Paris Olympics Effect | ಶೂಟರ್ ಮನು ಭಾಕರ್ ಬ್ರ್ಯಾಂಡ್ ಮೌಲ್ಯ ಆರು ಪಟ್ಟು ವೃದ್ಧಿ

ಫ್ರಾನ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ನಂತರ 50 ಕ್ಕೂ ಹೆಚ್ಚು‌ ಬ್ರ್ಯಾಂಡ್‌ಗಳು ಒಲಿಂಪಿಕ್ ಶೂಟರ್ ಮನು ಭಾಕರ್‌ ಅವರನ್ನು ಬೆನ್ನಟ್ಟುತ್ತಿವೆ.

By :  Aprameya C
Update: 2024-08-22 10:36 GMT

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಎರಡು ಕಂಚಿನ ಪದಕ ಗಳಿಸಿ ಇತಿಹಾಸವನ್ನು ಸೃಷ್ಟಿಸಿದ ಶೂಟರ್ ಮನು ಭಾಕರ್ ಅವರ ಬ್ರ್ಯಾಂಡ್ ಮೌಲ್ಯ ಐದರಿಂದ ಆರು ಪಟ್ಟು ಹೆಚ್ಚಳ ಕಂಡಿದೆ ಮತ್ತು 50 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಅನುಮೋದನೆಗಾಗಿ ಅವರನ್ನು ಬೆನ್ನಟ್ಟುತ್ತಿವೆ ಎಂದು ಅವರನ್ನು ನಿರ್ವಹಿಸುವ ಕಂಪನಿ ತಿಳಿಸಿದೆ.

ಐಒಎಸ್‌ ಸ್ಪೋರ್ಟ್ಸ್ ಆಂಡ್‌ ಎಂಟರ್‌ಟೇನ್‌ಮೆಂಟ್ ಪ್ರಕಾರ, ಮನು ಭಾಕರ್‌(22) ಅವರ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ (ಮಹಿಳೆಯರ 10 ಮೀಟರ್‌ ಏರ್ ಪಿಸ್ತೂಲ್ ಮತ್ತು ಸರಬ್ಜೋತ್ ಸಿಂಗ್ ಜೊತೆ ಮಿಶ್ರ 10 ಮೀಟರ್‌ ಏರ್ ಪಿಸ್ತೂಲ್)ಗಳ ಗೆಲುವು ಅವರನ್ನು ಕ್ರೀಡಾ ಜಗತ್ತಿನ ಪ್ರಮುಖ ವ್ಯಕ್ತಿಯನ್ನಾಗಿಸಿದೆ. ಈ ಗೆಲುವು ಭಾರತೀಯ ಅಥ್ಲೀಟ್‌ ಒಬ್ಬರ ಮೊಟ್ಟಮೊದಲ ಸಾಧನೆಯಾಗಿದೆ.

ಬ್ರ್ಯಾಂಡ್‌ಗಳ ಆಸಕ್ತಿ ಹೆಚ್ಚಳ: ʻಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗಳಿಸಿರುವುದರಿಂದ, ಗಣ್ಯ ಕ್ರೀಡಾಪಟು ಎಂದು ಅವರ ಸ್ಥಾನಮಾನ ಹೆಚ್ಚಿದೆ. ಜೊತೆಗೆ, ಮಾರುಕಟ್ಟೆ ಮಾಡಬಲ್ಲ ಮುಖವಾಗಿ ಅವರ ಆಕರ್ಷಣೆಯನ್ನು ಗಮನಾರ್ಹವಾಗಿ ವರ್ಧಿಸಿದೆ,ʼ ಎಂದು ಐಒಎಸ್ ಸ್ಪೋರ್ಟ್ಸ್ ಮತ್ತು ಎಂಟರ್‌ಟೇನ್‌ಮೆಂಟ್ ವ್ಯವಸ್ಥಾಪಕ ನಿರ್ದೇಶಕ ನೀರವ್ ತೋಮರ್ ‌ʻದ ಫೆಡರಲ್‌ʼಗೆ ಬುಧವಾರ (ಆಗಸ್ಟ್ 20) ತಿಳಿಸಿದರು. 

ʻಮನು ಅವರ ಒಲಿಂಪಿಕ್ ಯಶಸ್ಸು ಆಕೆಯನ್ನು ಕ್ರೀಡಾ ಜಗತ್ತಿನ ಪ್ರಮುಖ ವ್ಯಕ್ತಿಯಾಗಿಸಿದೆ; ವಿವಿಧ ಬ್ರ್ಯಾಂಡ್‌ಗಳ ಗಮನ ಮತ್ತು ಆಸಕ್ತಿ ಯನ್ನು ಸೆಳೆದಿದೆ. ಈ ಪ್ರಾಮುಖ್ಯತೆಯು ಮೈದಾನದ ಒಳಗೆ ಮತ್ತು ಹೊರಗೆ ಅಸಂಖ್ಯಾತ ಅವಕಾಶಗಳನ್ನು ಸೃಷ್ಟಿಸುತ್ತದೆ. ಭವಿಷ್ಯದಲ್ಲಿ ಸಮೃದ್ಧ ವೃತ್ತಿಜೀವನಕ್ಕೆ ವೇದಿಕೆ ನೀಡುತ್ತದೆ ಮತ್ತು ಪ್ರಭಾವಶಾಲಿ ಬ್ರ್ಯಾಂಡ್‌ ಗಳೊಡನೆ ಪಾಲುದಾರಿಕೆ ರೂಪಿಸಲು ಅನುವು ಮಾಡಿಕೊಡುತ್ತದೆ, ʼಎಂದು ಹೇಳಿದರು. 

ʻ50 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಮನು ಅವರೊಟ್ಟಿಗೆ ಒಪ್ಪಂದಕ್ಕೆ ಆಸಕ್ತಿ ಹೊಂದಿವೆ. ಈಗ ಆಕೆ ಒಂದು ಬ್ರ್ಯಾಂಡ್‌ ಮಾತ್ರ ಅನುಮೋದಿಸು ತ್ತಾರೆ; ಮುಂಬರುವ ದಿನಗಳಲ್ಲಿ ಐದರಿಂದ ಆರು ಒಪ್ಪಂದ ಮಾಡಿಕೊಳ್ಳಲಾಗುತ್ತದೆ,ʼ ಎಂದು ತೋಮರ್ ಹೇಳಿದರು. 

ʻಮನು ಭಾಕರ್ ಅವರು ಸದ್ಯಕ್ಕೆ ಒಂದು ಬ್ರ್ಯಾಂಡ್‌ನೊಂದಿಗೆ ಸಂಬಂಧ ಹೊಂದಿದ್ದಾರೆ; ಅದು ಸ್ಪೋರ್ಟ್ಸ್ ಗೇರ್ ಮತ್ತು ಫಿಟ್‌ನೆಸ್ ಫ್ಯಾಷನ್ ಬ್ರ್ಯಾಂಡ್ ಆದ ಪರ್ಫಾರ್ಮ್ಯಾಕ್ಸ್ ಆಕ್ಟಿವ್‌ವೇರ್. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ನಮ್ಮನ್ನು ಸಂಪರ್ಕಿಸಿವೆ. ಮುಂದಿನ ಕೆಲವು ದಿನಗಳಲ್ಲಿ ಕನಿಷ್ಠ 5-6 ಒಪ್ಪಂದ ಅಂತಿಮಗೊಳಿಸುವ ನಿರೀಕ್ಷೆ ಇದೆ,ʼ ಎಂದು ಹೇಳಿದರು.

ಲಕ್ಷದಿಂದ ಕೋಟಿಗೆ ಹೆಚ್ಚಳ: ಪ್ಯಾರಿಸ್‌ನಲ್ಲಿ ಮನು ಅವರ ಯಶಸ್ಸಿನಿಂದ ಅವರ ಬ್ರ್ಯಾಂಡ್ ಮೌಲ್ಯವು ಲಕ್ಷ ರೂ.ಗಳಿಂದ ಕೋಟಿ ರೂ.ಗೆ, ಐದರಿಂದ ಆರು ಪಟ್ಟು ಹೆಚ್ಚಳಗೊಂಡಿದೆ.

ʻಈ ಹಿಂದೆ ಮನು ಅವರ ಶುಲ್ಕ 20-25 ಲಕ್ಷ ರೂ. ಒಲಂಪಿಕ್ ಯಶಸ್ಸಿನೊಂದಿಗೆ ಪ್ರತಿ ಒಪ್ಪಂದಕ್ಕೆ ಸುಮಾರು 1.5 ಕೋಟಿ ರೂ.ಗೆ ಹೆಚ್ಚಿದೆ. ಇವು ಒಂದು ವರ್ಷದ ಒಪ್ಪಂದಗಳು,ʼ ಎಂದು ತೋಮರ್ ವಿವರಿಸಿದರು. 

ಅವರು ದೀರ್ಘಾವಧಿಯ ಒಪ್ಪಂದಗಳನ್ನು ಎದುರುನೋಡುತ್ತಿದ್ದಾರೆ. ಆದರೆ, ಅಲ್ಪಾವಧಿಯ ಡಿಜಿಟಲ್ ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್‌ಗೆ ಕೂಡ ಸಿದ್ಧವಿದ್ದಾರೆ ಎಂದು ಹೇಳಿದರು. ʻನಮ್ಮ ಪ್ರಾಥಮಿಕ ಗಮನ ಮನು ಮತ್ತು ಬ್ರ್ಯಾಂಡ್ ಎರಡಕ್ಕೂ ಅರ್ಥಪೂರ್ಣ ಹಾಗೂ ನಿರಂತರ ಪಾಲುದಾರಿಕೆ ನೀಡುವ ದೀರ್ಘಾವಧಿಯ ಒಪ್ಪಂದಗಳನ್ನು ಭದ್ರಪಡಿಸುವ ಕಡೆ ಇದೆ. ಆದರೆ, ಅನನ್ಯ ಗೋಚರತೆ ಮತ್ತು ಡಿಜಿಟಲ್/ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್‌ನ ಬೆಳೆಯು ತ್ತಿರುವ ಪ್ರವೃತ್ತಿಯನ್ನು ಗಮನಿಸಿದರೆ, ಅದು ಮನು ಅವರ ಹಿತಾಸಕ್ತಿಗೆ ಅನುಗುಣವಾಗಿದ್ದು ಮತ್ತು ಆಕೆಗೆ ಸೂಕ್ತ ಎನ್ನಿಸಿದರೆ, ನಾವು ಅಲ್ಪಾವಧಿಯ ಡಿಜಿಟಲ್ ಅವಕಾಶಗಳನ್ನು ಪರಿಗಣಿಸಬಹುದು,ʼ ಎಂದು ಮನು ಅವರ ಐತಿಹಾಸಿಕ ಸಾಧನೆಯನ್ನು ವೀಕ್ಷಿಸಲು ಪ್ಯಾರಿಸ್‌ಗೆ ತೆರಳಿದ್ದ ತೋಮರ್‌ ಹೇಳಿದರು.

Tags:    

Similar News