Actor Darshan Case | ದರ್ಶನ್‌ಗೆ ನಾನೊಬ್ಬಳೇ ಪತ್ನಿ, ಪವಿತ್ರಾ ಗೌಡ ಅಲ್ಲ: ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮಿ ಪತ್ರ
"ನಾನು ದರ್ಶನ್ ಅವರ ಏಕೈಕ ಪತ್ನಿ’’ ಎಂದು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತ್ರ ಬರೆದಿದ್ದಾರೆ.;
‘’ನಾನು ದರ್ಶನ್ ಅವರ ಏಕೈಕ ಪತ್ನಿ’’ ಎಂದು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತ್ರ ಬರೆದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು ಸದ್ಯ ಆರೋಪಿಗಳು ಪರಪ್ಪರನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಘಟನೆ ಕುರಿತು ಸುದ್ದಿಗೋಷ್ಠಿ ಮಾಡುವಾಗ ‘ಪವಿತ್ರಾ ಗೌಡ ಅವರು ದರ್ಶನ್ ಪತ್ನಿ’ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ ನೀಡಿದ್ದರು. ಆ ಬಳಿಕ ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಕೂಡ ಅದೇ ರೀತಿ ಸುದ್ದಿ ಪ್ರಸಾರ ಆಯಿತು. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ. ಜೂನ್ 24 ರಂದು ಪೊಲೀಸ್ ಕಮಿಷನರ್‌ಗೆ ವಿಜಯಲಕ್ಷ್ಮೀ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನ ಪತಿ ದರ್ಶನ್ ಹಾಗೂ ಕೆಲವರನ್ನು ನಿಮ್ಮ ಇಲಾಖೆ ಬಂಧಿಸಿ ಎರಡು ವಾರ ಕಳೆದಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನದೇ ಆದ ಮಾರ್ಗ ಪಡೆದುಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ. ಆದರೂ ಈ ಹತ್ಯೆ ಕೇಸ್‌ನ ಮಾಸ್ಟರ್ ಮೈಂಡ್ ಆಗಿರುವ ಮತ್ತು ಎ-1 ಆರೋಪಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ನಾನು ನಿಮ್ಮಲ್ಲಿ ವಿನಂತಿ ಮಾಡುತ್ತೇನೆ.
ನನ್ನ ಪತಿ ದರ್ಶನ್ ಶ್ರೀನಿವಾಸ್ ಅವರಿಗೆ ಪವಿತ್ರಾ ಗೌಡ ಸ್ನೇಹಿತೆ ನಿಜ. ಆದರೆ ಹೆಂಡತಿಯಲ್ಲ ಎಂಬುದನ್ನು ತಾವು ದಯವಿಟ್ಟು ಗಮನಿಸಿ. ನಾನು ದರ್ಶನ್ ಅವರ ಏಕೈಕ ಪತ್ನಿ. ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ನಮ್ಮ ಮದುವೆ ಧರ್ಮಸ್ಥಳದಲ್ಲಿ 19.05.2003 ರಂದು ನಡೆಯಿತು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ತಾವು ತಪ್ಪಾಗಿ ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಹೇಳಿದ್ದೀರಿ. ಆನಂತರ ಕರ್ನಾಟಕದ ಗೃಹ ಸಚಿವರೂ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಪತ್ನಿ ಬಂಧನ ಎಂದೇ ಸುದ್ದಿ ಪ್ರಸಾರ ಮುಂದುವರಿಸಿದರು.
ನಾನು ಕಾನೂನುಬದ್ಧವಾಗಿ ವಿವಾಹವಾದ ದರ್ಶನ್ ಅವರ ಏಕೈಕ ಹೆಂಡತಿ ಮತ್ತು ನಮ್ಮ ಮಗ ವಿನೀಶ್. ತಪ್ಪಾಗಿ ಪ್ರಸ್ತಾಪವಾಗಿರುವ ಪರಿಣಾಮ ಭವಿಷ್ಯದಲ್ಲಿ ಈ ಪ್ರಕರಣದಿಂದ ನನಗೆ ಹಾಗೂ ಮಗ ವಿನೀಶ್‌ಗೆ ಯಾವುದೇ ಗೊಂದಲ ಅಥವಾ ತೊಂದರೆ ಆಗಬಾರದು.
ಸಂಜಯ್ ಸಿಂಗ್ ಎಂಬುವರನ್ನು ಪವಿತ್ರಾ ಗೌಡ ಮದುವೆಯಾಗಿದ್ದರು ಎನ್ನಲಾಗಿದೆ. ಸಂಜಯ್ ಸಿಂಗ್ ಮೂಲಕ ಪವಿತ್ರಾ ಗೌಡಗೆ ಮಗಳಿದ್ದಾಳೆ. ಈ ಕುರಿತಾಗಿ ನಿಮ್ಮ ಪೊಲೀಸ್ ಫೈಲ್‌ಗಳಲ್ಲಿ ದಾಖಲೆಗಳು ಹಾಗೂ ಮಾಹಿತಿಗಳನ್ನು ಸರಿಪಡಿಸಲು ನಾನು ಕೋರಿಕೊಳ್ಳುತ್ತೇನೆ. ತಪ್ಪಾಗಿ ಪವಿತ್ರಾ ಗೌಡ ಅವರನ್ನು ದರ್ಶನ್ ಹೆಂಡತಿ ಎಂದು ಉಲ್ಲೇಖಿಸಿರುವುದರಿಂದ ನನಗೆ ಕಾನೂನು ಸೇರಿದಂತೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ವಿನಂತಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.