ದೀರ್ಘಾವಧಿ ಚುನಾವಣೆಯಿಂದ ಬಿಜೆಪಿಗೆ ಲಾಭ: ಪ್ರತಿಪಕ್ಷಗಳ ಆರೋಪ

Update: 2024-03-17 10:59 GMT

ಏಳು ಹಂತಗಳ ಲೋಕಸಭೆ ಚುನಾವಣೆಯನ್ನು ಪ್ರತಿಕ್ಷಗಳು ಪ್ರಶ್ನಿಸಿದ್ದು,ಆಡಳಿತಾರೂಢ ಬಿಜೆಪಿಗೆ ಲಾಭವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ದೂರಿವೆ.

ಲೋಕಸಭೆ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ; ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1. ವಿಧಾನಸಭೆ ಚುನಾವಣೆ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಪ್ರಿಲ್ 19, ಆಂಧ್ರಪ್ರದೇಶದಲ್ಲಿ ಮೇ 13 ಮತ್ತು ಒಡಿಶಾದಲ್ಲಿ ನಾಲ್ಕು ಹಂತದಲ್ಲಿ ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. 

ಮೋದಿ ಪ್ರವಾಸಕ್ಕೆ 7 ಹಂತ ಸಹಕಾರಿ: ಖರ್ಗೆ 

ʻಪ್ರಧಾನಿ ನರೇಂದ್ರ ಮೋದಿ ಅವರ ʻಎಲ್ಲೆಡೆ ಪ್ರವಾಸ ಮಾಡಲುʼ ಅನುಕೂಲವಾಗುವಂತೆ ಏಳು ಹಂತಗಳನ್ನು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ʻಏನಾಗಲಿದೆ ಎಂಬ ಬಗ್ಗೆ ನಮಗೆ ಆತಂಕವಿಲ್ಲ. ಆದರೆ, ಮೋದಿ ಅವರು ಎಲ್ಲೆಡೆ ಪ್ರವಾಸ ಮಾಡಲು ಬಯಸುತ್ತಾರೆ. ನಾನು ಸುಮಾರು 12 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ನಾಲ್ಕು ಹಂತಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ಹಂತದಲ್ಲೂ ನಡೆದಿದೆʼ ಎಂದು ಹೇಳಿದರು. 

ಶನಿವಾರದಿಂದ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದು, 70-80 ದಿನ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ವಿರಾಮ ನೀಡಲಾಗುತ್ತದೆ. ಇದರಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ. ನನ್ನ ಪ್ರಕಾರ, ಮೂರ್ನಾಲ್ಕು ಹಂತಗಳಲ್ಲಿ ಚುನಾವಣೆ ಪೂರ್ಣಗೊಳಿಸಬಹುದಿತ್ತುʼ ಎಂದು ಹೇಳಿದರು.

ಪ್ರಜಾಪ್ರಭುತ್ವ ಉಳಿಸಲು ಕೊನೆಯ ಅವಕಾಶ: 

ʻಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸರ್ವಾಧಿಕಾರದಿಂದ ಉಳಿಸಲು ಇದು ಕೊನೆಯ ಅವಕಾಶ. ಭಾರತೀಯರು ನಾವು ʻದ್ವೇಷ, ಲೂಟಿ, ನಿರುದ್ಯೋಗ, ಬೆಲೆ ಏರಿಕೆ ಮತ್ತು ದೌರ್ಜನ್ಯಗಳ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ. ಕೈ ಪರಿಸ್ಥಿತಿಯನ್ನು ಬದಲಾಯಿಸುತ್ತದೆʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. 

ದೀರ್ಘಾವಧಿ ಅಗತ್ಯವಿರಲಿಲ್ಲ: ಟಿಎಂಸಿ 

ಕೇವಲ 42 ಸ್ಥಾನಗಳಿರುವ ಪಶ್ಚಿಮ ಬಂಗಾಳದಲ್ಲಿ ಏಳು ಹಂತದ ಚುನಾವಣೆಗಳ ಅಗತ್ಯವನ್ನು ಪ್ರಶ್ನಿಸಿರುವ ತೃಣಮೂಲ ಕಾಂಗ್ರೆಸ್, ʻಇದು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನ ಮತ್ತು ಕೆಲವು ರಾಜಕೀಯ ಪಕ್ಷಗಳಿಗೆ ಸಹಾಯ ಮಾಡಲು ರೂಪುಗೊಂಡಿದೆʼ ಎಂದಿದೆ. 

ʻನಾವು ಒಂದು ಅಥವಾ ಎರಡು ಹಂತದ ಲೋಕಸಭೆ ಚುನಾವಣೆಯನ್ನು ಬಯಸಿದ್ದೆವು. ಬಹು ಹಂತದ ಚುನಾವಣೆಗಳು ಹಣಕಾಸು ಸೌಲಭ್ಯವಿರುವ ಪಕ್ಷಗಳಿಗೆ ಸಹಾಯ ಮಾಡುತ್ತದೆ ಎನ್ನುವುದು ನಮ್ಮ ಅಭಿಪ್ರಾಯವಾಗಿತ್ತುʼ ಎಂದು ರಾಜ್ಯ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ. 

ʻ2021 ರ ವಿಧಾನಸಭಾ ಚುನಾವಣೆ ಎಂಟು ಹಂತಗಳಲ್ಲಿ ನಡೆಯಿತು. ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಮಾಡಲಾಗುತ್ತಿದೆ ಎನ್ನಲಾಯಿತು. ಈಗ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಕಾರಣವೇನಿದೆʼ ಎಂದು ಕೇಳಿದರು. 

'ಫಲಿತಾಂಶಕ್ಕಾಗಿ ದೀರ್ಖ ಕಾಯುವಿಕೆ- ಇಳಂಗೋವನ್, ಡಿಎಂಕೆ

ಏಪ್ರಿಲ್ 19 ರಂದು ಒಂದೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿ, ಜೂನ್ 4 ರವರೆಗೆ ಫಲಿತಾಂಶಗಳಿಗಾಗಿ ದೀರ್ಘ ಕಾಲ ಕಾಯುವುದು ಕಷ್ಟಕರ ಎಂದು ಡಿಎಂಕೆ ಹೇಳಿದೆ. ʻಫಲಿತಾಂಶಕ್ಕಾಗಿ ಜೂನ್ 4 ರವರೆಗೆ ಕಾಯಲು ಪಕ್ಷ ಸಿದ್ಧವಾಗಬೇಕಿದೆʼ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ. 

ಗೂಂಡಾಗಿರಿ ವಿರುದ್ಧ ಮತ: ಎಎಪಿ 

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ʻಸರ್ವಾಧಿಕಾರ ಮತ್ತು ಗೂಂಡಾಗಿರಿʼ ವಿರುದ್ಧ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಜನರು ಸಾರ್ವತ್ರಿಕ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಆಪ್‌ ಹೇಳಿದೆ.

ಜನರ ಹಕ್ಕು ನಿರಾಕರಣೆ: ಜಮ್ಮು ಮತ್ತು ಕಾಶ್ಮೀರದ ಪಕ್ಷಗಳು 

ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿಲ್ಲ ಎಂದು ಅಲ್ಲಿನ ರಾಜಕೀಯ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಜನರ  ಹಕ್ಕು ನಿರಾಕರಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. 

ʻಸಂಸತ್ ಚುನಾವಣೆಗೆ ಅನುಕೂಲಕರ ಪರಿಸ್ಥಿತಿ ಇರುವಾಗ, ವಿಧಾನಸಭೆ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ? ಏನೋ ಕಿತಾಪತಿ ನಡೆಯುತ್ತಿದೆʼ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು. ಜನರಿಗೆ ಪ್ರಜಾಪ್ರಭುತ್ವದ ಹಕ್ಕು ನಿರಾಕರಿಸಲಾಗುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ವಕ್ತಾರ ಮೋಹಿತ್‌ ಭಾನ್‌ ಆರೋಪಿಸಿದ್ದಾರೆ. ಸಂಸತ್ತಿನ ಚುನಾವಣೆ ನಡೆಯುತ್ತದೆ. ಆದರೆ, ಪಂಚಾಯತ್ ಮತ್ತು ಮುನ್ಸಿಪಲ್ ಚುನಾವಣೆಗಳು ನಡೆಯುತ್ತಿಲ್ಲʼ ಎಂದು ಭಾನ್ ದೂರಿದ್ದಾರೆ. 

'ಪ್ರಜಾಪ್ರಭುತ್ವದ ಹಬ್ಬ ಬಂದಿದೆ' : ಮೋದಿ 

ದಿನಾಂಕ ಘೋಷಿಸಿದ ನಂತರ ಮೋದಿ ಅವರು ಎಕ್ಸ್‌ ನ ಪೋಸ್ಟ್‌ಗಳಲ್ಲಿ ʻಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಇಲ್ಲಿದೆ! 2024 ರ ಲೋಕಸಭೆ ಚುನಾವಣೆ ದಿನಾಂಕ ಘೋಷಿಸಿದ್ದು, ಬಿಜೆಪಿ-ಎನ್‌ಡಿಎ, ಚುನಾವಣೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆʼ ಎಂದು ಬರೆದಿದ್ದಾರೆ.

Tags:    

Similar News