20 ವರ್ಷಗಳ ನಂತರ ಕನ್ನಡಕ್ಕೆ ಮರಳಿದ ನಟಿ ʼಚೈತ್ರದ ಪ್ರೇಮಾಂಜಲಿʼ ಶ್ವೇತಾ

ನಟಿ ಶ್ವೇತಾ ಕನ್ನಡದಲ್ಲಿ 'ಲಕ್ಷ್ಮಿ ನಿವಾಸ' ಎಂಬ ಕಿರುತೆರೆ ದಾರಾವಾಹಿ ಮೂಲಕ ನಟನೆಗೆ ಮರಳುತ್ತಿದ್ದಾರೆ.

Update: 2024-05-02 11:21 GMT
ನಟಿ ಶ್ವೇತಾ ಬರೋಬ್ಬರೀ 20 ವರ್ಷಗಳ ನಂತರ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
Click the Play button to listen to article

ʼಚೈತ್ರದ ಪ್ರೇಮಾಂಜಲಿʼ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ನಟಿ ಶ್ವೇತಾ, ಆ ಬಳಿಕ ʼಕರ್ಪೂರದ ಗೊಂಬೆʼ, ʼಲಕ್ಷ್ಮಿ ಮಹಾಲಕ್ಷ್ಮಿʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಆದರೆ, ದಿಢೀರನೇ ಅವರು ಕನ್ನಡ ಚಿತ್ರ ರಂಗದಿಂದ ದೂರವಾಗಿದ್ದರು. ಅಪ್ಪಟ ಕನ್ನಡ ಹುಡುಗಿಯ ಇಮೇಜಿನ ನಟಿ ಶ್ವೇತಾ, ಇದೀಗ 20 ವರ್ಷಗಳ ನಂತರ ಕನ್ನಡ ಚಿತ್ರರಂಗದತ್ತ ಮತ್ತೆ ಮುಖ ಮಾಡಿದ್ದಾರೆ.

ನಟಿ ಶ್ವೇತಾ ಕನ್ನಡದಲ್ಲಿ 'ಲಕ್ಷ್ಮಿ ನಿವಾಸ' ಎಂಬ ಕಿರುತೆರೆ ದಾರಾವಾಹಿ ಮೂಲಕ ನಟನೆಗೆ ಮರಳುತ್ತಿದ್ದಾರೆ.

ವಿವಿಧ ಭಾಷೆಗಳಲ್ಲಿ ಸುಮಾರು 75 ಚಲನಚಿತ್ರಗಳಲ್ಲಿ ನಟಿಸಿದ್ದ ಶ್ವೇತಾ, 2003 ರಲ್ಲಿ ತೆರೆಕಂಡ 'ಕುಟುಂಬ' ಸಿನಿಮಾದಲ್ಲಿ ಕೊನೆಯ ಬಾರಿಗೆ ಅಭಿನಯಿಸಿದ್ದರು. 20 ವರ್ಷಗಳ ವಿರಾಮದ ನಂತರ ನಟನೆಗೆ ಮರಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಸಣ್ಣ ಪರದೆಯ ಮೂಲಕ ಮತ್ತೆ ಆರಂಭಿಸುತ್ತಿದ್ದಾರೆ.

ಸದ್ಯ ಶ್ವೇತಾ ಚೆನ್ನೈ ಮತ್ತು ಬೆಂಗಳೂರು ನಡುವೆ ಶೂಟಿಂಗ್ ಗಾಗಿ ಓಡಾಡುತ್ದಿದ್ದಾರೆ. ನಟನೆಗೆ ಮರಳುವ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ನನ್ನ ಕುಟುಂಬದ ಮೇಲೆ ಗಮನ ಕೇಂದ್ರೀಕರಿಸಲು ನಾನು ಸುದೀರ್ಘ ವಿರಾಮವನ್ನು ತೆಗೆದುಕೊಂಡೆ, ಆದರೆ ನಟನೆಯು ಯಾವಾಗಲೂ ನನ್ನ ಮನಸ್ಸಿನಲ್ಲಿ ಉಳಿದಿದೆ. ಕನ್ನಡ ಧಾರಾವಾಹಿಗಾಗಿ ನನ್ನನ್ನು ಸಂಪರ್ಕಿಸಿದಾಗ, ಸಣ್ಣ ಪರದೆಯ ಸಾಮರ್ಥ್ಯ ಮತ್ತು ಅದರ ವ್ಯಾಪಕ ವ್ಯಾಪ್ತಿಯನ್ನು ನಾನು ತಿಳಿದುಕೊಂಡೆ, ಅದಕ್ಕಾಗಿಯೇ ಈ ಅವಕಾಶವನ್ನು ಸ್ವೀಕರಿಸಲು ನಿರ್ಧರಿಸಿದೆ ಎಂದಿದ್ದಾರೆ.

ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ ಮತ್ತು ಲಕ್ಷ್ಮಿ ಮಹಾಲಕ್ಷ್ಮಿಯಂತಹ ಸಿನಿಮಾಗಳ ನನ್ನ ಪಾತ್ರಗಳೊಂದಿಗೆ ಜನರು ಈಗಲೂ ನನ್ನನ್ನು ಗುರುತಿಸುತ್ತಾರೆ. ಜನರ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ, ವಿಶೇಷವಾಗಿ ವಿಷ್ಣುವರ್ಧನ್ ಅವರೊಂದಿಗೆ ನಾನು ಮಾಡಿದ ಪಾತ್ರ ಬಹಳ ಮೆಚ್ಚುಗೆ ಗಳಿಸಿದೆ ಎಂದು ಹೇಳಿದ್ದಾರೆ.

Tags:    

Similar News