Actor Darshan Case | ಮನೆ ಊಟ ಕೋರಿಕೆ: ನಟ ದರ್ಶನ್ ರಿಟ್ ಅರ್ಜಿ ವಿಚಾರಣೆ ಜು.18ಕ್ಕೆ
ಜೈಲಿನ ಊಟದಿಂದ ವಾಂತಿ ಭೇದಿಯಾಗುತ್ತಿದೆ, ಮನೆಯಿಂದ ಊಟ, ಹಾಸಿಗೆ ಮತ್ತು ಪುಸ್ತಕ ತರಿಸಲು ಅವಕಾಶ ಮಾಡಿಕೊಡಿ ಎಂದು ಕೋರಿ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 18ಕ್ಕೆ ಮುಂದೂಡಿದೆ.;
ಜೈಲಿನ ಊಟದಿಂದ ವಾಂತಿ- ಭೇದಿಯಾಗುತ್ತಿದೆ, ಮನೆಯಿಂದ ಊಟ, ಹಾಸಿಗೆ ಮತ್ತು ಪುಸ್ತಕ ತರಿಸಲು ಅವಕಾಶ ಮಾಡಿಕೊಡಿ ಎಂದು ಕೋರಿ ನಟ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 18ಕ್ಕೆ ಮುಂದೂಡಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾ.ಎಸ್ ಆರ್ ಕೃಷ್ಣಕಮಾರ್ ಪೀಠ ಬುಧವಾರ ವಿಚಾರಣೆ ನಡೆಸಿತು.
ನಟ ದರ್ಶನ್ ಪರ ವಾದ ಮಂಡಿಸಿದ ವಕೀಲ ಕೆ.ಎನ್ ಫಣೀಂದ್ರ, ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ ಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದರು.
ಈ ವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರು, ‘ಮನೆಯಿಂದ ಊಟ, ಹಾಸಿಗೆ, ಪುಸ್ತಕ ಪಡೆಯಲು ಕೋರಿದ್ದೀರಿ. ಈ ಬಗ್ಗೆ ಈ ಹಿಂದಿನ ಕೋರ್ಟ್ ತೀರ್ಪುಗಳಿವೆಯೇ? ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ? ಜೈಲು ಅಧಿಕಾರಿಗಳಿಗೆ ನೀವು ಮನವಿ ಮಾಡಿದ್ದೀರಾ? ಪ್ರಕರಣದ ವಿಚಾರಣೆ ನಡೆಯುತ್ತಿರುವ ಅಧೀನ ನ್ಯಾಯಾಲಯದಲ್ಲಿ ಮನವಿ ಸಲ್ಲಿಸದೇ ನೇರವಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದೇ? ಕೈದಿಗಳಿಗಿರುವ ಕಾನೂನು ಈ ಬಗ್ಗೆ ಏನು ಹೇಳುತ್ತದೆ?’ ಎಂದು ಪ್ರಶ್ನೆ ಮಾಡಿದ್ದಾರೆ.
"ಇದನ್ನು ಬೇರೆ ಪ್ರಕರಣಗಳಂತೆ ಪರಿಗಣಿಸಲಾಗುವುದು. ಕಾನೂನಿನ ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು" ಎಂದು ನ್ಯಾಯಮೂರ್ತಿ ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ತನಿಖಾಧಿಕಾರಿಗಳು, ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸದ್ಯ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.
ರಿಟ್ ಅರ್ಜಿಯಲ್ಲೇನಿತ್ತು?
ದರ್ಶನ್‌ಗೆ ಜೈಲೂಟ ಸೇರುತ್ತಿಲ್ಲ. ಇದರಿಂದ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ದರ್ಶನ್ ಪರ ವಕೀಲ ಪ್ರವೀಣ್ ತಿಮ್ಮಯ್ಯ ಅವರ ಮೂಲಕ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ʼಊಟ, ಹಾಸಿಗೆ, ಪುಸ್ತಕ, ಬಟ್ಟೆ, ಚಮಚವನ್ನು ಮನೆಯಿಂದ ತರಿಸಿಕೊಳ್ಳಲು ದರ್ಶನ್ ಕೋರ್ಟ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲಿನಲ್ಲಿ ನೀಡುತ್ತಿರುವ ಊಟ ಅವರಿಗೆ ಜೀರ್ಣವಾಗುತ್ತಿಲ್ಲ. ಅವರಿಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ. ಇದರ ಜೊತೆಗೆ ಭೇದಿ ಕೂಡ ಆಗುತ್ತಿದೆ. ಹಲವು ಕೆಜಿಗಳಷ್ಟು ತೂಕವನ್ನು ಕಳೆದುಕೊಂಡಿದ್ದಾರೆ. ಹೀಗೆಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಮನೆ ಊಟಕ್ಕೆ ಅನುಮತಿ ಕೋರಿದ್ದಕ್ಕೆ ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ’ ಎಂದು ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.
ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕು’ ಎಂದು ದರ್ಶನ್ ಪರ ವಕೀಲರು ರಿಟ್ ಅರ್ಜಿ ಸಲ್ಲಿಸಿದ್ದರು.