ಹನುಮವಿಹಾರಿ ವಜಾ: ವೈಎಸ್‌ಆರ್‌ಸಿಪಿ ಕ್ರಮಕ್ಕೆ ಖಂಡನೆ

Update: 2024-02-27 13:22 GMT

ಆಂಧ್ರಪ್ರದೇಶ ಕ್ರಿಕೆಟ್ ತಂಡದ ನಾಯಕತ್ವದಿಂದ ತೆಗೆದುಹಾಕಲ್ಪಟ್ಟ ಹನುಮವಿಹಾರಿ ಅವರಿಗೆ ರಾಜಕೀಯ ಪಕ್ಷಗಳ ಮುಖ್ಯಸ್ಥರು ಸೇರಿದಂತೆ ವಿವಿಧ ವಲಯಗಳಿಂದ ಬೆಂಬಲ ಸಿಗುತ್ತಿದೆ. 

ವಿಹಾರಿ ಅವರನ್ನು ಅವಮಾನಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಎಂದು ಬಣ್ಣಿಸಿದ್ದಾರೆ. 

ನಾಯ್ಡು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ʻಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕೂಡ ವೈಎಸ್‌ಆರ್‌ಸಿಪಿಯ ಸೇಡಿನ ರಾಜಕೀಯಕ್ಕೆ ಬಲಿಯಾಗಿರುವುದು ನಾಚಿಕೆಗೇಡಿನ ಸಂಗತಿʼ ಎಂದು ಹೇಳಿದ್ದಾರೆ. ʻ ಅಂತಾರಾಷ್ಟ್ರೀಯ ಕ್ರಿಕೆಟಿಗ ಹನುಮ ವಿಹಾರಿ ಅವರು ಆಂಧ್ರಪ್ರದೇಶಕ್ಕಾಗಿ ಎಂದಿಗೂ ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ಹಂತ ತಲುಪಿದ್ದಾರೆ. ಹನುಮ, ನೀವು ಗಟ್ಟಿಯಾಗಿರಿ. ಈ ಅನ್ಯಾಯದ ಕ್ರಮಗಳು ಆಂಧ್ರಪ್ರದೇಶ ಅಥವಾ ಜನರ ನಿಜವಾದ ಮನೋಭಾವ ವನ್ನು ಪ್ರತಿಬಿಂಬಿಸುವುದಿಲ್ಲ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಮತ್ತು ನ್ಯಾಯ ಮೇಲುಗೈ ಸಾಧಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆʼ ಎಂದು ಮಾಜಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. 

ನಾಯ್ಡು ಅವರು ವಿಹಾರಿ ಅವರನ್ನು ಗೌರವಿಸುತ್ತಿರುವ ಚಿತ್ರವನ್ನು ಟಿಡಿಪಿ ಪೋಸ್ಟ್ ಮಾಡಿದೆ. ʻಹಲವು ವರ್ಷಗಳ ಹಿಂದೆ ಅವರು ಉದಯೋನ್ಮುಖ ಕ್ರಿಕೆಟಿಗ ರಾಗಿದ್ದಾಗ ಅವರನ್ನು ಅಭಿನಂದಿಸಿದ್ದೆವು. ವೈಎಸ್ಆರ್ ಕಾಂಗ್ರೆಸ್ ನ ವರ್ತನೆಗೆ ಇದನ್ನು ಹೋಲಿಕೆ ಮಾಡಿʼ ಎಂದಿದೆ. 

ʻಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ?ʼ ಎಂದು ಶರ್ಮಿಳಾ ಅವರು ವಾಗ್ದಾಳಿ ನಡೆಸಿದ್ದಾರೆ.ʻಎಲ್ಲದರಲ್ಲೂ ಕೆಟ್ಟ ರಾಜಕೀಯ ಮಾಡುತ್ತಿರುವ ವೈಎಸ್‌ಆರ್‌ಸಿಪಿ ಈಗ ಕ್ರೀಡೆಯಲ್ಲೂ ಹೀನ ರಾಜಕಾರಣ ಮತ್ತು ಸರ್ವಾಧಿಕಾರ ಪ್ರವೃತ್ತಿಯನ್ನು ತೋರಿಸುತ್ತಿದೆʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಕೂಡ ಎಕ್ಸ್‌ ನಲ್ಲಿ ಕ್ರಿಕೆಟಿಗನಿಗೆ ಬೆಂಬಲ ನೀಡಿದ್ದಾರೆ. ʻ16 ಟೆಸ್ಟ್ ಪಂದ್ಯಗಳಲ್ಲಿ 5 ಅರ್ಧ ಶತಕ ಮತ್ತು ಒಂದು ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸಿಡ್ನಿ ಟೆಸ್ಟ್‌ನಲ್ಲಿ ಅವರ ಸಾಹಸ ಅವಿಸ್ಮರಣೀಯ. ಆಂಧ್ರಪ್ರದೇಶ ರಣಜಿ ತಂಡದ ನಾಯಕನಾಗಿ ಕಳೆದ 7 ವರ್ಷಗಳಲ್ಲಿ ಆಂಧ್ರ ತಂಡ 5 ಬಾರಿ ನಾಕೌಟ್‌ಗೆ ಅರ್ಹತೆ ಗಳಿಸಲು ಸಹಾಯ ಮಾಡಿದ್ದಾರೆʼ ಎಂದು ಬರೆದಿದ್ದಾರೆ. 

ʻಕಾರ್ಪೊರೇಟರ್ ಬಯಸಿದ ಕಾರಣಕ್ಕಾಗಿ ವಿಹಾರಿ ಅವರನ್ನುನಾಯಕತ್ವದಿಂದ ತೆಗೆಯಲಾಯಿತು. ಆಂಧ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ಭಾರತೀಯ ಕ್ರಿಕೆಟಿಗ ಮತ್ತು ರಣಜಿ ತಂಡದ ನಾಯಕನಿಗಿಂತ ಸ್ಥಳೀಯ ರಾಜಕಾರಣಿ ಹೆಚ್ಚು ಮುಖ್ಯವೆಂದು ಸಾಬೀತಾಗಿದೆ. ಇಂಥ ಸನ್ನಿವೇಶದಲ್ಲಿ 'ಅದುದಂ ಆಂಧ್ರ'ನಂಥ ಕಾರ್ಯಕ್ರಮಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡುವುದರಲ್ಲಿ ಏನು ಅರ್ಥವಿದೆ?ʼ ಎಂದು ಖಂಡಿಸಿದ್ದಾರೆ. 

ಸೋಮವಾರ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಆಂಧ್ರಪ್ರದೇಶ ಸೋಲುಂಡ ಬಳಿಕ ರಾಜೀನಾಮೆ ನೀಡುವಂತೆ ಕೇಳಲಾಗಿತ್ತು. 

Tags:    

Similar News