ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ: ಭವಾನಿ ರೇವಣ್ಣ ಜಾಮೀನು ಪ್ರಶ್ನಿಸಿ 'ಸುಪ್ರೀಂ' ಮೆಟ್ಟಿಲೇರಿದ ರಾಜ್ಯ ಸರ್ಕಾರ

ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.;

Update: 2024-07-07 12:34 GMT
ಭವಾನಿ ರೇವಣ್ಣ
Click the Play button to listen to article

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ನಿರೀಕ್ಷಣಾ ಜಾಮೀನು ಕೋರಿ ಭವಾನಿ ಸಲ್ಲಿಸಿದ್ದ ಮನವಿಯನ್ನು ಜೂನ್‌ 18ರಂದು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ಪೀಠ ಪುರಸ್ಕರಿಸಿತ್ತು.

ಈ ಆದೇಶವನ್ನು ಕರ್ನಾಟಕ ಸರ್ಕಾರವು ಪ್ರಶ್ನಿಸಿದ್ದು, ಈ ಅರ್ಜಿಯ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯಾನ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಲಿದೆ.

ಭವಾನಿ ಅವರು ತನಿಖೆಗೆ ಸಹಕರಿಸಿಲ್ಲ ಎಂಬ ಎಸ್‌ಐಟಿಯ ವಾದವನ್ನು ಹೈಕೋರ್ಟ್‌ ಒಪ್ಪಿರಲಿಲ್ಲ. ಎಸ್‌ಐಟಿ ವಿಚಾರಣೆಗೆ ಭವಾನಿ ಸಹಕರಿಸಿಲ್ಲ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ವಾದಿಸಿದ್ದರು. ಮೂರು ದಿನಗಳಲ್ಲಿ ಒಟ್ಟು 85 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲದಕ್ಕೂ ಆಕೆ ಉತ್ತರಿಸಿದ್ದಾರೆ. ತಾವು ಬಯಸಿದಂತೆ ಆರೋಪಿ ಉತ್ತರಿಸಬೇಕು ಎಂದು ಪೊಲೀಸರು ನಿರೀಕ್ಷಿಸಲಾಗದು.

ಸಂತ್ರಸ್ತೆಗೆ ಆಹಾರ ನೀಡಿಲ್ಲ ಮತ್ತು ಉಡುಪು ಬದಲಿಸಲು ಭವಾನಿ ಅವಕಾಶ ನೀಡಿಲ್ಲ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು. ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಓದಿದಾಗ ಬಟ್ಟೆ ಮತ್ತು ಊಟವನ್ನು ಭವಾನಿ ಕಳುಹಿಸಿದ್ದರು ಎಂದು ಹೇಳಿದ್ದಾರೆ. ಹೀಗಾಗಿ, ಸಂತ್ರಸ್ತೆಯನ್ನು ಒತ್ತೆ ಇಡಲಾಗಿತ್ತು ಎನ್ನಲಾಗದು” ಎಂದು ಹೈಕೋರ್ಟ್‌ ಹೇಳಿತ್ತು.

ಭವಾನಿ ರೇವಣ್ಣ ಸೇರಿ ಹಲವರ ವಿರುದ್ದ ಐಪಿಸಿ ಸೆಕ್ಷನ್‌ಗಳಾದ 364ಎ, 365 ಮತ್ತು 34 ಅಡಿ ಪ್ರಕರಣ ದಾಖಲಾಗಿದೆ.

Tags:    

Similar News