ಕಾರ್ಯಕರ್ತರ ಕಡೆಗಣನೆಯಿಂದಲೇ ಸೋಲು: ಕಾಂಗ್ರೆಸ್‌ ಪದಾಧಿಕಾರಿಗಳ ದೂರು

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪಕ್ಷದ ಸ್ಥಳೀಯ ಮುಖಂಡರನ್ನು ಕಡೆಗಣಿಸಲಾಗಿದೆ. ಇದೇ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಕೆಪಿಸಿಸಿ ಪದಾಧಿಕಾರಿಗಳು ಚುನಾವಣಾ ಸೋಲಿನ ಸತ್ಯಶೋಧನಾ ತಂಡದ ಮುಂದೆ ಅಹವಾಲು ಮಂಡಿಸಿದ್ದಾರೆ.

Update: 2024-07-13 07:52 GMT
ಕಾಂಗ್ರೆಸ್
Click the Play button to listen to article

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪಕ್ಷದ ಸ್ಥಳೀಯ ಮುಖಂಡರನ್ನು ಕಡೆಗಣಿಸಲಾಗಿದೆ. ಇದೇ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಕೆಪಿಸಿಸಿ ಪದಾಧಿಕಾರಿಗಳು ಲೋಕಸಭಾ ಚುನಾವಣಾ ಸೋಲಿನ ಪರಾಮರ್ಶೆಗೆ ಧಾವಿಸಿರುವ ಎಐಸಿಸಿ ಸತ್ಯಶೋಧನಾ ಸಮಿತಿಯ ಮುಂದೆ ಅಹವಾಲು ಮಂಡಿಸಿದ್ದಾರೆ.

ಚುನಾವಣಾ ಸೋಲಿನ ಪರಾಮರ್ಶೆಗೆ ಎಐಸಿಸಿ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ರಚಿಸಲಾದ ಸತ್ಯ ಶೋಧನಾ ಸಮಿತಿ ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಸ್ಥಳೀಯ ಮುಖಂಡರೊಂದಿಗೆ ಸರಣಿ ಸಮಾಲೋಚನಾ ಸಭೆಗಳನ್ನು ನಡೆಸುತ್ತಿದೆ.

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿದ್ದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಹೊಂದಾಣಿಕೆ ಲೋಕಸಭಾ ಚುನಾವಣೆಯ ವೇಳೆ ಕಾಣಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಬಹುತೇಕ ಸಚಿವರು ಹಾಗೂ ಶಾಸಕರು ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರಿಗಿಂತ ಐದು 'ಗ್ಯಾರಂಟಿ' ಯೋಜನೆಗಳನ್ನೇ ಅತಿಯಾಗಿ ನೆಚ್ಚಿಕೊಂಡರು. ಗೆಲುವಿನ ದಡ ಸೇರಲು ಗ್ಯಾರಂಟಿ ಯೋಜನೆಯ ಲಾಭ ಪಡೆದ ಫಲಾನುಭವಿಗಳ ಮತಗಳು ನೆರವಾಗುತ್ತವೆ ಎಂದು ನಂಬಿದರು. 'ಗ್ಯಾರಂಟಿ' ಯೋಜನೆಗಳ ಮೇಲಿನ ಅತಿಯಾದ ವಿಶ್ವಾಸ, ಸರ್ಕಾರ ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ಬಾಂಧವ್ಯವನ್ನು ಸಡಿಲಗೊಳಿಸಿತು. ಇದರಿಂದ ಹಲವು ಸಚಿವರು, ಶಾಸಕರ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸಬೇಕಾಯಿತು ಎಂದು ಮುಖಂಡರನ್ನು ಚುನಾವಣಾ ಸೋಲಿನ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಶಾಸಕರಿಗೆ ಸಿಕ್ಕ ಮನ್ನಣೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಿಗಲಿಲ್ಲ. ನಿಗಮ- ಮಂಡಳಿಗಳ ನೇಮಕದಲ್ಲೂ ಕಡೆಗಣಿಸಲಾಯಿತು. ಕಾರ್ಯಕರ್ತರಿಗೂ ಸಮಾನ ಆದ್ಯತೆ ನೀಡಲು ವರಿಷ್ಠರು ಸೂಚಿಸಿದರೂ, ಕಾಟಾಚಾರಕ್ಕೆ ಒಂದಷ್ಟು ನೇಮಕಾತಿ ಮಾಡಲಾಯಿತು. ಸರ್ಕಾರವು ಪಕ್ಷವನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ, 'ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಫಲವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಫಲ ಸಿಗಲಿಲ್ಲ. ಹಲವು ಸಚಿವರು, ಶಾಸಕರ ಕ್ಷೇತ್ರಗಳಲ್ಲೂ ಹಿನ್ನಡೆಯಾಗಿದೆ' ಎಂದರು.

'ಧಾರವಾಡ ಲೋಕಸಭಾ ಚುನಾವಣೆಗೆ ಹಿಂದೆ ನಾನೂ ಸ್ಪರ್ಧಿಸಿದ್ದೆ. ಈ ಬಾರಿ ಹೊಸ ಅಭ್ಯರ್ಥಿ ಕಣಕ್ಕೆ ಇಳಿಸಲಾಗಿತ್ತು. ಸಾಕಷ್ಟು ಪ್ರಯತ್ನಪಟ್ಟರೂ ಗೆಲುವು ಪಡೆಯಲು ಆಗಲಿಲ್ಲ. ಹಾಗಂತ ಜಿಲ್ಲೆಯಲ್ಲಿ ಯಾರೂ ಹೊಂದಾಣಿಕೆ ರಾಜಕೀಯ ಮಾಡಿಲ್ಲ. ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿತು. ಅವರ ತಂದೆ ಕಾಂಗ್ರೆಸ್ ಮುಖಂಡರಾದರೂ, ಅವರನ್ನೂ ದಾರಿ ತಪ್ಪಿಸಿದರು' ಎಂದು ಬೇಸರ ತೋಡಿಕೊಂಡರು.

Tags:    

Similar News