IPL 2024 | RCB vs CSK ಪಂದ್ಯ: ಅಭಿಮಾನಿಗಳ ಕನಸಿಗೆ ತಣ್ಣೀರೆರಚುವನೇ ವರುಣರಾಯ?

Update: 2024-05-15 08:23 GMT

ಈ ಸಲ ಕಪ್‌ ನಮ್ದೆ ಎಂದು ಟ್ರೆಂಡ್‌ ಕ್ರಿಯೇಟ್‌ ಮಾಡಿರುವ ಆರ್‌ಸಿಬಿ ತಂಡ 2024ರ ಐಪಿಎಲ್ ಆವೃತ್ತಿಯಲ್ಲಿ ಪ್ಲೇ ಆಫ್‌ ಕನಸು ಕಾಣುತ್ತಿದೆ. ಕನಸು ನನಸಾಗಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ. ಶನಿವಾರ ನಡೆಯಲಿರುವ ಚೆನೈ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ ತನ್ನ ಗೆಲುವಿನ ಓಟ ಮುಂದುವರೆಸಿ, ಪ್ಲೇ ಆಫ್‌ಗೆ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದೆ. ಆದರೆ ಆರ್‌ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರು ಎರಚಲು ವರುಣರಾಯ ಕಾದು ನಿಂತಿದ್ದಾನೆ ಎನ್ನುವ ಸೂಚನೆಯೂ ಸಿಕ್ಕಿದೆ.

ಆರ್‌ಸಿಬಿ ತಂಡದ ಅಭಿಮಾನಿಗಳು ಈಗ ತಮ್ಮ ತಂಡ ಮುಂದಿನ ಹಂತಕ್ಕೆ ಹೋಗುತ್ತೆ ಎಂದು ಕಾಯುತ್ತಿದ್ದಾರೆ. ಈ ತಂಡ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದು, ಎಲ್ಲರೂ ಶುಭ ಸುದ್ದಿ ಕೇಳಲು ಕಾಯುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಆರ್‌ಸಿಬಿ ಅಭಿಮಾನಿಗಳಿಗೆ ಮಳೆ ಕೆಟ್ಟ ಸುದ್ದಿ ನೀಡುತ್ತಿದೆ!

ಈ ಪಂದ್ಯವನ್ನು ಗೆದ್ದರೆ ಮಾತ್ರ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‌ ರೌಂಡಿಗೆ ಹೋಗುವ ಕನಸು ನನಸಾಗಲಿದೆ. ಒಂದು ವೇಳೆ ಆರ್‌ಸಿಬಿ ಈ ಪಂದ್ಯ ಸೋತರೆ, ಆ ಕ್ಷಣವೇ ಆರ್‌ಸಿಬಿ ಕನಸು ಚೂರು ಚೂರು ಆಗಲಿದೆ. ಸದ್ಯ ಆರ್‌ಸಿಬಿ ತಂಡ ಬಲಿಷ್ಠವಾಗಿದೆ. ಹಾಗಾಗಿ ಸೋಲಿಗಿಂತ ಗೆಲುವಿನ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಗೆದ್ದರೂ ಕೂಡ ಕೊಂಚ ರನ್‌ಗಳ ಅಂತರದಲ್ಲಿ ಅಥವಾ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆಡಿದರೆ, ಓವರ್‌ಗಳನ್ನು ಬಾಕಿ ಉಳಿಸಿಕೊಂಡು ಗೆಲ್ಲಬೇಕಿದೆ. ಇಷ್ಟೆಲ್ಲಾ ಲೆಕ್ಕಾಚಾರಗಳ ನಡುವೆ ಮಳೆ ಕಾಟ ಶುರುವಾಗಿದೆ. ಒಂದು ವೇಳೆ ಮಳೆ ಬಂದು ಮ್ಯಾಚ್ ನಡೆಯದೇ ಇದ್ದರೆ, ಆರ್‌ಸಿಬಿ ತಂಡ ಹೊರ ಬೀಳಲಿದೆ.

ಬೆಂಗಳೂರಿನಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಮಳೆ ಭಯ ಕಾಡುತ್ತಲೇ ಇತ್ತು, ಇದೀಗ ಮತ್ತೆ ಅಂತಹದ್ದೇ ಸುದ್ದಿ ಸಿಗುತ್ತಿದೆ. ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ ನಡೆಯಲಿರುವ ಮೇ 18ರ ಶನಿವಾರ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳುವ ಭಯ ಆವರಿಸಿದೆ. ಹವಾಮಾನ ತಜ್ಞರು ಈ ಬಗ್ಗೆ ಮುನ್ಸೂಚನೆ ನೀಡಿದ್ದು, ಅಭಿಮಾನಿಗಳು ಕೂಡ ಚಿಂತೆಯಲ್ಲಿ ಮುಳುಗಿದ್ದಾರೆ.

ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಫೈನಲ್ಸ್‌ಗೆ ತಲುಪಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಪಂದ್ಯ ನೋಡಲು ಕಾಯುತ್ತಿರುವ ಆರ್‌ಸಿಬಿ ಫ್ಯಾನ್ಸ್ ಎಲ್ಲೆಲ್ಲೂ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹಾಗೇ ಟಿಕೆಟ್‌ಗೆ ಕೂಡ ಭಾರಿ ಡಿಮ್ಯಾಂಡ್ ಇದೆ.

Tags:    

Similar News