Paris Paralympics 2024: ಬಿಲ್ಲುಗಾರ್ತಿ ಶೀತಲ್ ದೇವಿ 16 ರ ಸುತ್ತಿಗೆ ಪ್ರವೇಶ

Update: 2024-08-30 06:28 GMT

ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನಲ್ಲಿ ತೋಳುಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ ಅವರು ನೇರವಾಗಿ 16 ನೇ ಸುತ್ತಿಗೆ ಪ್ರವೇಶಿಸಿದ್ದು, ಮಹಿಳೆಯರ ವೈಯಕ್ತಿಕ ರ‍್ಯಾಂಕಿಂಗ್ ಸುತ್ತಿನಲ್ಲಿ ಎರಡನೇ ಸ್ಥಾನ ಗಳಿಸಿದರು.

ಜಮ್ಮು ಮತ್ತು ಕಾಶ್ಮೀರದ ಶೀತಲ್‌(17), ಹುಟ್ಟಿನಿಂದಲೇ ಕೈಗಳಿಲ್ಲದ ಕಾರಣ ಕಾಲುಗಳಿಂದ ಬಾಣ ಹೊಡೆಯುತ್ತಾರೆ. ಅವರು 720 ರಲ್ಲಿ 703 ಅಂಕ ಗಳಿಸಿ, ಟರ್ಕಿಯ ಓಜ್ನೂರ್ ಗಿರ್ಡಿ ಕ್ಯೂರ್(704) ನಂತರ ಎರಡನೇ ಸ್ಥಾನ ಗಳಿಸಿದರು. ಬ್ರಿಟನ್‌ನ ಫೋಬೆ ಪೈನ್ ಪ್ಯಾಟರ್ಸನ್ (698) ಅವರ ವಿಶ್ವ ದಾಖಲೆಯನ್ನು ಹಿಂದೆ ಹಾಕಿದರು. 

ದೇವಿ ಅವರು ಚಿಲಿಯ ಮರಿಯಾನಾ ಜುನಿಗಾ(15ನೇ ಸ್ಥಾನ) ಮತ್ತು ಕೊರಿಯಾದ ಚೋಯ್ ನಾ ಮಿ(18ನೇ ಸ್ಥಾನ) ನಡುವಿನ ಸ್ಪರ್ಧೆಯ ವಿಜೇತರನ್ನು ಎದುರಿಸಲಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್‌ನಲ್ಲಿ ಜುನಿಗಾ ಬೆಳ್ಳಿ ಗೆದ್ದಿದ್ದಾರೆ. 

ದೇವಿ ಕಳೆದ ವರ್ಷ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಗೆದ್ದು ಸಂಚಲನ ಮೂಡಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಮಿಲಿಟರಿ ಕ್ಯಾಂಪ್‌ನಲ್ಲಿ ಪತ್ತೆಯಾದ ಮತ್ತು ಭಾರತೀಯ ಸೇನೆ ದತ್ತು ಪಡೆದುಕೊಂಡ ದೇವಿ, ಕಳೆದ ವರ್ಷ ಪ್ಯಾರಾ ವರ್ಲ್ಡ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ತೋಳುರಹಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಪರೂಪದ ಜನ್ಮಜಾತ ಅಸ್ವಸ್ಥತೆಯಾದ ಫೋಕೊಮೆಲಿಯಾ ಸಿಂಡ್ರೋಮ್‌ ಹೊಂದಿದ್ದು, ಅಂಗಗಳು ಸಂಪೂರ್ಣ ಅಭಿವೃದ್ಧಿ ಹೊಂದಿಲ್ಲ. 

Tags:    

Similar News