ಐತಿಹಾಸಿಕ ʻಬೆಂಗಳೂರು ಕರಗʼ ಮಹೋತ್ಸವ ಆರಂಭ
ಬೆಂಗಳೂರಿನ ಪ್ರಸಿದ್ಧ ಉತ್ಸವಗಳಲ್ಲಿ ಒಂದಾಗಿರುವ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಸೋಮವಾರದಿಂದ (ಏಪ್ರಿಲ್ 15)ರಿಂದ ಪ್ರಾರಂಭವಾಗಿದೆ. ಏಪ್ರಿಲ್ 25ರ ವರೆಗೆ ಈ ಮಹೋತ್ಸವ ನಡೆಯಲಿದೆ.;
ವಿಶ್ವ ವಿಖ್ಯಾತ, ಐತಿಹಾಸಿಕ ʻಬೆಂಗಳೂರು ಕರಗ ಮಹೋತ್ಸವʼ ಇಂದಿನಿಂದ (ಏಪ್ರಿಲ್ 15) ಪ್ರಾರಂಭವಾಗಿದೆ. ಕರಗ ಮಹೋತ್ಸವವು ಏಪ್ರಿಲ್ 15ರಿಂದ ಏಪ್ರಿಲ್ 23ರ ವರೆಗೆ ನಡೆಯಲಿದೆ.
ಈ ಬಾರಿಯ ಕರಗ ಮಹೋತ್ಸವವು ಹಲವು ವಿಶೇಷತೆಗಳಿಂದ ಕೂಡಿದೆ. ಬರೋಬ್ಬರಿ 13 ಬಾರಿ ಕರಗ ಹೊತ್ತಿರುವ ಖ್ಯಾತಿ ಗಳಿಸಿರುವ ಪೂಜಾರಿ ಎ. ಜ್ಞಾನೇಂದ್ರ ಅವರು ಈ ಬಾರಿಯ ಕರಗವನ್ನು ಹೊರಲಿದ್ದಾರೆ. ಕೊರೊನಾ ಸೋಂಕು ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚಿನ ವರ್ಷದಲ್ಲಿ ಕರಗ ಮಹೋತ್ಸವ ಸರಳವಾಗಿ ನಡೆದಿತ್ತು. 2019-20ನೇ ಸಾಲಿನಲ್ಲಿ ದೇವಸ್ಥಾನಕ್ಕೆ ಕರಗ ಮಹೋತ್ಸವ ಸೀಮಿತ ಮಾಡಲಾಗಿತ್ತು. ಅದಾದ ನಂತರದ ವರ್ಷಗಳಲ್ಲೂ ಈ ಹಿಂದಿನಂತೆ ಜನಸ್ತೋಮ ಸೇರಿ ಉತ್ಸವ ನೆರವೇರಿರಲಿಲ್ಲ. ಈ ಬಾರಿ ಅದ್ಧೂರಿ ಕರಗ ಮಹೋತ್ಸವಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಅಂದಾಜು 3000 ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಏಪ್ರಿಲ್ 21ಕ್ಕೆ ಸಂಪಂಗಿ ಕೆರೆಯಲ್ಲಿ ಹಸಿ ಕರಗ ನಡೆಯಲಿದ್ದು, ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನರವೇರಲಿದೆ.
ಸೋಮವಾರ ರಾತ್ರಿ 10 ಗಂಟೆಗೆ ಕರಗ ರಥೋತ್ಸವ ಧ್ವಜಾರೋಹಣ ನರವೇರಲಿದೆ. ಏಪ್ರಿಲ್ 16 ರಿಂದ 19ರ ವರೆಗೆ ಪ್ರತಿ ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ ನಡೆಯಲಿದೆ. ಏಪ್ರಿಲ್ 21ರಂದು ಹಸಿ ಕರಗ, ಏಪ್ರಿಲ್ 23ಕ್ಕೆ ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ರಥೋತ್ಸವ ನಡೆಯಲಿದೆ. ಏಪ್ರಿಲ್ 24ಕ್ಕೆ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಗಾವು ಪೂಜೆ ಹಾಗೂ ಏಪ್ರಿಲ್ 25ರಂದು ವಸಂತೋತ್ಸವ ಧ್ವಜಾರೋಹಣ ನಡೆಯಲಿದೆ ಎಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಸತೀಶ್ ಅವರು ತಿಳಿಸಿದ್ದಾರೆ.