ಮತದಾರರ ಸೇವಾ ಕೇಂದ್ರ : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ
ನಗರ ವ್ಯಾಪ್ತಿಯಲ್ಲಿ 1409 ಕಡೆ 3ಕ್ಕಿಂತ ಹೆಚ್ಚು ಮತಗಟ್ಟೆಗಳು ಬರಲಿದ್ದು, 3ಕ್ಕಿಂತ ಹೆಚ್ಚು ಮತಗಟ್ಟೆಗಳು ಬರುವ ಕಡೆ ಮತದಾರರ ಸೇವಾ ಕೇಂದ್ರ ಸ್ಥಾಪಿಸಬೇಕು.;
ಬೆಂಗಳೂರಿನಲ್ಲಿ 3ಕ್ಕಿಂತ ಹೆಚ್ಚು ಮತಗಟ್ಟೆಗಳಿರುವ ಸ್ಥಳಗಳಲ್ಲಿ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತದಾರರ ಸೇವಾ ಕೇಂದ್ರ ಹಾಗೂ ಮತಗಟ್ಟೆಯ ಎಲ್ಲಾ ಮಾಹಿತಿಯುಳ್ಳ ನಿರ್ದೇಶನ ಫಲಕಗಳನ್ನು ಅಳವಡಿಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯಕ್ತ ತುಷಾರ್ ಗಿರಿ ನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ವಿವಿಧ ವಿಷಯಗಳ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ 1409 ಕಡೆ 3ಕ್ಕಿಂತ ಹೆಚ್ಚು ಮತಗಟ್ಟೆಗಳು ಬರಲಿದ್ದು, 3ಕ್ಕಿಂತ ಹೆಚ್ಚು ಮತಗಟ್ಟೆಗಳು ಬರುವ ಕಡೆ ಮತದಾರರ ಸೇವಾ ಕೇಂದ್ರ ಸ್ಥಾಪಿಸಬೇಕು. ಜೊತೆಗೆ ಮಾಡಲ್ ಲೇಔಟ್ ಪ್ಲಾನ್ ಮಾಡಿಕೊಂಡು ಮತಗಟ್ಟೆಗಳ ಸ್ಥಳದಲ್ಲಿ ಏನೆಲ್ಲಾ ವ್ಯವಸ್ಥೆಯಿದೆ, ಎಲ್ಲೆಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬುದರ ಸಂಪೂರ್ಣ ವಿವರಗಳುಳ್ಳ ನಿರ್ದೇಶನ ಫಲಕಗಳನ್ನು ಅಳವಡಿಸಬೇಕು. ಅಲ್ಲದೆ ಮತದಾರರ ಸಹಾಯಕ್ಕಾಗಿ ಸ್ವಯಂ ಸೇವಕರನ್ನು ನಿಯೋಜಿಸಬೇಕು ಎಂದು ಹೇಳಿದರು.
ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಮಾಡಿ
ಪಾರ್ಕಿಂಗ್ ವ್ಯವಸ್ಥೆಯಿರುವ ಮತಗಟ್ಟೆಗಳ ಸ್ಥಳದಲ್ಲಿ ಪಾರ್ಕಿಂಗ್ ಸೂಚನಾ ಫಲಕಗಳನ್ನು ಅಳವಡಿಸಬೇಕು. ಜೊತೆಗೆ ಪಾರ್ಕಿಂಗ್ ಸ್ಥಳದಲ್ಲಿ ಎಷ್ಟು ವಾನಗಳನ್ನು ನಿಲ್ಲಿಸಬಹುದು ಎಂಬುದರ ಮಾಹಿತಿ ನೀಡಬೇಕು.ವಾಹನಗಳು ಸರಿಯಾದ ಕ್ರಮದಲ್ಲಿ ನಿಲುಗಡೆ ಮಾಡುವ ಸಲುವಾಗಿ ಸ್ವಯಂ ಸೇವಕರನ್ನು ನಿಯೋಜಿಸಲು ಸೂಚನೆ ನೀಡಿದರು.
ವಿವಿಧ ಮಾದರಿಯ ಮತಗಟ್ಟೆ ಗಳ ಅನುಷ್ಠಾನ
ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಾಮಾನ್ಯ ಮತಗಟ್ಟೆಗಳ ಜೊತೆಗೆ ಸಖಿ(ಪಿಂಕ್) ಮತಗಟ್ಟೆ, ಯೂತ್ ಮತಗಟ್ಟೆ, ಥೀಮ್ ಆಧಾರಿತ, ಮತಗಟ್ಟೆ, ವಿಶೇಷ ಚೇತರ ಮತಗಟ್ಟೆ ಮಾದರಿಯ ಮತಗಟ್ಟೆಗಳನ್ನು ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ
ಮತಗಟ್ಟೆಗಳಿಗೆ ವಿಶೇಷ ಚೇನತರು ಮತದಾನ ಮಾಡಲು ಬರುತ್ತಾರೆ. ಈ ನಿಟ್ಟಿನಲ್ಲಿ ವಿಶೇಷ ಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಜೊತೆಗೆ ವಿಶೇಷ ಚೇತನರನ್ನು ಕರೆದೊಯ್ಯಲು ಸ್ವಯಂ ಸೇವಕರನ್ನು ನಿಯೋಜನೆ ಮಾಡಬೇಕೆಂದು ಸೂಚಿಸಿದರು.
ಮೆಡಿಕಲ್ ಕಿಟ್ ಹಾಗೂ ಆಂಬುಲೆನ್ಸ್ ವ್ಯವಸ್ಥೆ
ಮತಗಟ್ಟೆಗಳ ಬಳಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಮೆಡಿಕಲ್ ಕಿಟ್ ವ್ಯವಸ್ಥೆಯ ಜೊತೆಗೆ ತುರ್ತು ಕ್ರಮಕ್ಕಾಗಿ ಆಂಬುಲೆನ್ಸ್ ನ ವ್ಯವಸ್ಥೆ ಮಾಡಿಕೊಂಡಿರಬೇಕು. ಮತದಾರರ ಅನುಕೂಲಕ್ಕಾಗಿ ಸ್ಥಾಪಿಸಿರುವ ಹೆಲ್ಪ್ ಡೆಸ್ಕ್ ಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಬೇಕೆಂದು ಸೂಚನೆ ನೀಡಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್, ಎಲ್ಲಾ ವಲಯ ಜಂಟಿ ಆಯುಕ್ತರು, ಎಲ್ಲಾ ಮುಖ್ಯ ಅಭಿಯಂತರರು, ಮುಖ್ಯ ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.