ರಾಯಚೂರಿನಲ್ಲಿ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಎದುರೇ ಕಾರ್ಯಕರ್ತರ ಮಾರಾಮಾರಿ

ರಾಜಾ ಅಮರೇಶ್ವರ ನಾಯಕ ಹಾಗೂ ಮಾಜಿ ಸಂಸದ, ಬಿಜೆಪಿ ಟಿಕೆಟ್ ವಂಚಿತ ಬಿ.ವಿ.ನಾಯಕ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

Update: 2024-04-14 06:04 GMT
ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮರಿ ನಡೆದಿದೆ.
Click the Play button to listen to article

ರಾಯಚೂರು: ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌ ಎದುರಲ್ಲೇ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಮಾಜಿ ಸಂಸದ, ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ವಿ.ನಾಯಕ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ.

ಪಕ್ಷದೊಳಗಿನ ಅಸಮಾಧಾನ ಕಡಿಮೆ ಮಾಡಲು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಸಮ್ಮುಖದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ಕರೆಯಲಾಗಿತ್ತು.

ಈ ಸಭೆಗೆ ಮಾಜಿ ಸಂಸದ ಬಿ.ವಿ.ನಾಯಕ ಅವರ ಬೆಂಬಲಿಗರು ಬಿ.ವಿ.ನಾಯಕ ಪರ ಜೈಕಾರ ಹಾಕುತ್ತ ಬಂದರು. ಅಷ್ಟೇ ಅಲ್ಲ 'ಗೋ ಬ್ಯಾಕ್ ರಾಜಾ ಅಮರೇಶ್ವರ ನಾಯಕ' ಎಂಬ ಘೋಷಣೆ ಕೂಗಿದರು. ಇದು ಹಾಲಿ ಸಂಸದ ಗಾಜಾ ಅಮರೇಶ್ವರ ನಾಯಕ ಬೆಂಬಲಿಗರನ್ನು ಕೆರಳಿಸಿತು.

ಅಮರೇಶ್ವರ ನಾಯಕ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಪರಸ್ಪರ ವಾಗ್ವಾದ ನಡೆಯಿತು. ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆ ಕೂಗಿದ್ದರಿಂದ ಪರಸ್ಪರ ತಳ್ಳಾಟ ನೂಕಾಟ ನಡೆಯಿತು. ಸಭೆಯಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದ ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಅವರ ಮೇಲೆ ಹಲ್ಲೆ ನಡೆಯಿತು ಎಂದು ಕಾರ್ಯಕರ್ತರು ತಿಳಿಸಿದರು. ಗೊಂದಲದ ವಾತಾವರಣದಿಂದಾಗಿ ನಾಯಕರು ಸಭೆಯಿಂದ ಹೊರ ನಡೆದರು.

ಬಿ.ವಿ.ನಾಯಕ ಸ್ಥಳಕ್ಕೆ ಬಂದ ನಂತರ ಪರಿಸ್ಥಿತಿ ತಿಳಿಗೊಂಡಿತು. ಸಭೆಯಿಂದ ಹೊರಗೆ ಹೋದವರು ಮರಳಿ ಬರಲಿಲ್ಲ. ಬಿ.ವಿ.ನಾಯಕರಿಗೆ ಆರಂಭದಲ್ಲಿ ಟಿಕೆಟ್ ಭರವಸೆ ಕೊಟ್ಟು ಕೊನೆ ಕ್ಷಣದಲ್ಲಿ ನಿರಾಕರಿಸಿದ್ದರಿಂದ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಈ ಘಟನೆಯಿಂದ ರಾಜ್ಯ ನಾಯಕರು ಮುಜುಗರಕ್ಕೆ ಒಳಗಾದರು.

Tags:    

Similar News