5, 8, 9ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಸುಪ್ರೀಂತಡೆ: ಒಣ ಪ್ರತಿಷ್ಠೆ ಬಿಡಲು ಸರ್ಕಾರಕ್ಕೆ ಫಾಫ್ರೆ ಆಗ್ರಹ

5, 8, ಮತ್ತು 9ನೇ ತರಗತಿ ಬೋರ್ಡ್‌ ಪರೀಕ್ಷೆಗಳಿಗೆ ಸುಪ್ರೀಂಕೋರ್ಟ್‌ ಮತ್ತೆ ತಡೆಯಾಜ್ಞೆ ನೀಡಿರುವುದನ್ನು ʼಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ)ʼ ಸ್ವಾಗತಿಸಿದೆ.;

Update: 2024-03-14 08:22 GMT

ಬೆಂಗಳೂರು: 5 ಮತ್ತು 8 ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವ ಸರ್ಕಾರದ ಕಾನೂನು ಬಾಹಿರ ಕ್ರಮವನ್ನು ತಡೆಹಿಡಿದ ಸುಪ್ರೀಂ ಕೋರ್ಟ್‌ ಆದೇಶವನ್ನು ʼಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ)ʼ ಸ್ವಾಗತಿಸಿದೆ.

ಸುಪ್ರೀಂ ಕೋರ್ಟ್ ಸಂವಿಧಾನದ ಮೂಲಭೂತ ಹಕ್ಕಾದ 21ಎ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಪ್ರಕರಣ 30ನ್ನು ಎತ್ತಿ ಹಿಡಿದಿರುವುದನ್ನು ಫಾಫ್ರೆ ಸ್ವಾಗತಿಸುತ್ತದೆ ಎಂದು ಫಾಫ್ರೆ ಸಂಚಾಲಕರು ಹಾಗು ಶಿಕ್ಷಣ ತಜ್ಞರಾಗಿರುವ ನಿರಂಜನಾರಾಧ್ಯ ವಿ.ಪಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್‌ ತಡೆಯಾಜ್ಞೆ | 5, 8, 9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ

“ದೇಶದಾದ್ಯಂತ ಯುಪಿಎ ಸರ್ಕಾರ 2009 ರಲ್ಲಿ ರೂಪಿಸಿ 2010 ರಲ್ಲಿ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಿಯಲ್ಲಿದ್ದು, ಮೌಲ್ಯಮಾಪನ ಮತ್ತು ಕಲಿಕಾ ಫಲಿತಾಂಶ ಕುರಿತಂತೆ ಕೇಂದ್ರ ಸರ್ಕಾರ 2010 ರಲ್ಲಿ ರೂಪಿಸಿರುವ ನಿಯಮ 23ರ ಅನ್ವಯ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಮಾತ್ರ ಅವಕಾಶವಿದೆ. ಮುಂದುವರಿದು, ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 30, ಮಕ್ಕಳು 8ನೇ ತರಗತಿ ಮುಗಿಸುವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ಪಾಸ್ ಮಾಡುವ ಅಗತ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತದೆ. ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪರೀಕ್ಷೆ ಎಂದರೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಮಾತ್ರ. ಈಗಾಗಲೇ ನಡೆದಿರುವ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಪರೀಕ್ಷೆಗಳು ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಅಗತ್ಯ ದತ್ತಾಂಶಕ್ಕಿಂತ ಹೆಚ್ಚಿನ ವಿವರಗಳನ್ನು ಶಾಲಾ ಹಂತದಲ್ಲಿ ಹೊಂದಿವೆ. ಈ ವಿವರಗಳು ಮಕ್ಕಳ ಮೌಲ್ಯಾ೦ಕನ ಮಾಡಲು ಹತ್ತಾರು ಬಗೆಯ ಮಾಹಿತಿ ಒದಗಿಸುತ್ತವೆ. ಹೀಗಿದ್ದರೂ, ಸರ್ಕಾರ ಕಾನೂನನ್ನು ಉಲ್ಲಂಘಿಸಿ ಪರೀಕ್ಷೆ ಮಾಡಲು ಹೊರಟಾಗ ಕಾನೂನು ಹೋರಾಟ ಅನಿವಾರ್ಯವಾಗಿತ್ತು. ಈ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್‌ ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿಹಿಡಿದಿದ್ದು, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಮಾನ್ಯತೆ ದೊರೆತಿದೆ ಎಂದು ನಿರಂಜನಾರಾಧ್ಯ ವಿ.ಪಿ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಬ್ಲಿಕ್‌ ಪರೀಕ್ಷೆ ಗೊಂದಲ | ಮಕ್ಕಳು, ಪೋಷಕರ ಆತಂಕಕ್ಕೆ ಕುರುಡಾದ ಸರ್ಕಾರ

ಸರಕಾರದ ತನ್ನ ಒಣ ಪ್ರತಿಷ್ಠೆ ಬಿಟ್ಟು ಮಕ್ಕಳ ಹಿತಾಸಕ್ತಿಯನ್ನು ಗೌರವಿಸಿ, ಶಾಲಾ ಹಂತದಲ್ಲಿ ನಡೆದಿರುವ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಆಧಾರದಲ್ಲಿ ಮಕ್ಕಳ ಫಲಿತಾಂಶ ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಕಲಿಕೆ ಅಣಿಗೊಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಪಾಫ್ರೆ ಒತ್ತಾಯಿಸಿದೆ.

Tags:    

Similar News