ಕರ್ನಾಟಕದ ಇಬ್ಬರು ಮುತ್ಸದ್ಧಿಗಳ ಪರಸ್ಪರ ಕಾಲೆಳೆತಕ್ಕೆ ಸಾಕ್ಷಿಯಾಯ್ತು ರಾಜ್ಯಸಭೆ

ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ನಡುವೆ ನಡೆದ ಚರ್ಚೆ ಇಬ್ಬರೂ ನಾಯಕರ ಮಿತಿ ಮತ್ತು ಶಕ್ತಿಯ ಕುರಿತ ಸಂವಾದವಾಯ್ತು;

Update: 2024-02-09 11:23 GMT

ದೇಶದ ಹಣಕಾಸು ಸ್ಥಿತಿಗತಿ ಮತ್ತು ನಿರ್ವಹಣೆಯ ವಿಷಯ ಕಳೆದ ಕೆಲವು ದಿನಗಳಿಂದ ವ್ಯಾಪಕ ಚರ್ಚೆಗೊಳಗಾಗಿದೆ.

ಒಂದು ಕಡೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳು ಬಜೆಟ್‌ ಅನುದಾನ, ಜಿಎಸ್‌ ಟಿ ಪಾಲು, ಬರ ಮತ್ತು ನೆರೆ ಪರಿಹಾರದಂತಹ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಇದೇ ಮೊದಲ ಬಾರಿಗೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಸರಣಿ ಪ್ರತಿಭಟನೆ ಆರಂಭಿಸಿವೆ.

ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಹತ್ತು ವರ್ಷದಲ್ಲಿ ದೇಶದ ಹಣಕಾಸು ನಿರ್ವಹಣೆಯ ವೈಫಲ್ಯ ಮತ್ತು ಅದರಿಂದಾಗಿ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಉಂಟಾಗಿರುವ ಪರಿಣಾಮಗಳನ್ನು ವಿವರಿಸುವ ʼಕಪ್ಪು ಪತ್ರʼವನ್ನು ಪ್ರತಿಪಕ್ಷ ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಮೋದಿ ಆಡಳಿತದ ಹತ್ತು ವರ್ಷಗಳು ದೇಶದ ಚರಿತ್ರೆಯಲ್ಲಿ ʼಅನ್ಯಾಯದ ಕಾಲʼ ಎಂದು ಹೇಳಿರುವ ಕಾಂಗ್ರೆಸ್, ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಅಲ್ಪಸಂಖ್ಯಾತರು, ಮಹಿಳೆಯರ ಮೇಲಿನ ದೌರ್ಜನ್ಯ, ರಾಜ್ಯಗಳಿಗೆ ಹಣಕಾಸು ಹಂಚಿಕೆಯಲ್ಲಿ ಅನ್ಯಾಯ,, ಮುಂತಾದ ವಿಷಯಗಳನ್ನು ಕಪ್ಪು ಪತ್ರದಲ್ಲಿ ವಿವರಿಸಿದೆ.

ಆದರೆ, ಪ್ರತಿಪಕ್ಷದ ʼಕಪ್ಪುಪತ್ರʼಕ್ಕೆ ತಿರುಗೇಟು ನೀಡುವಲ್ಲಿ ಆಡಳಿತಾರೂಢ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಪ್ರತಿಪಕ್ಷಗಳ ಟೀಕೆಗೆ ಉತ್ತರವಾಗಿ ಗುರುವಾರ ಸಂಸತ್ತಿನಲ್ಲಿ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಸರ್ಕಾರದ ಅವಧಿಯ ಆರ್ಥಿಕ ವೈಫಲ್ಯಗಳನ್ನು ಬಿಂಬಿಸುವ ಶ್ವೇತಪತ್ರವನ್ನು ಬಿಡುಗಡೆ ಮಾಡಿದೆ.

ಕಪ್ಪು ಬಿಳುಪು ಸಮರದ ನಡುವೆ ಸ್ವಾರಸ್ಯಕರ ಚರ್ಚೆ

ಈ ಕಪ್ಪು- ಬಿಳುಪು ಸಮರದ ನಡುವೆ, ಗುರುವಾರ ಸಂಸತ್ತು ಮತ್ತೊಂದು ಸ್ವಾರಸ್ಯಕರ ಸಂವಾದಕ್ಕೂ ಸಾಕ್ಷಿಯಾಯಿತು.

ರಾಜ್ಯಸಭೆಯಲ್ಲಿ ನಿವೃತ್ತರಾಗುತ್ತಿರುವ ಸದನದ 68 ಸದಸ್ಯರ ಕುರಿತ ಬೀಳ್ಕೊಡುಗೆ ವೇಳೆ ಮಾಜಿ ಪ್ರಧಾನಿ ಮತ್ತು ಕರ್ನಾಟಕದ ಹಿರಿಯ ರಾಜಕಾರಣಿ ಎಚ್‌ ಡಿ ದೇವೇಗೌಡ ಮತ್ತು ಎಐಸಿಸಿ ಅಧ್ಯಕ್ಷ ಹಾಗೂ ಸದನದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಈ ಸ್ವಾರಸ್ಯಕರ ಚರ್ಚೆ ನಡೆಯಿತು.

ಕರ್ನಾಟಕದ ಇಬ್ಬರೂ ಹಿರಿಯ ನಾಯಕರು ತಮ್ಮ ಹಿರಿತನ ಮತ್ತು ಅನುಭವದ ಮೇಲೆ ಇಂದು ರಾಷ್ಟ್ರರಾಜಕಾರಣದಲ್ಲಿ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ಜೊತೆಗೆ ತಮ್ಮದೇ ಆದ ವರ್ಚಸ್ಸು ಮತ್ತು ಪ್ರಭಾವನ್ನು ಹೊಂದಿದ್ದಾರೆ. ಆದರೆ, ಈ ಇಬ್ಬರು ಉನ್ನತ ನಾಯಕರ ನಡುವೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಲೆ ಪರಸ್ಪರರು ಬೆನ್ನುತಟ್ಟುತ್ತಲೇ ಕಾಲೆಳೆಯುವ, ಸಹಾನೂಭೂತಿ ಮತ್ತು ಮೆಚ್ಚುಗೆಯ ಮಾತನಾಡುತ್ತಲೇ ರಾಜಕೀಯ ಅನಿವಾರ್ಯತೆಗೆ ಸಿಲುಕಿ ಅಸಹಾಯಕ ಸ್ಥಿತಿಗೆ ತಲುಪಿದ ಬಗ್ಗೆ ಪರಸ್ಪರ ಮಾತನಾಡಿಕೊಂಡದ್ದು ವಿಶೇಷವಾಗಿತ್ತು.

ಗೌಡರಿಗೆ ಅದೇನಾಯಿತೊ ತಿಳಿಯದು

ದೇವೇಗೌಡರು ತಮ್ಮ ಇಡೀ ಬದುಕನ್ನು ಜಾತ್ಯತೀತತೆ, ಸಮಾಜವಾದ ಮತ್ತು ರೈತರ ಹಿತಕ್ಕಾಗಿ ಕಳೆದರು. ಆದರೆ, ಈಗ ಈ ಇಳಿ ವಯಸ್ಸಿನಲ್ಲಿ ಏಕಾಏಕಿ ಅವರಿಗೆ ಅದೇನಾಯಿತೋ ತಿಳಿಯದು. ಗೌಡರಿಗೆ ಯಾರನ್ನೂ ಹೊಗಳುವ ಅಭ್ಯಾಸವೇ ಇರಲಿಲ್ಲ. ಅಂತಹವರು ಈಗ ಪ್ರಧಾನಿ ಮೋದಿಯವರನ್ನು ಅತಿಯಾಗಿ ಹೊಗಳುತ್ತಿದ್ದಾರೆ. ಅಪ್ಪಿಕೊಳ್ಳುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಹೀಗೆ ಅವರ ಹವ್ಯಾಸ ಬದಲಾಗಲು ಏನು ಕಾರಣವೋ …! ಎಂದು ಖರ್ಗೆ ಗೌಡರ ಕುರಿತು ಉದ್ಗಾರ ತೆಗೆದರು.

ಗೌಡರೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ನೆಪಿಸಿಕೊಳ್ಳುತ್ತೇ ಖರ್ಗೆ ಅವರು ಅವರ ಇತ್ತೀಚಿನ ಬದಲಾವಣೆಯ ಕುರಿತು ಹೀಗೆ ಅರ್ಧ ವ್ಯಂಗ್ಯ, ಅರ್ಧ ವಿಷಾದದ ದನಿಯಲ್ಲಿ, ತಮಾಷೆಯ ಸ್ವರದಲ್ಲಿ ಪ್ರಸ್ತಾಪಿಸುತ್ತಲೇ ಸದನ ನಗೆಗಡಲಲ್ಲಿ ಮುಳುಗಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಖರ್ಗೆಯವರ ಮಾತಿಗೆ ನಕ್ಕರು.

ದೇವೇಗೌಡರು ತಮ್ಮ ಸರದಿ ಬಂದಾಗ ಖರ್ಗೆಯವರ ಚಾಣಾಕ್ಷ ಚಾಟಿ ಏಟಿಗೆ ತಿರುಗೇಟು ಕೊಡದೇ ಇರಲಿಲ್ಲ. ತಮ್ಮ ಮತ್ತು ಪ್ರಧಾನಮಂತ್ರಿಗಳ ನಡುವಿನ ಬಾಂಧವ್ಯದ ಕುರಿತು ಪರೋಕ್ಷ ಟೀಕೆ ಮಾಡಿದ ಖರ್ಗೆಯವರನ್ನು ಉದ್ದೇಶಿಸಿ, “ಖರ್ಗೆಯವರೇ ನೀವು ಪ್ರಧಾನಮಂತ್ರಿಯಾಗಲು ನೀವು ಅಧ್ಯಕ್ಷರಾಗಿರುವ ಕಾಂಗ್ರೆಸ್‌ ಪಕ್ಷ ಮುಕ್ತ ಮನಸ್ಸಿನಿಂದ ಬೆಂಬಲಕ್ಕೆ ನಿಲ್ಲುವುದೇ?” ಎಂದು ಕೇಳುವ ಮೂಲಕ ಕಾಂಗ್ರೆಸ್‌ ನಾಯಕರ ಕಾಲೆಳೆದರು.

ನಿಮ್ಮನ್ನು ಪ್ರಧಾನಿ ಮಾಡಲು ನಿಮ್ಮ ಪಕ್ಷ ಒಪ್ಪುವುದೇ?

“ಖರ್ಗೆ ಪ್ರಾಮಾಣಿಕರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. 2018ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಕಾಂಗ್ರೆಸ್‌ ಉನ್ನತ ನಾಯಕರು ನನ್ನ ಮನೆಗೆ ಬಂದಾಗ ನಾನು ಮೊದಲು ಖರ್ಗೆ ಸಿಎಂ ಆಗಲಿ ಎಂದು ಹೇಳಿದ್ದೆ. ಆದರೆ, ಅವರು ಅದಕ್ಕೆ ಒಪ್ಪಲಿಲ್ಲ. ಈಗ ಹೇಳಿ ಖರ್ಗೆಯವರೇ ನೀವು ಸಿಎಂ ಆಗಲು ಒಪ್ಪದವರು, ಪ್ರಧಾನಿ ಮಾಡಲು ಒಪ್ಪುತ್ತಾರಯೇ? ಖರ್ಗೆಯವರಿಗೆ ಅರ್ಹತೆ ಇದೆ. ಅವರೇನೂ ನನ್ನ ಸ್ವಂತದವರೂ ಅಲ್ಲ, ನನ್ನ ಮಗನೂ ಅಲ್ಲ. ಆದರೆ, ಅವರ ಅರ್ಹತೆಗೆ ಅವಕಾಶ ಸಿಗಬೇಕು ಎಂಬುದು ನನ್ನ ಅಪೇಕ್ಷೆ” ಎಂದು ದೇವೇಗೌಡರು ಖರ್ಗೆಯವರನ್ನು ಹೊಗಳುತ್ತಲೇ ಅವರ ಕಾಂಗ್ರೆಸ್‌ ಪಕ್ಷವನ್ನು ಕಾಲೆಳೆದರು.

ಕಾಂಗ್ರೆಸ್‌ನ ಹೈಕಮಾಂಡ್‌ ಸಂಸ್ಕೃತಿಯನ್ನು ಟೀಕಿಸುತ್ತಲೇ ನೀವು ದೇಶದ ಪ್ರಧಾನಿಯಾಗುವುದನ್ನು ನಿಮ್ಮ ಪಕ್ಷ ಸಹಿಸಿಕೊಳ್ಳುತ್ತದೆಯೇ ಎಂದು ಖರ್ಗೆಯವರನ್ನು ಪ್ರಶ್ನಿಸಿದರು. ಖರ್ಗೆ ಅವರು ಸುಮಾರು 35-40 ವರ್ಷಗಳ ಕಾಲ ಕೆಲಸ ಮಾಡಿದ ಶುದ್ಧ ವ್ಯಕ್ತಿ ಎಂದು ಬಣ್ಣಿಸಿದ ಅವರು, "...ಆದರೆ ಯಾರಾದರೂ ಪ್ರಧಾನಿಯಾಗಲು ಅಥವಾ ನಾಯಕರಾಗಲು ನಿಮ್ಮ ಹೆಸರನ್ನು ಉಲ್ಲೇಖಿಸಿದಾಗ ಏನಾಯಿತು? ಅದಕ್ಕೆ ಅವರ ಸ್ವಂತ ಸ್ನೇಹಿತರೇ ತಿರುಗೇಟು ನೀಡಿದರು!" ಎಂದರು.

“ಕೆಲವು ಕಾಂಗ್ರೆಸ್ಸಿಗರು ನನ್ನ ಪಕ್ಷವನ್ನು ನಾಶಮಾಡಲು ಬಯಸಿದಾಗ ನಾನು ನನ್ನ ಪಕ್ಷವನ್ನು ಉಳಿಸಲು ಬಿಜೆಪಿಗೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ. ಅದೊಂದೇ ಕಾರಣ” ಎಂದು ಹೇಳುವ ಮೂಲಕ ಗೌಡರು ಬದಲಾಗಿದ್ದಾರೆ ಎಂಬ ಖರ್ಗೆಯವರ ಮಾತಿಗೆ, ಅವರ ಪಕ್ಷದತ್ತಲೇ ಬೊಟ್ಟುಮಾಡಿ ತೋರಿಸಿದರು.

ಹೀಗೆ ಗುರುವಾರದ ರಾಜ್ಯಸಭಾ ಕಲಾಪ, ಕರ್ನಾಟಕದ ಇಬ್ಬರು ಮುತ್ಸದ್ಧಿ ನಾಯಕರ ನಡುವಿನ ಪರಸ್ಪರ ಮೆಚ್ಚುಗೆ ಮತ್ತು ಕಾಲೆಳೆದುಕೊಳ್ಳುವ ಸ್ವಾರಸ್ಯಕರ ಜುಗಲ್ ಬಂದಿಗೆ ಸಾಕ್ಷಿಯಾಯಿತು.

Tags:    

Similar News