ಕೇರಳದಲ್ಲಿ ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ನಡುವೆ ಪರಸ್ಪರ ಸ್ಪರ್ಧೆ ಮುಂದುವರಿಯಲಿದೆ: ಜೈರಾಮ್
ದೇಶದ ವಿವಿಧೆಡೆ ಮೈತ್ರಿ, ಕೇರಳದಲ್ಲಿ ಮಾತ್ರ ವಿರೋಧಿ!;
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಅನ್ನಿ ರಾಜಾ ಅವರನ್ನು ಸಿಪಿಐ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.
ದೇಶದ ವಿವಿಧೆಡೆ ಎಡಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಆದರೆ, ಕೇರಳದಲ್ಲಿ ನಡೆಯುವ ಚುನಾವಣೆಗಳಲ್ಲಿ ಸಿಪಿಐ ಸ್ಪರ್ಧೆ ಮುಂದುವರಿಸಲಿದೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಈಚೆಗಷ್ಟೇ ಕೇರಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ರಾಜಕೀಯ ಸ್ಪರ್ಧೆಯ ಬಗ್ಗೆ ವ್ಯಂಗ್ಯವಾಡಿದ್ದರು.
ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ದೇಶದ ವಿವಿಧೆಡೆ ಮೈತ್ರಿ ಮಾಡಿಕೊಂಡರೆ, ಕೇರಳದಲ್ಲಿ ಮಾತ್ರ ಪರಸ್ಪರ ಸ್ಪರ್ಧೆ ಮಾಡುತ್ತಾರೆ ಎಂದಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನಿ ರಾಜಾ ಅವರು ವಾಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮ ನಿರ್ದೇಶನಗೊಂಡಿದ್ದಾರೆ.
ಕಳೆದ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರೀ ಮತಗಳಿಂದ ಗೆಲುವು ಸಾಧಿಸಿದ್ದರು.
ಅನ್ನಿ ರಾಜಾ ಅವರ ಉಮೇದುವಾರಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಎಡ ಪಕ್ಷಗಳು ಇಂಡಿಯಾ ಮೈತ್ರಿ ಕೂಟದ ಭಾಗವಾಗಿವೆ.
ಆದರೆ, ಕೇರಳದಲ್ಲಿ ಪರಸ್ಪರರ ವಿರುದ್ಧ ಸ್ಪರ್ಧಿಸುವುದನ್ನು ತಡೆಯುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಎಡಪಕ್ಷಗಳು ಬೇರೆ ಬೇರೆ ರಾಜ್ಯಗಳಲ್ಲಿ ಮಿತ್ರಪಕ್ಷಗಳಾಗಿವೆ. ಆದರೆ, ಕೇರಳದಲ್ಲಿ ನಾವು ಯಾವಾಗಲೂ ಮತ್ತು ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸುತ್ತೇವೆ ಎಂದು ಪ್ರತಿಪಾದಿಸಿದ್ದಾರೆ.
ರಾಹುಲ್ ಗಾಂಧಿ ವಯನಾಡಿನಲ್ಲಿ ನಿಮ್ಮ ವಿರುದ್ಧ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಅನ್ನಿ ರಾಜಾ ಅವರು ಪ್ರತಿ ಪಕ್ಷದ ನಿರ್ಧಾರ ಅವರ ಹಕ್ಕು.
ಅಲ್ಲದೇ ನಾನು ಯಾವುದೇ ಊಹಾಪೋಹಗಳಿಗೆ ಉತ್ತರಿಸುವುದಿಲ್ಲ ಎಂದಿದ್ದಾರೆ. ವಾಯನಾಡ್‌ನಲ್ಲಿ ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಕರ್ನಾಟಕ ಅಥವಾ ತೆಲಂಗಾಣದಲ್ಲಿ ಸ್ಪರ್ಧಿಸುವ ಬಗ್ಗೆಯೂ ಚರ್ಚೆ ನಡೆದಿದೆ.