂಗವೈಕಲ್ಯದಿಂದಾಗಿ ಸ್ವಗ್ರಾಮದವರಿಂದ ನಿಂದನೆಗೆ ಒಳಗಾಗಿದ್ದರು. ಕಳೆದ ವರ್ಷದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಮೇನಲ್ಲಿ ನಡೆದ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದಾಖಲೆ ಮುರಿದ ಬಳಿಕ ಅದೇ ಹಳ್ಳಿಯವರು ಆಕೆಯನ್ನು ಸಂಭ್ರಮಿಸುತ್ತಿದೆ. ನಾಗಪುರಿ ರಮೇಶ್ ಅವರ ಬಳಿ ತರಬೇತಿ ಬಳಿಕ ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರು ನೆರವು ನೀಡುತ್ತಿದ್ದಾರೆ.
2ನೇ ಪದಕದಿಂದ ವಂಚಿತ ಅವನಿ: ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ಎಸ್‌ಎಚ್ 1 ಸ್ಪರ್ಧೆಯ ಫೈನಲ್‌ನಲ್ಲಿ ಐದನೇ ಸ್ಥಾನ ಗಳಿಸಿದ ಏಸ್ ಶೂಟರ್ ಅವನಿ ಲೇಖರಾ(22), ಎರಡನೇ ಪದಕದಿಂದ ವಂಚಿತರಾದರು.
11ನೇ ವಯಸ್ಸಿನಲ್ಲಿ ಕಾರು ಅಪಘಾತದಿಂದ ಪಾರ್ಶ್ವವಾಯುವಿಗೆ ಒಳಗಾದ ಅವರು ವಿಶ್ವ ದರ್ಜೆಯ ಎಂಟು ಆಟಗಾರ್ತಿಯರಲ್ಲಿ 420.6 ಅಂಕಗಳೊಂದಿಗೆ 5ನೇ ಸ್ಥಾನ ಗಳಿಸಿದರು. ಜರ್ಮನಿಯ ನಟಾಸ್ಚಾ ಹಿಲ್ಟ್ರೋಪ್ ಚಿನ್ನ(456.5 ಅಂಕ), ಸ್ಲೋವಾಕಿಯಾದ ವೆರೋನಿಕಾ ವಡೋವಿಕೋವಾ ಬೆಳ್ಳಿ( 456.1 ಅಂಕ) ಮತ್ತು ಚೀನಾದ ಜಾಂಗ್ ಕಂಚು( 446.0 ಅಂಕ) ಪಡೆದರು.
ಭಾಗ್ಯಶ್ರೀ 5ನೇ ಸ್ಥಾನ: ಭಾಗ್ಯಶ್ರೀ ಜಾಧವ್ ಮಹಿಳೆಯರ ಶಾಟ್‌ಪುಟ್‌ನಲ್ಲಿ (ಎಫ್34) ಐದನೇ ಸ್ಥಾನ ಪಡೆದರು. ಚೀನಾದ ಲಿಜುವಾನ್ ಝೌ ಋತುವಿನ ಅತ್ಯುತ್ತಮ 9.14 ಮೀಟರ್ ಎಸೆದು ಚಿನ್ನ, ಪೋಲೆಂಡ್‌ನ ಲುಸಿನಾ ಕಾರ್ನೋಬಿಸ್ 8.33 ಮೀಟರ್ ಪ್ರಯತ್ನದಿಂದ ಬೆಳ್ಳಿ ಪಡೆದರು.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಜಾಧವ್(39), 2006 ರಲ್ಲಿ ಅಪಘಾತದಿಂದ ಕಾಲುಗಳನ್ನು ಕಳೆದುಕೊಂಡರು. ಸ್ನೇಹಿತರು ಮತ್ತು ಕುಟುಂಬದ ಸಹಾಯದಿಂದ ಪ್ಯಾರಾಅಥ್ಲೀಟ್ ಆಗಿ ಜೀವನವನ್ನು ಮರಳಿ ಪಡೆಯಲು ಹೋರಾಡಿದರು.
ವಿಶ್ವ ಪ್ಯಾರಾ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಪೂಜಾ ಜತ್ಯಾನ್(27) ಅವರು ಟರ್ಕಿಯ ಯಗ್ಮುರ್ ಸೆಂಗುಲ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ, ಮಹಿಳೆಯರ ಮುಕ್ತ ಆರ್ಚರಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು. ಆದರೆ, ಎಂಟನೇ ಹಂತದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್ ಕಂಚಿನ ಪದಕ ವಿಜೇತ ಚೀನಾದ ವು ಚುನ್ಯಾನ್ ವಿರುದ್ಧ ಸೋತರು.