Maharaja Trophy|‌ ವೈಯಕ್ತಿಕ ನಷ್ಟವನ್ನು ಮೀರಿ ಮಿಂಚಿದ ಕುಮಾರ್

ಕುಮಾರ್‌ 2022 ರಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಹೆತ್ತವರಿಬ್ಬರನ್ನೂ ಕಳೆದುಕೊಂಡರು. ತಾಯಿ ರಕ್ತದ ಕ್ಯಾನ್ಸರ್‌ಗೆ ಮತ್ತು ತಂದೆ ಸ್ವಲ್ಪ ಸಮಯದ ನಂತರ ಪಾರ್ಶ್ವವಾಯುವಿನಿಂದ ಇಲ್ಲವಾದರು.

Update: 2024-08-31 13:28 GMT

ಮಹಾರಾಜ ಟ್ರೋಫಿ ಕೆಎಸ್‌ ಸಿಎ ಟಿ20 ಯಲ್ಲಿ ನೇರಳೆ ಬಣ್ಣದ ಟೋಪಿಯ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾದ ಎಲ್.ಆರ್‌. ಕುಮಾರ್ ‌, ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಆದರೆ, ಅವರ ಪ್ರಯಾಣ ಸುಲಭವಾಗಿರಲಿಲ್ಲ. 

2022 ರಲ್ಲಿ ಅವರ ಜೀವನ ವಿನಾಶಕಾರಿ ತಿರುವು ತೆಗೆದುಕೊಂಡಿತು; ಕೆಲವೇ ತಿಂಗಳುಗಳ ಅಂತರದಲ್ಲಿ ಪೋಷಕರನ್ನು ಕಳೆದುಕೊಂಡರು- ತಾಯಿ ರಕ್ತದ ಕ್ಯಾನ್ಸರ್‌ಗೆ ಮತ್ತು ತಂದೆ ಸ್ವಲ್ಪ ಸಮಯದ ನಂತರ ಪಾರ್ಶ್ವವಾಯುವಿನಿಂದ. ಇದರಿಂದ ಕುಮಾರ್‌ ಮತ್ತು ಇಬ್ಬರು ಸಹೋದರಿಯರು ಸ್ವಂತವಾಗಿ ಜೀವನ ಸಾಗಿಸಬೇಕಾಗಿ ಬಂದಿತು. 

ʻಅದು ನನಗೆ ತುಂಬಾ ಕಷ್ಟದ ಅವಧಿಯಾಗಿತ್ತು. ಇದ್ದಕ್ಕಿದ್ದಂತೆ ನಾನು ಎಲ್ಲರನ್ನೂ ನೋಡಿಕೊಳ್ಳಬೇಕಾಗಿ ಬಂದಿತು,ʼ ಎಂದರು. 

ತಾಯಿ ಮಂಡ್ಯದ ಪಿಇಟಿ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತಿಗೆ ಸೇರಿಸಿದ್ದನ್ನು ಅವರು ಸ್ಮರಿಸಿಕೊಂಡರು. ʻತಾಯಿ ಆರಂಭದಲ್ಲಿ ನನ್ನನ್ನು ಕ್ರಿಕೆಟ್ ಆಡದಂತೆ ತಡೆಯುತ್ತಿದ್ದರು. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ಕ್ರಿಕೆಟ್ ತರಬೇತಿಗೆ ಸೇರಿಸಿದರು. ಆನಂತರ ನಾನು ಹಿಂತಿರುಗಿ ನೋಡಲಿಲ್ಲ,ʼ ಎಂದರು. 

ಕುಮಾರ್ ಅವರು ತಮ್ಮ ತಾಯಿಯ ಸ್ಮರಣೆಯನ್ನು ಗೌರವಿಸಲು ನಿರ್ಧರಿಸಿದ್ದಾರೆ. ಕ್ರಿಕೆಟ್‌ ಕುಟುಂಬವನ್ನು ಬೆಂಬಲಿಸಲು ಮತ್ತು ತಾಯಿಯ ಚಿಕಿತ್ಸೆಗೆ ಅಗತ್ಯವಾದ ಆರ್ಥಿಕ ಸ್ಥಿರತೆಯನ್ನು ಒದಗಿಸಿತು. ʻ ಕ್ರಿಕೆಟ್ ನನಗೆ ಸ್ವಲ್ಪ ಆರ್ಥಿಕ ಶಕ್ತಿಯನ್ನು ನೀಡಿತು. ತಾಯಿಯ ಚಿಕಿತ್ಸೆಗೆ ಮತ್ತು ಮನೆಯ ನಿರ್ವಹಣೆಗೆ ಬಳಸಿದೆ,ʼ ಎಂದರು. 

ಅವರು ಆಲ್‌ ರೌಂಡರ್ ಆಗಿದ್ದರೂ, ಬೌಲಿಂಗ್‌ ಅವರಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಗಳಿಸಲು ನೆರವಾಯಿತು. ಈ ಋತುವಿನಲ್ಲಿ, ಕುಮಾರ್ ಮಹಾರಾಜ ಟ್ರೋಫಿಯಲ್ಲಿ 14 ವಿಕೆಟ್‌ ಗಳಿಸಿದ್ದು, ನೇರಳೆ ಬಣ್ಣದ ಟೋಪಿಗೆ ಸ್ಪರ್ಧಿಸುತ್ತಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ತಂಡದ ಸಹ ಆಟಗಾರ ಮನ್ವಂತ್ ಕುಮಾರ್ (15 ವಿಕೆಟ್) ಮತ್ತು ಬೆಂಗಳೂರಿನ ಲವಿಶ್ ಕೌಶಲ್ (16 ವಿಕೆಟ್) ಅವರಿಗೆ ಸ್ಪರ್ಧೆಯೊಡ್ಡಿದ್ದಾರೆ. 

ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಅಂತಿಮ ಓವರ್‌ನಲ್ಲಿ ಕುಮಾರ್ ಅವರು ಐದು ಎಸೆತಗಳಲ್ಲಿ ಕೇವಲ 5 ರನ್‌ ನೀಡಿದರು. ಇದು ಐತಿಹಾಸಿಕ ಟ್ರಿಪಲ್ ಸೂಪರ್ ಓವರ್‌ಗೆ ಕಾರಣವಾಗಿ, ಹುಬ್ಬಳ್ಳಿ ಟೈಗರ್ಸ್ ಎರಡು ಅಂಕ ಗಳಿಸಿತು. 

ಕಳೆದ ಋತುವಿನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹತ್ತರಲ್ಲಿ ಒಂಬತ್ತು ಪಂದ್ಯಗಳಲ್ಲಿ ಸೋಲುಂಡಿತ್ತು. ಬೌಲಿಂಗ್‌ ಶೈಲಿಯಿಂದ ಬ್ರೆಟ್ ಲೀ ಎಂದು ಕರೆಸಿಕೊಳ್ಳುವ ಕುಮಾರ್, ಬೆನ್ನಿನ ಗಾಯದಿಂದ ಹಿನ್ನಡೆ ಎದುರಿಸಿದರು. ಕರ್ನಾಟಕ ಮತ್ತು ಭಾರತದ ಮಾಜಿ ವೇಗಿ ಅಭಿಮನ್ಯು ಮಿಥುನ್ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ. 

ಮಹಾರಾಜ ಟ್ರೋಫಿ ನಾಕೌಟ್ ಹಂತಕ್ಕೆ ಪ್ರವೇಶಿಸುತ್ತಿದ್ದು, ತಮ್ಮ ಆಟ ಹುಬ್ಬಳ್ಳಿ ಟೈಗರ್ಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ನೆರವಾಗಬೇಕಿದೆ ಎಂದು ಕುಮಾರ್ ಹೇಳಿದ್ದಾರೆ.

Tags:    

Similar News