ಶೋಭಾ ಕರಂದ್ಲಾಜೆಗೆ ಸ್ವಪಕ್ಷೀಯರಿಂದಲೇ ಸವಾಲು: ಕರಾವಳಿ ಕುಮಾರಿಗೆ ಯಾಕಿಷ್ಟು ವಿರೋಧ?

ಒಂದೆಡೆ ಹೋದಲ್ಲೆಲ್ಲಾ ಸ್ಥಳೀಯ ಮುಖಂಡರು, ಕಾರ್ಯಕರ್ತರು ಗೋ ಬ್ಯಾಕ್ ಶೋಭಕ್ಕಾ ಅಭಿಯಾನ ನಡೆಸುತ್ತಿದ್ದರೆ, ಇನ್ನೊಂದೆಡೆ ಈಶ್ವರಪ್ಪ, ಸೋಮಶೇಖರ್, ಸಿ.ಟಿ ರವಿ, ಬಸನಗೌಡ ಪಾಟೀಲ ಯತ್ನಾಳ್ ಮೊದಲಾದ ಹಿರಿಯ ನಾಯಕರು ಶೋಭಾ ವಿರುದ್ಧ ಭುಸುಗುಡುತ್ತಿದ್ದಾರೆ

Update: 2024-03-23 01:20 GMT

ಕರ್ನಾಟಕ ಬಿಜೆಪಿಯಲ್ಲಿ ಮುಂಚೂಣಿಯ ಏಕೈಕ ಮಹಿಳಾ ನಾಯಕಿ, ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ವಪಕ್ಷೀಯರಿಂದಲೇ ವಿರೋಧ ಎದುರಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ತಾವು ಸ್ಪರ್ಧಿಸುವ ಕ್ಷೇತ್ರಗಳೆಲ್ಲಾ ಸ್ಥಳೀಯ ಬಿಜೆಪಿಗರಿಂದ ʼಗೋ ಬ್ಯಾಕ್ʼ ಎದುರಿಸುತ್ತಿರುವ ಶೋಭಾ ಅವರ ವಿಚಾರದಲ್ಲಿ ಈ ಬಾರಿಯೂ ಇತಿಹಾಸ ಪುನರಾವರ್ತಿತವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿಗರಿಂದ ಗೋ ಬ್ಯಾಕ್ ಅಭಿಯಾನ ತೀವ್ರಗೊಳ್ಳುತ್ತಿದ್ದಂತೆ ಶೋಭಾರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಬಿಜೆಪಿ ನೀಡಿತ್ತು. ಇದೀಗ ಅಲ್ಲೂ ಸ್ಥಳೀಯ ಮುಖಂಡರಿಂದ ಶೋಭಾ ವಿರುದ್ಧ ಅಭಿಯಾನ ಆರಂಭವಾಗಿದೆ.

ಒಂದೆಡೆ ಶೋಭಾ ಹೋದಲ್ಲೆಲ್ಲಾ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ನಡೆಸುತ್ತಿದ್ದರೆ, ಇನ್ನೊಂದೆಡೆ ಕೆ.ಎಸ್ ಈಶ್ವರಪ್ಪ, ಎಸ್. ಟಿ ಸೋಮಶೇಖರ್, ಸಿ.ಟಿ ರವಿ, ಬಸನಗೌಡ ಯತ್ನಾಳ್ ಪಾಟೀಲ್ ಮೊದಲಾದ ಹಿರಿಯ ನಾಯಕರು ಶೋಭಾ ವಿರುದ್ಧ ಭುಸುಗುಡುತ್ತಿದ್ದಾರೆ. ಅದರಲ್ಲೂ, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಬಳಿಕ ಶೋಭಾ ವಿರುದ್ಧದ ಆಕ್ರೋಶ ಹೆಚ್ಚಾಗುತ್ತಿವೆ.

ಶೋಭಾ ಬೆಳೆದು ಬಂದ ಹಾದಿ..

ಬಿಜೆಪಿ ಕರ್ನಾಟಕದಲ್ಲಿ ತನ್ನ  ಪಕ್ಷ ನಿಷ್ಠೆ, ಪರಿಶ್ರಮದಿಂದ  ಆರಂಭಿಕ ಕಾಲದಲ್ಲೇ ಶೋಭಾ ಅವರು ಪ್ರಮುಖ ನಾಯಕಿಯಾಗಿ ಶೋಭಾ ಅವರು ಗುರುತಿಸಿಕೊಂಡಿದ್ದರು. ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯ ಸುತ್ತಿ ಪಕ್ಷ ಕಟ್ಟುವಾಗಲೂ ಶೋಭಾ ಅವರು ಪಕ್ಷಕ್ಕಾಗಿ ನಿರಂತರ ದುಡಿದಿದ್ದರು. 2004 ರಲ್ಲಿ  ವಿಧಾನ ಪರಿಷತ್‌ ಸದಸ್ಯೆಯಾಗಿ  ಆಯ್ಕೆಯಾಗುವ ಮೊದಲು ಬಿಜೆಪಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವರು 2008 ರಲ್ಲಿ ಬೆಂಗಳೂರಿನ  ಯಶವಂತಪುರದಿಂದ ಶಾಸಕರಾಗಿ ಆಯ್ಕೆಯಾದರು. 2008 ರ ಯಡಿಯೂರಪ್ಪ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ನೇಮಕಗೊಂಡ ಅವರಿಗೆ ನಂತರದ ವರ್ಷಗಳಲ್ಲಿ ಇಂಧನ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಸ್ತುವಾರಿಯನ್ನೂ ನೀಡಲಾಗಿತ್ತು.

ಇಂಧನ ಇಲಾಖೆಯಂತಹ ಆಯಕಟ್ಟಿನ ಸಚಿವಾಲಯಗಳು ಶೋಭಾ ಅವರಿಗೆ ನೀಡಿರುವ ಬಗ್ಗೆ ಆಗಿನಿಂದಲೇ ರಾಜ್ಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಕೆ.ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಮೊದಲಾದ ನಾಯಕರು ಆಗಲೇ, ಶೋಭಾ ವಿರುದ್ಧ  ವಿರುದ್ಧ ಹೈಕಮಾಂಡ್ ವರೆಗೂ ದೂರು ಕೊಟ್ಟು ಬಂದಿದ್ದರು.

ಬಿಎಸ್ ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶೋಭಾ ಅವರು, ಬಿಎಸ್ ವೈ ಬಿಜೆಪಿ ತೊರೆದು ಕೆಜೆಪಿ ರಚಿಸಿದಾಗಲೂ, ನಂತರ ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವಾಗಲೂ ಬಿಎಸ್ ವೈ ರನ್ನು ಹಿಂಬಾಲಿಸಿದ್ದರು. ಬಿಜೆಪಿಯ ಸಿದ್ಧಾಂತಕ್ಕನುಗುಣವಾಗಿ ಮಾತನಾಡಬಲ್ಲಂತಹ ಶೋಭಾರಂತಹ ಬೇರೊಂದು ಮಹಿಳಾ ನಾಯಕಿಯರು  ರಾಜ್ಯದಲ್ಲಿ ಇಲ್ಲವಾದರೂ, ಶೋಭಾ ಅವರು ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಆಶ್ರಯದಲ್ಲೇ ಬೆಳೆದರು. ಸದ್ಯ, ಅದೇ ಅವರ  ವಿರೋಧಿಗಳಿಗೆ ಆಹಾರವಾಗಿ ಸಿಕ್ಕಿದೆ.

ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದೆಡೆಗೆ

೨೦೧೦ ರ ಬಳಿಕ ತೀವ್ರವಾದ ಪಕ್ಷದೊಳಗಿನ ಆಂತರಿಕ ಕಚ್ಚಾಟದಿಂದ ಮುಜುಗರಕ್ಕೀಡಾಗಿ ರೋಸಿ ಹೋದ ಹೈಕಮಾಂಡ್, ಶೋಭಾರನ್ನು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದೆಡೆಗೆ ತಿರುಗುವಂತೆ ಮನವೊಲಿಸಲು ಯಶಸ್ವಿಯಾಯಿತು. ದೇಶದಲ್ಲಿ ಮೋದಿ ಅಲೆ ಉತ್ತುಂಗದಲ್ಲಿದ್ದ 2014 ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾರನ್ನು ಕಣಕ್ಕಿಳಿಸಲಾಯಿತು. ಶೋಭಾ ದಕ್ಷಿಣ ಕನ್ನಡದ ಪುತ್ತೂರು ಮೂಲದವರು. ಹಾಗಾಗಿ, ಅವರ ಬದಲು ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಕೂಗು ಆ ವೇಳೆಯೇ ಇತ್ತಾದರೂ, ಮೋದಿ ಅಲೆಯ ಅಬ್ಬರದಲ್ಲಿ ಶೋಭಾ 1.81 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಹಿಂದುತ್ವದ  ಬುನಾದಿ ಇರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 2019 ರಲ್ಲೂ ಶೋಭಾ ಅವರನ್ನೇ ಕಣಕ್ಕಿಳಿಸಲಾಗಿತ್ತು. ಆ ವೇಳೆ ಗೋಬ್ಯಾಕ್ ಅಭಿಯಾನ ತೀವ್ರಗೊಂಡಿದ್ದರೂ, ಫಲಿತಾಂಶ ವ್ಯತಿರಿಕ್ತವಾಗಿ ಬಂದಿತ್ತು. ಸುಮಾರು, 3.5 ಲಕ್ಷ ಅಂತರದ ಮತಗಳಿಂದ ಶೋಭಾ ಅವರು ಕಾಂಗ್ರೆಸ್ / ಜೆಡಿಎಸ್‌ ಅಭ್ಯರ್ಥಿ  ಪ್ರಮೋದ್ ಮಧ್ವರಾಜ್ ವಿರುದ್ಧ ಅನಾಯಾಸವಾಗಿ ಗೆದ್ದಿದ್ದರು.

ಪಕ್ಷದೊಳಗೆ ಸಿಗುತ್ತಿಲ್ಲ ಅರ್ಹ ಗೌರವ

ಕೇಂದ್ರ ಸರ್ಕಾರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾಗಿಯೂ, ಸದ್ಯ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿರುವ ಶೋಭಾ ಅವರ ಚುನಾವಣಾ, ರಾಜಕೀಯ ಗ್ರಾಫ್ ಉತ್ತಮವಾಗಿದ್ದರೂ ಪಕ್ಷದಲ್ಲಿ ಅವರಿಗೆ ಯಾವುದೇ ಅರ್ಹ ಬೆಲೆಯೂ ದಕ್ಕುತ್ತಿಲ್ಲ ಅನ್ನುವುದು ಇತ್ತೀಚಿಗಿನ ಪ್ರಹಸನಗಳು ಸಾಬೀತು ಪಡಿಸಿವೆ. ಸ್ಥಳೀಯ ಕಾರ್ಯಕರ್ತರ ವಿರೋಧದ ಕಾರಣವಾಗಿ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಳುಹಿಸಲಾಗಿದೆ. ಈ ಹಿಂದೆ ಯಶವಂತಪುರ ಕ್ಷೇತ್ರದ ಶಾಸಕಿಯಾಗಿದ್ದರೂ, ಬದಲಾದ ರಾಜಕೀಯ ಚಿತ್ರಣದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಗೆಲುವು ಉಡುಪಿ-ಚಿಕ್ಕಮಗಳೂರಿನಷ್ಟು ಸರಳವಾಗಿಯೇನೂ ಇಲ್ಲ.

ಈಗಾಗಲೇ, ಹಾಲಿ ಸಂಸದರಾಗಿರುವ ಡಿ.ವಿ ಸದಾನಂದಗೌಡ ಹಾಗೂ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಶವಂತಪುರದ ಶಾಸಕ ಎಸ್.ಟಿ ಸೋಮಶೇಖರ್ ಅವರು ಶೋಭಾ ವಿರುದ್ಧ ಅಸಮಾಧಾನದಿಂದ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಕೂಡಾ ಭಾರೀ ಕಸರತ್ತು ನಡೆಸುತ್ತಿದ್ದು, ಶೋಭಾ ವಿರುದ್ಧ  ಅಸಮಾಧಾನವನ್ನೇ ತನ್ನ ಪರವಾಗಿ ಬಳಸಿಕೊಳ್ಳಲು ಯೋಜಿಸುತ್ತಿದೆ. ಹೀಗಾಗಿ, ಶೋಭಾ ಅವರ ರಾಜಕೀಯ ಜೀವನದಲ್ಲಿ ಈ ಬಾರಿಯ ಚುನಾವಣೆ ಮಹತ್ವ ಪಡೆದಿದೆ.

ಬಿಎಸ್ ವೈ ಕೃಪೆಯಿಂದ ಟಿಕೆಟ್ - ಮೋದಿ ಪ್ರಭಾವದಿಂದ ಗೆಲುವು

ಸದ್ಯ, ಶೋಭಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ಬಿಜೆಪಿ ನಾಯಕರ ಪ್ರಕಾರ, ʼಇಷ್ಟೆಲ್ಲಾ ವಿರೋಧಗಳಿದ್ದರೂ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲು ಬಿಎಸ್ ಯಡಿಯೂರಪ್ಪ ಒಬ್ಬರೇ ಕಾರಣ. ಅದೇ ರೀತಿ, ಸ್ಥಳೀಯ ಕಾರ್ಯಕರ್ತರ ಅಸಮಾಧಾನ ಇದ್ದರೂ ಭಾರೀ ಅಂತರದಿಂದ ಪಡೆದಿರುವ ಗೆಲುವು ನರೇಂದ್ರ ಮೋದಿ ಅವರ ಪ್ರಭಾವದ ಪರಿಣಾಮ ಮಾತ್ರʼ. ಕೆ.ಎಸ್ ಈಶ್ವರಪ್ಪ, ಸಿ.ಟಿ ರವಿ ಮೊದಲಾದವರು ಒಂದಲ್ಲ ಒಂದು ರೀತಿಯಲ್ಲಿ ಇದನ್ನೇ ಹೇಳಿದ್ದಾರೆ.

ಕಾರ್ಯಕರ್ತರು ʼಗೋ ಬ್ಯಾಕ್ʼ ಅಂದರೂ ಶೋಭಾರನ್ನು ಬೆಂಗಳೂರು ಉತ್ತರಕ್ಕೆ ಕರೆದುಕೊಂಡು ಬಂದು ಡಿ.ವಿ ಸದಾನಂದ ಗೌಡರ ಟಿಕೆಟ್ ತಪ್ಪಿಸಿದ್ದಾರೆ ಎಂದು ಈಶ್ವರಪ್ಪ ಅವರು ಬಿಎಸ್ ವೈ ವಿರುದ್ಧ ಹರಿಹಾಯ್ದಿದ್ದರು. ಅಂತೆಯೇ, ಮೋದಿ ಮುಖ ನೋಡಿ ಮಾತ್ರ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ಸಿಟಿ ರವಿ ಅವರು ಹೇಳಿರುವುದು ಶೋಭಾ ಅವರನ್ನು ಕುಟುಕುವ ಉದ್ದೇಶದಿಂದಲೇ ಎಂಬುದು ಚಿಕ್ಕಮಗಳೂರು ರಾಜಕಾರಣ ಬಲ್ಲವರ ಮಾತು.

ಒಟ್ಟಾರೆ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ, ಹಣ ಬಲ ಇಲ್ಲದೆ ದಕ್ಷಿಣ ಕನ್ನಡದ ಕುಗ್ರಾಮ ವೊಂದರಿಂದ ದೆಹಲಿ ರಾಜಕಾರಣದವರೆಗೆ ಬೆಳೆದು ಬಂದ ಶೋಭಾ ಅವರಿಗೆ ಸ್ವಪಕ್ಷದಲ್ಲೇ ಅರ್ಹ ಗೌರವ ಲಭಿಸುತ್ತಿಲ್ಲ ಅನ್ನುವುದು ವಾಸ್ತವ. 



Tags:    

Similar News