Actor Darshan Case | ನಟ ಶಿವರಾಜ್‌ಕುಮಾರ್ ಮೊದಲ ಪ್ರತಿಕ್ರಿಯೆ
ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆ ಬಳಿಕ ಶಿವರಾಜ್‌ಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದರು.;
ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ಕೊಲೆ ಪ್ರಕರಣದ ಆರೋಪಿಗಾಗಿ ಜೈಲು ಪಾಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಜ್‌ಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದರು.
‘ಇಂಥ ಘಟನೆಗಳು ಆಗುತ್ತವೆ. ಏನೂ ಮಾಡೋಕೆ ಆಗಲ್ಲ. ಹಣೆಬರಹ ಅಂತ ಒಂದು ಇರುತ್ತದೆ. ಆ ವಿಚಾರ ಬಂದಾಗ ನಾವು ಏನೂ ಮಾಡೋಕೆ ಆಗುವುದಿಲ್ಲ. ಆದರೆ, ಮಾತಾಡೋಕೆ ಹೋದರೂ, ನಾವು ಮಾಡುತ್ತಿರುವುದು ಸರಿಯಾಗಿ ಇದೆಯಾ ಎಂಬುದನ್ನು ಮೊದಲು ಯೋಚನೆ ಮಾಡಬೇಕು. ಅದನ್ನು ಹೊರತುಪಡಿಸಿ ನಾವು ಏನೂ ಹೇಳೋಕೆ ಆಗಲ್ಲ’ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತ ತನ್ನ ಪ್ರೇಯಸಿ ಪವಿತ್ರಾ ಗೌಡ ಎಂಬಾಕೆಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಶೆಡ್‌ವೊಂದರಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ದರ್ಶನ್ ಹಾಗೂ ಗ್ಯಾಂಗ್ ಮೇಲಿದೆ.
ತನಿಖೆ ನಡೆಯುತ್ತಿದ್ದು, ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹಾಗಾಗಿ ಸದ್ಯ ನಟ ದರ್ಶನ್, ಆತನ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳೂ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.