ಮತ್ತೆ ಮುನ್ನೆಲೆಗೆ ಬಂದ ಬೆಳಗಾವಿ ವಿಭಜನೆ..! ಲೋಕ ಸಮರಕ್ಕೂ ಮೊದಲೇ ಮೂರು ಜಿಲ್ಲೆ..?
ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸುವ ಜನತೆ ಬೇಡಿಕೆಯನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.;
ಭೌಗೋಳಿಕವಾಗಿ ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸುವ ಪ್ರಯತ್ನ ನಡೆದಿದೆ. ಈ ಮೂಲಕ ಬೆಳಗಾವಿ ಜನತೆಯ ಮೂರು ದಶಕಗಳ ಬೇಡಿಕೆಯನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.
ಲೋಕಸಭಾ ಚುನಾವಣೆಗೆ ಮೂರು ಪಕ್ಷದ ನಾಯಕರು ತಯಾರಿ ನಡೆಸುತ್ತಿದ್ದಾರೆ. ಒಂದು ಕಡೆ ಅಭ್ಯರ್ಥಿಗಳ ಆಯ್ಕೆ ವಿಚಾರ ನಡೆಯುತ್ತಿದ್ದರೆ, ಮತ್ತೊಂದು ಕಡೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆ ವಿಭಜನೆ ಮಾಡಲು ಮುಂದಾಗಿದೆ.
ಲೋಕಸಭೆ ಚುನಾವಣೆ ಹೊತ್ತಲ್ಲಿ ಇದೀಗ ಬೆಳಗಾವಿ ಜಿಲ್ಲೆ ವಿಭಜನೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.. ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ಸದ್ಯ ಇರುವ ಬೆಳಗಾವಿ ಜಿಲ್ಲೆಯನ್ನು; ಬೆಳಗಾವಿ, ಗೋಕಾಕ್ ಹಾಗೂ ಚಿಕ್ಕೋಡಿ ಎಂದು ಮೂರು ಜಿಲ್ಲೆಗಳಾಗಿಸುವ ಪ್ರಯತ್ನ ಸಿದ್ದರಾಮಯ್ಯನವರದು ಎನ್ನಲಾಗುತ್ತಿದೆ. ಈ ಮೂರು ಹೊಸ ಜಿಲ್ಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಈಗಿನದಲ್ಲ. ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಬೆಳಗಾವಿ ವಿಭಜಿಸಿ ಚಿಕ್ಕೋಡಿ ಹಾಗು ಗೋಕಾಕ್ ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಬೇಕೆಂಬ ಬೇಡಿಕೆ ಇದೆ..
ಇನ್ನೂ ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ ಅಂತ ಕರೆಯಲಾಗುತ್ತಿತ್ತು. ಆದರೆ ಈಗಿರುವ ಹೆಸರು " ಬೆಳಗ್ಗೆ + ಆವಿ " ಎಂದರೆ ಬೆಳಗಿನ ಜಾವದಲ್ಲಿ ಮಂಜು ಬೀಳುತ್ತಿರುತ್ತೆ.. ಹೀಗಾಗಿ ಬೆಳಗಾವಿ ಎಂದು ಹೆಸರು ಬಂದಿದೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆ ಸಾಂಸ್ಕೃತಿಕವಾಗಿ ಅಷ್ಟೇ ಅಲ್ಲದೇ ರಾಜಕೀಯವಾಗಿ, ಭೌಗೋಳಿಕವಾಗಿ, ಆರ್ಥಿಕವಾಗಿ ಕೂಡ ಪ್ರಮುಖ ಜಿಲ್ಲೆಯಾಗಿದೆ.
ರಾಜ್ಯದ ಅತೀ ದೊಡ್ಡ ಜಿಲ್ಲೆಯಾವುದು ಎಂದರೆ ಅದು ಬೆಳಗಾವಿ.. ಒಟ್ಟು 18 ವಿಧಾನಸಭಾ ಕ್ಷೇತ್ರ ಹೊಂದಿದೆ.. ಬೆಳಗಾವಿ ಜಿಲ್ಲೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 3 ಲೋಕಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ 15 ತಾಲೂಕು, 6 ಆರ್‌ಟಿಒ, 506 ಗ್ರಾಮ ಪಂಚಾಯತಿ, 345 ತಾಲೂಕು ಪಂಚಾಯತ್ ಸದಸ್ಯರು, 90 ಜಿಲ್ಲಾ ಪಂಚಾಯತ್ ಸದಸ್ಯರನ್ನು ಹೊಂದಿದೆ.
ಆಡಳಿತ ಭಾಷೆ ಕನ್ನಡ ಇದ್ದರೂ, ಇಲ್ಲಿ ಮರಾಠಿ ಹಾಗು ಹಿಂದಿ ಭಾಷೆ ಕೂಡ ಪ್ರಮುಖ ಭಾಷೆಗಳಿದೆ. 1997ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ.ಎಚ್ ಪಟೇಲ್, ಬೆಳಗಾವಿ ಜಿಲ್ಲೆ ವಿಭಜನೆಗೆ ಮುಂದಾಗಿದ್ದರು. ಆದರೆ ಗಡಿ ವಿವಾದ ಇತ್ಯರ್ಥವಾಗುವವರೆಗೂ ಜಿಲ್ಲೆ ವಿಭಜನೆ ಬೇಡ ಎಂದು ಅಭಿಪ್ರಾಯ ಕೇಳಿ ಬಂದಿತ್ತು.