ಉಗ್ರರೊಟ್ಟಿಗೆ ವಿಡಿಯೋದಲ್ಲಿ ಕಾಣಿಸಿಕೊಂಡ ಅರ್ಷದ್ ನದೀಮ್
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಷದ್ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನಂತರ ಅಥವಾ ಅದಕ್ಕೂ ಮೊದಲು ವಿಡಿಯೋ ಚಿತ್ರೀಕರಣ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.;
ಪಾಕಿಸ್ತಾನದ ಮೊದಲ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ; ಆದರೆ, ಈ ಬಾರಿ ತಪ್ಪು ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.
ಆನ್‌ಲೈನ್‌ನಲ್ಲಿರುವ ವಿಡಿಯೋದಲ್ಲಿ ಅವರು ಅಮೆರಿಕದಲ್ಲಿ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಮೊಹಮ್ಮದ್ ಹ್ಯಾರಿಸ್ ಧಾರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ.
ಧಾರ್ 2008 ರ ಮುಂಬೈ ದಾಳಿ ಹಿಂದಿನ ಮಿದುಳು ಎನ್ನಲಾದ ಹಫೀಜ್ ಸಯೀದ್ ನ ಭಯೋತ್ಪಾದಕ ಗುಂಪು ಲಷ್ಕರ್ ಎ ತೈಬಾ (ಎಲ್‌ಇಟಿ)ದ ರಾಜಕೀಯ ಮುಖವಾದ ಮಿಲಿ ಮುಸ್ಲಿಂ ಲೀಗ್ (ಎಂಎಂಎಲ್) ನ ಜಂಟಿ ಕಾರ್ಯದರ್ಶಿ. 2018 ರಲ್ಲಿ ಅಮೆರಿಕದ ಖಜಾನೆ ಇಲಾಖೆಯು ಧಾರ್ ನ್ನು ʻಜಾಗತಿಕ ಭಯೋತ್ಪಾದಕʼ ಎಂದು ಘೋಷಿಸಿದೆ.
ವಿಡಿಯೋ ಸಮಯ ಅಸ್ಪಷ್ಟ: ಆದರೆ, ವಿಡಿಯೋವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಷದ್ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನಂತರ ಚಿತ್ರೀಕರಿಸಲಾಗಿದೆಯೇ ಅಥವಾ ಅದಕ್ಕೂ ಮೊದಲು ಸೆರೆಹಿಡಿಯಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಪ್ಯಾರಿಸ್‌ನಲ್ಲಿ ನದೀಮ್(27) ಆಗಸ್ಟ್ 8 ರಂದು ಜಾವೆಲಿನ್ 92.97 ಮೀಟರ್ ಎಸೆದು ಒಲಿಂಪಿಕ್ ಚಿನ್ನದ ಪದಕ ಗಳಿಸಿದರು.ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಭಾರತದ ನೀರಜ್ ಚೋಪ್ರಾ, ಬೆಳ್ಳಿ ಪದಕ ಪಡೆದರು.
ನದೀಮ್ ಆಗಸ್ಟ್ 11 ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತನ್ನ ಗ್ರಾಮ ಮಿಯಾನ್ ಚುನ್ನುಗೆ ಮರಳಿದರು.