CAFE BLAST | ಎನ್‌ ಐಎ ಗೆ ತನಿಖೆ ಹಸ್ತಾಂತರ ಮಾಡಿಲ್ಲ: ಸರ್ಕಾರದ ಸ್ಪಷ್ಟನೆ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಆ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರ ಮಾಡಿಲ್ಲ ಎಂದು ಹೇಳಿದೆ.

Update: 2024-03-04 07:42 GMT

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಆದ ಬಾಂಬ್ ಸ್ಫೋಟ ಘಟನೆಯ ಗಂಭೀರತೆ ಅರಿತು ಎನ್‌ ಐಎ( NIA ) ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ‌ ಕೈಗೆತ್ತಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಕರ್ನಾಟಕ ಸರ್ಕಾರ ಈವರೆಗೆ ತನಿಖೆಯನ್ನು ಎನ್‌ ಐಎ ಗೆ ಹಸ್ತಾಂತರ ಮಾಡಿಲ್ಲ ಎಂದು ಮುಖ್ಯಮಂತ್ರಿಗಳ ಸಚಿವಾಲಯ ಖಚಿತಪಡಿಸಿದೆ.

ಪ್ರಕರಣದ ಕುರಿತು ಹೆಚ್ಎಎಲ್ ಠಾಣಾ ಪೊಲೀಸರು UAPA ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರ್ನಾಟಕ ಪೊಲೀಸ್‌ ತನಿಖೆ ನಡೆಸುತ್ತಿದೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಗೆ ಪ್ರಕರಣದ ತನಿಖೆಯನ್ನು ಹಸ್ತಾಂತರಿಸುವ ಯೋಚನೆ ಮಾಡಿಲ್ಲ. ಆದರೆ, ಒಂದು ವೇಳೆ ಎನ್‌ ಐಎ ತನಿಖೆಗೆ ಬಯಸಿದ್ದಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತನಿಖೆ ಕೈಗೆತ್ತಿಕೊಳ್ಳಬಹುದು ಎಂದೂ ಸಚಿವಾಲಯದ ಅಧಿಕಾರಿಯೊಬ್ಬರು ʼದ ಫೆಡರಲ್‌- ಕರ್ನಾಟಕʼಕ್ಕೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಪೊಲೀಸರು, ಗೃಹ ಸಚಿವರು ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಸಿಬಿ ಪೊಲೀಸರು ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

ರಾಮೇಶ್ವರಂ ಕೆಫೆ ಮ್ಯಾನೇಜರ್‌, ಸಿಬ್ಬಂದಿ ಸಮ್ಮುಖದಲ್ಲಿ ಸಿಸಿಬಿ ತನಿಖಾಧಿಕಾರಿ ನವೀನ್ ಕುಲಕರ್ಣಿ ನೇತೃತ್ವದ ತಂಡ ಸ್ಥಳ ಮಹಜರು ನಡೆಸಿತು. ಶಂಕಿತ ಎಂಟ್ರಿಯಾದ ಸ್ಥಳ, ಓಡಾಡಿದ್ದ ಸ್ಥಳದಲ್ಲಿ ಪರಿಶೀಲನೆ ಮಾಡಿದರು. ಜೊತೆಗೆ ಶಂಕಿತರನ್ನು ಆಡುಗೋಡಿ ಟೆಕ್ನಿಕಲ್ ಸೆಲ್‌ಗೆ ಕರೆತಂದು ವಿಚಾರಣೆ ನಡೆಸಿದರು.

ರಾಮೇಶ್ವರ ಕೆಫೆಗೆ ಒಂದು ಕಿಮೀ ಇರುವ ಒಂದು ಸ್ಥಳದಲ್ಲಿ ಸಿಸಿಟಿವಿಯಲ್ಲಿ ಶಂಕಿತ ಸೆರೆಯಾಗಿದ್ದಾನೆ. ಆದರೆ, ಗ್ರಾಫೈಟ್ ಇಂಡಿಯಾ ಸರ್ಕಲ್ನಲ್ಲಿ ರೋಡ್ ಕ್ರಾಸ್ ಮಾಡಿ ಬಂದು ಬಸ್ ಏರಿದ್ದಾನೆ. ಆದರೆ ಅದಕ್ಕಿಂತ ಹಿಂದೆ ಯಾವ ಕಡೆಯಿಂದ ಬಂದಿದ್ದ? ಯಾವ ವಾಹನದಲ್ಲಿ ಬಂದ? ಯಾರಾದ್ರು ಡ್ರಾಪ್ ಮಾಡಿದ್ರಾ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Tags:    

Similar News