ಮಣಿಪುರ: ಇಂಫಾಲದಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಓರ್ವ ಬಲಿ
ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಬಳಸಿ ನಡೆಸಿದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ;
ಇಂಫಾಲ್, ಫೆ 24: ಸಂಘರ್ಷ ಪೀಡಿತ ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಡಿಎಂ ಕಾಲೇಜು ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ.
ಒಯಿನಮ್ ಕೆನೆಗಿ ಎಂದು ಗುರುತಿಸಲಾದ 24 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೋರ್ವ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಇಲ್ಲಿಯವರೆಗೆ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಏತನ್ಮಧ್ಯೆ, ಅಪರಿಚಿತ ವ್ಯಕ್ತಿಗಳು ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಪೆಲ್ಪಟ್‌ನಲ್ಲಿರುವ ನಾಗರಿಕ ಸಮಾಜದ ಸಂಘಟನೆಯಾದ ಯುನೈಟೆಡ್ ಕಮಿಟಿ ಮಣಿಪುರ (ಯುಸಿಎಂ) ಕಚೇರಿಗೆ ಬೆಂಕಿ ಹಚ್ಚಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ, ಶನಿವಾರ ಮಧ್ಯರಾತ್ರಿ 12.45 ರ ಸುಮಾರಿಗೆ ಇಂಫಾಲ್ ಪೂರ್ವ ಜಿಲ್ಲೆಯ ಶಾಲೆಯೊಂದರ ಆಡಳಿತ ವಿಭಾಗವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿ, ಸುಟ್ಟು ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆವರಣದಲ್ಲಿ ನಿಲ್ಲಿಸಿದ್ದ ಒಂದು ವಾಹನವನ್ನು ಸಹ ಸುಟ್ಟುಹಾಕಲಾಗಿದೆ.