ಸಂಗಣ್ಣ ಕರಡಿಗೆ ಕೈ ತಪ್ಪಿದ ಟಿಕೆಟ್: ಕೊಪ್ಪಳ ಬಿಜೆಪಿ ಕಚೇರಿಗೆ ಕಲ್ಲು ತೂರಿದ ಬೆಂಬಲಿಗರು
ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಆಕ್ರೋಶಗೊಂಡ ಅವರ ಬೆಂಬಲಿಗರು ಕೊಪ್ಪಳ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಾಂಧಲೆ ನಡೆಸಿದ್ದಾರೆ;
ಕೊಪ್ಪಳ: ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಸಂಸದ ಸಂಗಣ್ಣ ಕರಡಿ ಅವರ ಬೆಂಬಲಿಗರು ಜಿಲ್ಲಾ ಬಿಜೆಪಿ ಕಚೇರಿಗೆ ಕಲ್ಲು ತೂರಿ ದಾಂಧಲೆ ನಡೆಸಿದ್ದಾರೆ.
ಗುರುವಾರ ಬೆಳಿಗ್ಗೆ ಬಿಜೆಪಿ ಕಚೇರಿ ಎದುರು ಜಮಾಯಿಸಿದ ಸಂಗಣ್ಣ ಕರಡಿ ಬೆಂಬಲಿಗರು ನೂತನ ಅಭ್ಯರ್ಥಿ ವೈದ್ಯ ಡಾ. ಬಸವರಾಜ ಕ್ಯಾವಟರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಅಭ್ಯರ್ಥಿ ಬಸವರಾಜ ಕ್ಯಾವಟರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಸುದ್ದಿಗೋಷ್ಠಿ ಮುಗಿಸಿ ಹೊರ ಬರುತ್ತಿದ್ದಂತೆ ಸಂಗಣ್ಣ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದು, ಒಂದು ಹಂತದಲ್ಲಿ ಪರಿಸ್ಥಿತಿ ಕೈ ಮಿರುವ ಹಂತಕ್ಕೆ ತಲುಪಿತ್ತು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಸಂಗಣ್ಣ ಬೆಂಬಲಿಗರ ಆಕ್ರೋಶಕ್ಕೆ ಬಿಜೆಪಿ ಕಚೇರಿಯ ಕಿಟಕಿ ಗಾಜುಗಳು, ಪೀಠೋಪಕರಣಗಳು ಧ್ವಂಸವಾಗಿವೆ.
ಬೆಂಬಲಿಗರ ಕೃತ್ಯದ ಕುರಿತು ಪ್ರತಿಕ್ರಿಯಿಸಿದ ಸಂಸದ ಸಂಗಣ್ಣ ಕರಡಿ, ನನಗೆ ಟಿಕೆಟ್ ಕೈ ತಪ್ಪಿದ್ದರಿಂದ ಬೆಂಬಲಿಗರಿಗೆ ನೋವಾಗಿದೆ. ಅವರನ್ನು ಸಮಾಧಾನ ಪಡಿಸುವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದನ್ನು ಧೃಡಪಡಿಸಿದ ಅವರು, ಎರಡು ದಿನಗಳ ಕಾಲ ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ, ಯೋಚನೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವೆ ಎಂದು ಹೇಳಿದ್ದಾರೆ.