Paris Olympics 2024| ಬಾಕ್ಸಿಂಗ್-‌ ಪದಕಕ್ಕೆ ಒಂದು ಜಯದ ಅಂತರದಲ್ಲಿ ಲೊವ್ಲಿನಾ ಬೊರ್ಗೊಹೈನ್

ಲೊವ್ಲಿನಾ ಅವರ ಮುಂದಿನ ಹಾದಿ ಸುಲಭವಾಗಿಲ್ಲ. ಏಕೆಂದರೆ, ಅವರು ಆಗಸ್ಟ್ 4 ರಂದು ಕೊನೆಯ ಎಂಟು ಹಂತದಲ್ಲಿ ಅಗ್ರ ಶ್ರೇಯಾಂಕದ ಲಿ ಕಿಯಾನ್ ಅವರನ್ನು ಎದುರಿಸಬೇಕಿದೆ.

Update: 2024-07-31 12:16 GMT

ಪ್ಯಾರಿಸ್, ಜು.31- ಟೋಕಿಯೊ ಒಲಿಂಪಿಕ್ಸ್ ಕಂಚಿನ ವಿಜೇತೆ ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಬುಧವಾರ ತಮ್ಮ ಆರಂಭಿಕ ಪಂದ್ಯದಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ಅವರನ್ನು ಸೋಲಿಸುವ ಮೂಲಕ ಎರಡನೇ ಪದಕಕ್ಕಾಗಿ ಹೋರಾಟ ಪ್ರಾರಂಭಿಸಿದರು. 

ಬೊರ್ಗೊಹೈನ್ ಸ್ಪರ್ಧೆಯಲ್ಲಿ 5-0 ಮೇಲುಗೈ ಸಾಧಿಸಿದರು. 69 ಕೆಜಿ ವಿಭಾಗದಲ್ಲಿ ತಮ್ಮ ಟೋಕಿಯೊ ಕಂಚಿಗೆ ಸೇರಿಸಲು ಮತ್ತು ಭಾರತೀಯ ಬಾಕ್ಸಿಂಗ್‌ನಲ್ಲಿ ಅಭೂತಪೂರ್ವ ಸಾಧನೆ ಮಾಡಲು ಅವರಿಗೆ ಒಂದು ಗೆಲುವು ಬೇಕಿದೆ. ಆದರೆ, ಅವರ ಹಾದಿ ಸುಲಭವಾಗಿಲ್ಲ. ಏಕೆಂದರೆ, ಅವರು ಆಗಸ್ಟ್ 4 ರಂದು ಕೊನೆಯ ಎಂಟು ಹಂತದಲ್ಲಿ ಅಗ್ರ ಶ್ರೇಯಾಂಕದ ಲಿ ಕಿಯಾನ್ ಅವರನ್ನು ಎದುರಿಸುತ್ತಾರೆ. 

ಅಸ್ಸಾಮಿನ ಬಾಕ್ಸರ್ ನಾರ್ವೇಜಿಯನ್ ಆಟಗಾರ್ತಿ ಮೇಲೆ ನಿಖರವಾಗಿ ದಾಳಿ ಮಾಡಿದರು. ಬೊರ್ಗೊಹೈನ್‌ಗೆ ಕಠಿಣ ಡ್ರಾ ನೀಡಲಾಗಿದೆ. ಆದರೆ, ಪ್ರತಿಸ್ಪರ್ಧಿಯನ್ನು ಮೀರುವ ಸಾಮರ್ಥ್ಯ ತೋರಿಸಿದ್ದಾರೆ. ಟೋಕಿಯೊದಲ್ಲಿ ವಿಶ್ವ ಚಾಂಪಿಯನ್ ಚೆನ್ ನಿಯೆನ್-ಚಿನ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ, ಕಂಚಿನ ಪದಕ ಗಳಿಸಿದ್ದರು. 

ಆಗಸ್ಟ್ 4 ರ ಅವರ ಎದುರಾಳಿ, ಕಿಯಾನ್, ಮಧ್ಯಮ-ತೂಕ (75ಕೆಜಿ) ವಿಭಾಗದಲ್ಲಿ ಟೋಕಿಯೋ ಗೇಮ್ಸ್‌ನಿಂದ ಬೆಳ್ಳಿ ಪದಕ ವಿಜೇತರು. 2016 ರ ರಿಯೊ ಗೇಮ್ಸ್‌ನಲ್ಲಿ ಕಂಚು ಮತ್ತು 2022 ರ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದರು. 

ದೇಶದ ಬಾಕ್ಸಿಂಗ್ ಅಭಿಯಾನ ಮಿಶ್ರ ಫಲಿತಾಂಶ ನೀಡಿದ್ದು, ಅಮಿತ್ ಪಂಗಲ್ (51 ಕೆಜಿ), ಪ್ರೀತಿ ಪವಾರ್ (54 ಕೆಜಿ) ಮತ್ತು ಜೈಸ್ಮಿನ್ ಲಂಬೋರಿಯಾ (57 ಕೆಜಿ) ಹೊರನಡೆದಿದ್ದಾರೆ. ಬೋರ್ಗೊಹೈನ್ ಹೊರತುಪಡಿಸಿ ಉಳಿದಿರುವವರು ವಿಶ್ವ ಚಾಂಪಿಯನ್ ನಿಖತ್ ಜರೀನ್ (ಮಹಿಳೆಯರ 50 ಕೆಜಿ) ಮತ್ತು ನಿಶಾಂತ್ ದೇವ್ (ಪುರುಷರ 71 ಕೆಜಿ). 

Tags:    

Similar News