ಜೆಎನ್‌ಯು ಕ್ಯಾಂಪಸ್‌ನಲ್ಲಿ ಘರ್ಷಣೆ: ಮೂರು ಮಂದಿಗೆ ಗಾಯ
ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ವಾಗ್ವಾದ ನಡೆದಿದ್ದು, ಗೊಂದಲ ಉಂಟಾಗಿದೆ.;
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಬೆಂಬಲಿತ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದೆ. ಕೆಲವು ವಿದ್ಯಾರ್ಥಿಗಳನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಈ ಬಗ್ಗೆಎಕ್ಸ್ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳನ್ನು ಕೋಲಿನಿಂದ ಥಳಿಸುತ್ತಿರುವುದನ್ನು ಹಾಗೂ ಮತ್ತೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಸೈಕಲ್ ಎಸೆಯುತ್ತಿರುವುದನ್ನು ಕಾಣಬಹುದು. ವಿಶ್ವವಿದ್ಯಾನಿಲಯದ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಾಣುತ್ತಿದೆ. ಗುಂಪು ಗುಂಪಾಗಿ ವ್ಯಕ್ತಿಗಳನ್ನು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ದಾಖಲಾಗಿದೆ.
ಪರಸ್ಪರರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ವಿಶ್ವವಿದ್ಯಾನಿಲಯದ ಆಡಳಿತದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ನಿಖರ ಸಂಖ್ಯೆ ಗೊತ್ತಾಗಿಲ್ಲ.