ಅಮೇಜಾನ್ ಪಾರ್ಸೆಲ್ ಓಪನ್ ಮಾಡಿದ ಬೆಂಗಳೂರು ದಂಪತಿಗೆ ಕಾದಿತ್ತು ಶಾಕ್!
ಅಮೆಜಾನ್ ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದ ಬೆಂಗಳೂರಿನ ದಂಪತಿ ಪಾರ್ಸೆಲ್ ಸ್ವೀಕರಿಸಿ ಓಪನ್ ಮಾಡುವಾಗ ಜೀವಂತ ನಾಗರಹಾವೊಂದು ವಾರ್ಸೆಲ್ ಬಾಕ್ಸ್‌ನಿಂದ ಬುಸುಗುಟ್ಟಿದೆ. ಇದರಿಂದ ದಂಪತಿಗಳು ದಂಗಾಗಿದ್ದಾರೆ.;
ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಅಮೆಜಾನ್ ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದ ಬೆಂಗಳೂರಿನ ದಂಪತಿ, ಪಾರ್ಸೆಲ್ ಸ್ವೀಕರಿಸಿ ಓಪನ್ ಮಾಡಿದಾಗ ಬೆಚ್ಚಿಬಿದ್ದ ಸಂಗತಿ ಇದು.
ಈ ಘಟನೆ ನಡೆದಿದ್ದು, ಬೆಂಗಳೂರಿನ ಸರ್ಜಾಪುರದಲ್ಲಿ. ಸಾಫ್ಟ್‌ವೇರ್ ಉದ್ಯೋಗದಲ್ಲಿರುವ ದಂಪತಿ ವಾರದ ಹಿಂದೆಯಷ್ಟೇ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದರು. ಪಾರ್ಸೆಲ್ ಬಂದು ತಲುಪಿದಾಗ ಖುಷಿಯಿಂದಲೇ ಅದನ್ನು ತೆರೆದು ಕುತೂಹಲದಿಂದ ಇಣುಕಿದ್ದರು. ಆದರೆ, ಹಾಗೆ ಇಣುಕುವ ಹೊತ್ತಿಗೆ ಅವರು ಬೆಚ್ಚಿಬೀಳುವ ವಸ್ತು ಆ ಬಾಕ್ಸ್‌ನಲ್ಲಿ ಇವರತ್ತಲೇ ಇಣುಕಿತ್ತು!
ಬಾಕ್ಸ್‌ಗೆ ಅಂಟಿಸಿದ್ದ ಟೇಪ್‌ನಲ್ಲಿ ಹಾವು ಸಿಲುಕಿಕೊಂಡಿದ್ದು, ಅದು ಬುಸುಗುಟ್ಟುವ ಸದ್ದು ಕೇಳಿ ಇಬ್ಬರೂ ಬೆಚ್ಚಿಬಿದ್ದಿದ್ದರು. ಸದ್ಯ ಹಾವು ಟೇಪ್ ಅಂಟಿಗೆ ಸಿಲುಕಿಕೊಂಡಿದ್ದರಿಂದ ಅದು ದಿಢೀರನೇ ಎಗರಿ ಕಚ್ಚುವ ಅಪಾಯವಿರಲಿಲ್ಲ. ಹಾಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ. ಬಾಕ್ಸ್ ಅನ್ನು ಬಕೆಟ್‌ನಲ್ಲಿ ಇಟ್ಟು ವಿಡಿಯೊ ದಂಪತಿ ವಿಡಿಯೋ ಮಾಡಿದ್ದರು. ಆ ವಿಡಿಯೊವನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
ವಿಡಿಯೊವನ್ನು ಎಕ್ಸ್/ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ತನ್ನಿ ಎಂಬವರು, 'ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗಾಗಿ ಆರ್ಡರ್ ಮಾಡಿದೆ. ಅದರೊಂದಿಗೆ ಹಾವನ್ನು ಉಚಿತವಾಗಿ ಪಡೆದೆ' ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯೆಯಾಗಿ ಅಮೆಜಾನ್ ಹೆಲ್ಪ್ ಟ್ವೀಟ್ ಮಾಡಿದ್ದು, 'ಅಮೆಜಾನ್ ಆರ್ಡರ್ ಮೂಲಕ ನಿಮಗೆ ಎದುರಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಇದನ್ನು ಪರಿಶೀಲಿಸಲು ನಾವು ಬಯಸುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ ಮತ್ತು ನಮ್ಮ ತಂಡವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ' ಎಂದಿದೆ.
ಕರ್ನಾಟಕದಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಹಾವು ಅತ್ಯಂತ ವಿಷಕಾರಿ ನಾಗರ ಹಾವು ಜಾತಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಹಾವನ್ನು ಸೆರೆಹಿಡಿದು ನಂತರ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ ಎಂದು ವರದಿಯಾಗಿದೆ.