Paris Olympics 2024| ಹಾಕಿ: ಭಾರತಕ್ಕೆ ಸೋಲುಣಿಸಿದ ಬೆಲ್ಜಿಯಂ
ಭಾರತ ಮತ್ತು ಬೆಲ್ಜಿಯಂ ಎರಡು ತಂಡಗಳೂ ಬಿ ಗುಂಪಿನಿಂದ ಈಗಾಗಲೇ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ.
ಪ್ಯಾರಿಸ್, ಆಗಸ್ಟ್ 1: ಭಾರತ ಹಾಕಿ ತಂಡವು ಹಾಲಿ ಚಾಂಪಿಯನ್ ಬೆಲ್ಜಿಯಂ ವಿರುದ್ಧ 1-2 ಅಂತರದಿಂದ ಸೋಲುಂಡಿದೆ.
ಗುರುವಾರ ನಡೆದ ಪಂದ್ಯದಲ್ಲಿ 18ನೇ ನಿಮಿಷದಲ್ಲಿ ಅಭಿಷೇಕ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬೆಲ್ಜಿಯಂ ಪರವಾಗಿ ಅರ್ಧ ಸಮಯದ ನಂತರ ಥಿಬ್ಯೂ ಸ್ಟಾಕ್‌ಬ್ರೋಕ್ಸ್ (33ನೇ ನಿಮಿಷ) ಮತ್ತು ಜಾನ್ ಜಾನ್ ಡೊಹ್ಮೆನ್ (44ನೇ ನಿಮಿಷ) ಗೋಲು ಗಳಿಸಿದ್ದು, ಇದುವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿದೆ.
ಭಾರತ ಮತ್ತು ಬೆಲ್ಜಿಯಂ ಎರಡು ತಂಡಗಳೂ ಬಿ ಗುಂಪಿನಿಂದ ಈಗಾಗಲೇ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ. ಅರ್ಜೆಂಟೀನಾ ವಿರುದ್ಧ 1-1 ಡ್ರಾ ಮಾಡಿಕೊಂಡ ಭಾರತ, 3-2 ರಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತ್ತು. ಆನಂತರ ಹರ್ಮನ್‌ಪ್ರೀತ್ ನೇತೃತ್ವದ ತಂಡವು ಐರ್ಲೆಂಡ್ ಅನ್ನು 2-0 ಗೋಲುಗಳಿಂದ ಸೋಲಿಸಿತು. ಶುಕ್ರವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ.
ಭಾರತೀಯರು ಉತ್ತಮ ಪ್ರದರ್ಶನ ನೀಡಿ, ಚೆಂಡಿನ ಸ್ವಾಧೀನದಲ್ಲಿ ಪ್ರಾಬಲ್ಯ ಸಾಧಿಸಿದರು ಮತ್ತು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿಕೊಂಡರು. ಭಾರತೀಯರ ರಕ್ಷಣೆ ಉತ್ತಮವಾಗಿತ್ತು. ಬೆಲ್ಜಿಯಂ ಫಾರ್ವರ್ಡ್‌ಗಳಿಗೆ ಗೋಲ್ ಹೊಡೆಯಲು ಯಾವುದೇ ಅವಕಾಶ ಕೊಡಲಿಲ್ಲ ಮತ್ತು ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ವಿಫಲಗೊಳಿಸಿದರು.
ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಡುತ್ತಿರುವ ಭಾರತದ ಹಿರಿಯ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್, ಗೋಲಿನ ಮುಂದೆ ಬಂಡೆಯಂತೆ ನಿಂತಿದ್ದರು. ಆದರೆ, ಎಂಟನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ರೂಪದಲ್ಲಿ ಬೆಲ್ಜಿಯಂಗೆ ಮೊದಲ ಅವಕಾಶ ಸಿಕ್ಕಿತು. ಆದರೆ, ಶ್ರೀಜೇಶ್ ಅವರು ಅಲೆಕ್ಸಾಂಡರ್ ಹೆಂಡ್ರಿಕ್ಸ್ ಅವರ ಹೊಡೆತವನ್ನು ಸೊಗಸಾದ ತಡೆದರು. 18 ನೇ ನಿಮಿಷದಲ್ಲಿ ಅಭಿಷೇಕ್ ಅವರು ತಂಡಕ್ಕೆ ಮುನ್ನಡೆ ನೀಡಿದರು. ಬೆಲ್ಜಿಯಂ 23 ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು. ಅದನ್ನು ಕೂಡ ಶ್ರೀಜೇಶ್ ವಿಫಲಗೊಳಿಸಿದರು.
ಎರಡು ನಿಮಿಷಗಳ ನಂತರ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ ಅಮಿತ್ ರೋಹಿದಾಸ್ ಅವಕಾಶವನ್ನು ವಿಫಲಗೊಳಿಸಿದರು. 33 ನೇ ನಿಮಿಷದಲ್ಲಿ ಸ್ಟಾಕ್‌ಬ್ರೋಕ್ಸ್ ಮೂಲಕ ಬೆಲ್ಜಿಯಂ ಸಮಬಲ ಸಾಧಿಸಿತು. ಬೆಲ್ಜಿಯನ್ನರು ಮೂರು ಪೆನಾಲ್ಟಿ ಕಾರ್ನರ್ ಪಡೆದರು. ಶ್ರೀಜೇಶ್ ಎರಡು ಸಂದರ್ಭಗಳಲ್ಲಿ ತಡೆದರು. ಮೂರನೇ ಪ್ರಯತ್ನದಲ್ಲಿ ಡೊಹ್ಮೆನ್ ಗೋಲು ಗಳಿಸಿದರು.
ಆನಂತರ ಭಾರತೀಯರಿಗೆ ಕೆಲವು ಅವಕಾಶಗಳು, ಒಂದೆರಡು ಪೆನಾಲ್ಟಿ ಕಾರ್ನರ್ ಸಿಕ್ಕಿದರೂ, ಬೆಲ್ಜಿಯಂ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.