Artificial Intelligence| ಚಾಲಿತ ಗೂಗಲ್‌ ಮ್ಯಾಪ್ಸ್‌ ಬಿಡುಗಡೆ

ದೇಶಿ ಪ್ರತಿಸ್ಪರ್ಧಿ ಓಲಾ ಮ್ಯಾಪ್ಸ್‌ನಿಂದ ಗೂಗಲ್ ತೀವ್ರ ಸ್ಪರ್ಧೆ ಎದುರಿ‌ಸುತ್ತಿದೆ. ನಾಲ್ಕು ಚಕ್ರದ ವಾಹನಗಳಿಗೆ ಒತ್ತಡರಹಿತ ಮಾರ್ಗದರ್ಶನ, ಫ್ಲೈಓವರ್ ಸೂಚನೆ ಮತ್ತು ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಎಲ್ಲಿವೆ ಎಂಬ ಮಾಹಿತಿ ನವೀಕರಿಸಿದ ಗೂಗಲ್‌ ಮ್ಯಾಪ್ಸ್‌ ನ ಕೆಲವು ಹೊಸ ವೈಶಿಷ್ಟ್ಯಗಳಾಗಿವೆ.

Update: 2024-07-25 13:35 GMT

ದೇಶಿ ಪ್ರತಿಸ್ಪರ್ಧಿ ಓಲಾ ಮ್ಯಾಪ್ಸ್‌ನಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಗೂಗಲ್, ಭಾರತದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಮಾಹಿತಿ, ಫ್ಲೈಓವರ್ ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ರಸ್ತೆಯಲ್ಲಿ ದಟ್ಟಣೆ ಕುರಿತು ಮಾಹಿತಿ ನೀಡುವ ಎಐ ಚಾಲಿತ ಗೂಗಲ್ ಮ್ಯಾಪ್ಸ್‌ ಬಿಡುಗಡೆಗೊಳಿಸಿದೆ. ʻಮ್ಯಾಪಿಂಗ್‌ ಕ್ಷೇತ್ರದಲ್ಲಿ ಇದು ಉತ್ತೇಜಕ ಸಮಯʼ ಎಂದು ಗೂಗಲ್‌ ಮ್ಯಾಪ್ಸ್‌ ಉಪಾಧ್ಯಕ್ಷ ಮಿರಿಯಮ್ ಡೇನಿಯಲ್ ಹೇಳಿದರು. 

ಗೂಗಲ್ vs ಓಲಾ: ಆಗಸ್ಟ್ 1 ರಿಂದ ಡೆವಲಪರ್‌ಗಳಿಗೆ ಗೂಗಲ್ ಮ್ಯಾಪ್ಸ್ ಪ್ಲಾಟ್‌ಫಾರ್ಮ್‌ನ ಬೆಲೆಯನ್ನು ಶೇ.70 ರಷ್ಟು ಕಡಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಭಾರತೀಯ ಡೆವಲಪರ್‌ಗಳು ಓಲಾ ಮ್ಯಾಪ್‌ಗಳಿಗೆ ಬದಲಾಗ‌ಬೇಕು ಎಂದು ಹೇಳಿದ ಬಳಿಕ ಗೂಗಲ್ ಈ ನಿರ್ಧಾರಕ್ಕೆ ಬಂದಿದೆ. 

ಗೂಗಲ್‌ನ ಬೆಲೆ ಕಡಿತದ ಬಗ್ಗೆ ಪ್ರತಿಕ್ರಿಯಿಸಿ, ಇದು ಓಲಾದ ಕಾರ್ಯತಂತ್ರದೊಂದಿಗೆ ಹೊಂದಿಕೆಯಾಗುತ್ತದೆ. ಗೂಗಲ್‌ ಮ್ಯಾಪ್‌ ತನ್ನ ಗಮನವನ್ನು ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಾಗಿ ಬಳಕೆದಾರರು ಮತ್ತು ಪಾಲುದಾರರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದರು. 

ʻನಾವು ವಾಸ್ತವವಾಗಿ ನಮ್ಮ ಗಮನವನ್ನು ಪ್ರತಿಸ್ಪರ್ಧಿಗಳ ಮೇಲೆ ಕೇಂದ್ರೀಕರಿಸುವುದಿಲ್ಲ. ನಮ್ಮ ಬಳಕೆದಾರರು ಮತ್ತು ಡೆವಲಪರ್ ಪಾಲುದಾರ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಗಮನ ನೀಡುತ್ತೇವೆ. ಬೆಂಗಳೂರಿನ ನಮ್ಮ ಐಒ ಕನೆಕ್ಟ್ ಕಾರ್ಯಕ್ರಮಕ್ಕೆ ಹೊಂದಿಸಲು ಯತ್ನಿಸುತ್ತಿದ್ದೇವೆ,ʼ ಎಂದುಹೇಳಿದರು.

ಗೂಗಲ್‌ ಮ್ಯಾಪ್ಸ್‌ ವೈಶಿಷ್ಟ್ಯಗಳೇನು?: ಕಿರಿದಾದ ರಸ್ತೆಗಳಿಲ್ಲ ಎಂಬ ಎಚ್ಚರಿಕೆ- ನಾಲ್ಕು ಚಕ್ರಗಳ ವಾಹನಗಳು ಕಿರಿದಾದ ರಸ್ತೆಗಳನ್ನು ಬಳಸುವುದನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ದೇಶದ ವಿಶಾಲ ಮತ್ತು ವೈವಿಧ್ಯಮಯ ರಸ್ತೆ ಜಾಲದಿಂದಾಗಿ, ರಸ್ತೆ ಅಗಲವನ್ನು ಅಂದಾಜು ಮಾಡುವುದು ಕಷ್ಟದ ಕೆಲಸ. ಇದನ್ನು ಪರಿಹರಿಸಲು ಗೂಗಲ್ ಕೃತಕ ಬುದ್ಧಿಮತ್ತೆ (ಎಐ) ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಈ ಮಾದರಿಯು ಉಪಗ್ರಹ ಚಿತ್ರ, ರಸ್ತೆ ವೀಕ್ಷಣೆ ಮತ್ತು ರಸ್ತೆ ಪ್ರಕಾರಗಳು, ಕಟ್ಟಡಗಳ ನಡುವಿನ ಅಂತರಗಳು ಇನ್ನಿತರ ವಿವಿಧ ಅಂಶಗಳನ್ನು ಬಳಸುತ್ತದೆ.

ಜೊತೆಗೆ, ಗೂಗಲ್‌ ಮ್ಯಾಪ್‌ ಕಿರಿದಾದ ರಸ್ತೆಗಳ ಬಗ್ಗೆ ಬಳಕೆದಾರರಿಗೆ ಸ್ಪಷ್ಟ ನಿರ್ದೇಶನ ಮತ್ತು ನೇವಿಗೇಷನ್ ಪರದೆಗಳಲ್ಲಿ ಸೂಚನೆಗಳನ್ನು ಪ್ರದರ್ಶಿಸುತ್ತದೆ. ಈ ವೈಶಿಷ್ಟ್ಯವನ್ನು ಹೈದರಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ಇಂದೋರ್, ಭೋಪಾಲ್, ಭುವನೇಶ್ವರ ಮತ್ತು ಗುವಾಹಟಿ ನಗರಗಳಲ್ಲಿ, ಆಂಡ್ರಾಯ್ಡ್ ಸಾಧನಗಳಲ್ಲಿ ಈ ವಾರ ಹೊರತರಲಾಗುತ್ತಿದೆ. ಆನಂತರ ಐಒಎಸ್‌ ಮತ್ತು ಉಳಿದ ನಗರಗಳಿಗೆ ವಿಸ್ತರಿಸುವ ಯೋಜನೆಯಿದೆ.

ಫ್ಲೈಓವರ್ ಮಾಹಿತಿ: ಮತ್ತೊಂದು ಹೊಸ ವೈಶಿಷ್ಟ್ಯವೆಂದರೆ, ಫ್ಲೈಓವರ್ ಪರಿಚಯ. ಇದು ಮುಂದೆ ಇರುವ ಫ್ಲೈಓವರ್‌ಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತದೆ. ಈ ವಾರದಿಂದ ಆಂಡ್ರಾಯ್ಡ್‌ ಮತ್ತು ಆಂಡ್ರಾಯ್ಡ್‌ ಪ್ರೊ ಮಾದರಿಯಲ್ಲಿ ದೇಶದ 40 ನಗರಗಳಲ್ಲಿ ಲಭ್ಯವಾಗಲಿದೆ. ಐಒಎಸ್‌ ಮತ್ತು ಕಾರ್‌ಪ್ಲೇ ಶೀಘ್ರದಲ್ಲೇ ಬರಲಿದೆ.

ಇವಿ ಗಳಿಗೆ ಚಾರ್ಜಿಂಗ್‌: ಎಲೆಕ್ಟ್ರಿಕ್ ವೆಹಿಕಲ್ (ಇವಿ) ಬಳಕೆದಾರರಿಗೆ ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಸರ್ಚ್ ಎರಡರಲ್ಲೂ ಚಾರ್ಜಿಂಗ್ ಸ್ಟೇಷನ್‌ಗಳ ಕುರಿತು ಮಾಹಿತಿ ನೀಡಲಾಗುತ್ತದೆ.ದೇಶದ ಪ್ರಮುಖ ಇವಿ ಚಾರ್ಜಿಂಗ್ ಪೂರೈಕೆದಾರರಾದ ಎಲೆಕ್ಟ್ರಿಕ್‌ ಪೇ, ಏಥರ್‌, ಕಝಂ, ಸ್ಟಾಟಿಕ್‌ನ 8,000 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳ ಮಾಹಿತಿ ನೀಡಲಾಗುತ್ತದೆ.

ಸಾರ್ವಜನಿಕ ಸಾರಿಗೆ ಸುಧಾರಣೆ: ಕಳೆದ ಡಿಸೆಂಬರ್‌ನಲ್ಲಿ ಗೂಗಲ್, ಸಾರ್ವಜನಿಕ ಸಾರಿಗೆ ಅನುಭವವನ್ನು ಹೆಚ್ಚಿಸಲು ಒಎನ್‌ಡಿಸಿ ಮತ್ತು ನಮ್ಮ ಯಾತ್ರಿ ಜೊತೆಗಿನ ಸಹಯೋಗವನ್ನು ಘೋಷಿಸಿತು. ಕೊಚ್ಚಿ ಮತ್ತು ಚೆನ್ನೈನಲ್ಲಿ ಮೆಟ್ರೋ ಬುಕಿಂಗ್ ಚಾಲನೆಯಲ್ಲಿದೆ.

ಸಮುದಾಯ ಕೊಡುಗೆ ಮತ್ತು ವರದಿ: ಪ್ರತಿದಿನ 60 ದಶಲಕ್ಷಕ್ಕೂ ಅಧಿಕ ಜನರು ವಿಮರ್ಶೆ, ಫೋಟೋ, ವ್ಯಾಪಾರ ನವೀಕರಣ ಮತ್ತು ರಸ್ತೆ ನವೀಕರಣಗಳ ಮಾಹಿತಿ ನೀಡುತ್ತಾರೆ. ರಸ್ತೆ ಅಪಘಾತಗಳನ್ನು ವರದಿ ಮಾಡುವ ಪ್ರಕ್ರಿಯೆಯನ್ನು ಗೂಗಲ್ ಸರಳಗೊಳಿಸಿದೆ. ನಿರ್ಮಾಣ ಕಾಮಗಾರಿ ಅಥವಾ ಅಪಘಾತ ಸಂಭವಿಸಿದಲ್ಲಿ, ಘಟನೆಗಳನ್ನು ತ್ವರಿತ ಮತ್ತು ಸುಲಭವಾಗಿ ಗೂಗಲ್‌ ನಕ್ಷೆಯಲ್ಲಿ ವರದಿ ಮಾಡಬಹುದು. ಈ ನವೀಕರಣ ಆಂಡ್ರಾಯ್ಡ್‌,ಐಒಎಸ್‌, ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇ ಯಲ್ಲಿ ಲಭ್ಯವಿದೆ.

ಸ್ಥಳೀಯ ಪರಿಣತಿ, ಶಿಫಾರಸು: ಮ್ಯಾಜಿಕ್‌ಪಿನ್‌ನಂತಹ ಸ್ಥಳೀಯ ತಜ್ಞರೊಂದಿಗೆ ಸಹಭಾಗಿತ್ವದಿಂದ 10 ಪ್ರಮುಖ ನಗರಗಳು ಮತ್ತು ಪ್ರವಾಸಿ ತಾಣಗಳ ಪಟ್ಟಿಗಳನ್ನು ರಚಿಸಲು ಗೂಗಲ್‌ ಮುಂದಾಗಿದೆ. ಇವು ಹೋಟೆಲ್‌, ಪ್ರವಾಸಿ ತಾಣಗಳು ಇತ್ಯಾದಿ ಬಗ್ಗೆ ಸಲಹೆ ಮತ್ತು ಶಿಫಾರಸು ನೀಡುತ್ತವೆ.

ವ್ಯಾಪಕ ಮ್ಯಾಪಿಂಗ್: ಗೂಗಲ್ ನಕ್ಷೆಗಳು ದೇಶದ 7 ದಶಲಕ್ಷ ಕಿಲೋಮೀಟರ್ ರಸ್ತೆ, 300 ದಶಲಕ್ಷ ಕಟ್ಟಡಗಳು, 35 ದಶಲಕ್ಷ ವ್ಯಾಪಾರ- ಮತ್ತು ಸ್ಥಳಗಳನ್ನು ಮ್ಯಾಪ್ ಮಾಡಿವೆ. ಇವು ಟ್ರಾಫಿಕ್ ದಟ್ಟಣೆ, ವಿಳಾಸ ಇತ್ಯಾದಿ ಮಾಹಿತಿ ನೀಡುತ್ತವೆ. 

Tags:    

Similar News