ಮುಂಬೈ, ಫೆ.29 - ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ಸುಜಾತಾ ಆನಂದನ್ ಅವರು ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮುಂಬೈನಲ್ಲಿ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಯ ಕನ್ಸಲ್ಟಿಂಗ್ ಎಡಿಟರ್ ಆಗಿದ್ದ ಆನಂದನ್ (65) ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. ನಾಗ್ಪುರದ ಅವರು ಯುಎನ್‌ಐ ಸುದ್ದಿ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿ, ಆನಂತರ ಔಟ್‌ಲುಕ್, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಸುದೀರ್ಘ ಕಾಲ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಸೇವೆ ಸಲ್ಲಿಸಿದರು.
ಆನಂದನ್ ಅವರು ಲೋಕಮತ್ ಗ್ರೂಪ್ ಮುಖ್ಯ ಸಂಪಾದಕ ರಾಜೇಂದ್ರ ದರ್ದಾ ಅವರನ್ನು ತನ್ನ ಗುರು ಎಂದು ಪರಿಗಣಿಸಿದ್ದರು. ʻನಾನು 1974ರಲ್ಲಿ ಅಧ್ಯಯನ ಮುಗಿಸಿ ಲಂಡನ್‌ನಿಂದ ಹಿಂತಿರುಗಿದ ಬಳಿಕ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮವನ್ನು ಕಲಿಸಿದೆ. ಸುಜಾತಾ 1975-76ರ ಬ್ಯಾಚಿನಲ್ಲಿ ದ್ದಳು. ಬಹಳ ಬುದ್ಧಿವಂತ, ಉಜ್ವಲ ವಿದ್ಯಾರ್ಥಿನಿ. ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಉತ್ಸುಕನಾಗಿದ್ದಳುʼ ಎಂದು ರಾಜೇಂದ್ರ ದರ್ದಾ ಎಕ್ಸ್ ನಲ್ಲಿ ಬರೆದಿದ್ದಾರೆ.
ಲೋಕಮತ್ ಮೀಡಿಯಾದ ಅಧ್ಯಕ್ಷ ವಿಜಯ್ ದರ್ದಾ, ಆನಂದನ್ ಅವರ ನಿಧನದ ಸುದ್ದಿಯಿಂದ ನನಗೆ ಅತೀವ ದುಃಖವಾಗಿದೆ ಎಂದು ಹೇಳಿದ್ದಾರೆ.