ಬೆಂಗಳೂರು ಉತ್ತರದಲ್ಲೂ ಬೆಂಬಿಡದ ʼಗೋ ಬ್ಯಾಕ್‌ʼ ಅಭಿಯಾನ: ಡಿವಿಎಸ್‌ ಭೇಟಿಯಾದ ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬಾರದೆಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿಗರು ಅಭಿಯಾನ ನಡೆಸಿದ್ದರು. ಹೀಗಾಗಿ ಅವರಿಗೆ ಬೆಂ. ಉತ್ತರದಿಂದ ಟಿಕೆಟ್‌ ನೀಡಲಾಗಿತ್ತು. ಇದೀಗ ಅಲ್ಲಿಯೂ ಗೋ ಬ್ಯಾಕ್‌ ಶೋಭಾ ಅಭಿಯಾನ ಭುಗಿಲೆದ್ದಿದ್ದೆ.;

Update: 2024-03-14 08:45 GMT

ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿರುವ ಬಿಜೆಪಿಯು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿದೆ. ಈ ನಿರ್ಧಾರದ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಅಸಮಾಧಾನಗೊಂಡ ಹಲವಾರು ಬಿಜೆಪಿ ಕಾರ್ಯಕರ್ತರು ʼಗೋ ಬ್ಯಾಕ್ ಶೋಭಕ್ಕʼ ಎಂದು ಘೋಷಣೆಗಳನ್ನು ಕೂಗುತ್ತಾ ʼಮೋದಿ ಹಾಗೂ ಬಿಜೆಪಿ ಗೆಲ್ಲಬೇಕಾದರೆ ಶೋಭಾ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್‌ ನೀಡಬಾರದೆಂದು ಆಗ್ರಹಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಬಗ್ಗೆ ಜ್ಞಾನ ಉಳ್ಳ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ | ಶೋಭಾ ಕರಂದ್ಲಾಜೆ ಟಿಕೆಟ್‌ಗೆ ಘಟಾನುಘಟಿಗಳ ಅಡ್ಡಗಾಲು!

ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬಾರದೆಂದು ಭಿತ್ತಿಪತ್ರಗಳನ್ನು ಹಿಡಿದುಕೊಂಡು 'ಗೋ ಬ್ಯಾಕ್ ಶೋಭಾ ಅಕ್ಕ' ಎಂಬ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಈ ನಡುವೆ, ಗುರುವಾರ ಬೆಳಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಕೇಂದ್ರ ಸಚಿವ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಸದಾನಂದ ಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಸಹಕಾರ ನೀಡಬೇಕು ಎಂದು ವಿನಂತಿ ಮಾಡಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಆ ಕ್ಷೇತ್ರದಿಂದ ಟಿಕೆಟ್‌ ನೀಡಬಾರದೆಂದು ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಭಾರೀ ಅಭಿಯಾನವನ್ನೇ ನಡೆಸಿದ್ದರು. 2019 ರಲ್ಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ವಿರುದ್ಧ ʼಗೋ ಬ್ಯಾಕ್‌ ಶೋಭಕ್ಕʼ ಚಳುವಳಿ ನಡೆದಿತ್ತು.

Tags:    

Similar News