ಮಹಾರಾಷ್ಟ್ರ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಸಂಕಷ್ಟ

ಮನೋಜ್‌ ಆರೋಪಗಳ ಬಗ್ಗೆ ಸಮಗ್ರ ತನಿಖೆಗೆ ಎಸ್‌ಐಟಿ

Update: 2024-02-27 11:34 GMT
ಮನೋಜ್ ಜಾರಂ

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಮಂಗಳವಾರ (ಫೆಬ್ರವರಿ 27) ಮನೋಜ್‌ ಅವರ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಈ ವಿಷಯವನ್ನು ಬಿಜೆಪಿಯ ಶಾಸಕ ಆಶಿಶ್ ಶೇಲಾರ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಹಿಂಸೆಯನ್ನು ಪ್ರಚೋದಿಸುವ ಪ್ರಚೋದನಕಾರಿ ಮಾತುಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ ಎಂದರು.

ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಮನೋಜ್‌ ಜಾರಂ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಮರಾಠ ಹೋರಾಟಗಾರ ಮನೋಜ್ ಜಾರಂ ಅವರು, ಈಚೆಗೆ "ಫಡ್ನವಿಸ್ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದ್ದರು. ಮುಂಬೈಗೆ ಪಾದಯಾತ್ರೆ ನಡೆಸಿ ಉಪಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದರು.

ಸಲೈನ್ ಮೂಲಕ ವಿಷ ಬೆರೆಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದರಾದರೂ ಅದರ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ.

ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳಿಸಲು, ಧೈರ್ಯಶಾಲಿ ಮತ್ತು ಶಿಸ್ತಿನ ಮರಾಠ ಸಮುದಾಯದ ದಿಕ್ಕು ತಪ್ಪಿಸುವ ಉದ್ದೇಶದಿಂದ ಈ ರೀತಿ ವಿವಾದಾತ್ಮಕವಾದ ಹೇಳಿಕೆಗಳನ್ನು ನೀಡಲಾಗುತ್ತಿದೆ.

ನಾವು ಜಾರಂ ಅವರ ಬೇಡಿಕೆಗಳನ್ನು ಬೆಂಬಲಿಸುತ್ತೇವೆ. ಆದರೆ, ಫಡ್ನವಿಸ್‌ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಜಾರಂ ಅವರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ ಎಂದು ಫಡ್ನವೀಸ್ ಸದನದಲ್ಲಿ ಹೇಳಿದರು. ಜಾರಂ ಅವರು ಯಾರು ಬರೆದುಕೊಟ್ಟಿರುವ ಸ್ಕ್ರಿಪ್ಟ್ ನೋಡಿಕೊಂಡು ಮಾತನಾಡುತ್ತಿದ್ದಾರೆ

ಎಂದು ಎಸ್ಐಟಿ ತನಿಖೆ ನಡೆಸುತ್ತದೆ. ಜಾರಂ ಅವರು ನನ್ನ ವಿರುದ್ಧ ಆರೋಪ ಮಾಡಿರಬಹುದು. ಆದರೆ, ಇಡೀ ಮರಾಠ ಸಮುದಾಯ ನನ್ನ ಬೆಂಬಲಕ್ಕೆ ಇದೆ ಎಂದರು.

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಮನೋಜ್ ಜಾರಂ ಅವರು ಕಳೆದ 17 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸೋಮವಾರ (ಫೆಬ್ರವರಿ 26) ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು.

ಕಳೆದ ವಾರ ನಡೆದ ವಿಶೇಷ ಅಧಿವೇಶನದಲ್ಲಿ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 10ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.

ಆದರೆ, ಜಾರಂ ಅವರು ಇತರ ಹಿಂದುಳಿದ ವರ್ಗಗಳ (ಒಬಿಸಿ) ವರ್ಗದ ಅಡಿಯಲ್ಲಿ ಮರಾಠರಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ, ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದರು.  

Tags:    

Similar News