51 ಡಿಗ್ರಿ ತಾಪಮಾನ: ಮೆಕ್ಕಾದಲ್ಲಿ 570 ಕ್ಕೂ ಅಧಿಕ ಹಜ್ ಯಾತ್ರಿಕರ ಸಾವು
ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರವು ಸೋಮವಾರ (ಜೂನ್ 17) ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ 51.8 ಡಿಗ್ರಿ ಸೆ. ತಾಪಮಾನವನ್ನು ದಾಖಲಿಸಿದೆ.
ಈ ವರ್ಷ ಹಜ್ ಯಾತ್ರೆ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ತಾಪಮಾನ 52 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ, ಸುಮಾರು 577 ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ವಿವಿಧ ದೇಶಗಳ ರಾಜತಾಂತ್ರಿಕರು ತಿಳಿಸಿದ್ದಾರೆ.
ಮೃತರಲ್ಲಿ 323 ಈಜಿಪ್ಟಿನವರು ಮತ್ತು 60 ಜೋರ್ಡಾನಿಯನ್ನರು ಸೇರಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ಹೇಳಿದೆ. ಇರಾನ್, ಸೆನೆಗಲ್ ಮತ್ತು ಇಂಡೋನೇಷ್ಯಾದ ನಾಗರಿಕರು ಮೃತರಲ್ಲಿ ಸೇರಿದ್ದಾರೆ. ಮೆಕ್ಕಾದ ಅತಿ ದೊಡ್ಡ ಶವಾಗಾರಗಳಲ್ಲಿ ಒಂದಾದ ಅಲ್-ಮುಯಿಸೆಮ್ ನ ನೆರೆಹೊರೆಯಲ್ಲಿರುವ ಆಸ್ಪತ್ರೆಗಳಲ್ಲಿ 550 ಸಾವುಗಳು ವರದಿಯಾಗಿವೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ.
ಹವಾಮಾನ ಬದಲಾವಣೆಯಿಂದ ಪರಿಣಾಮ: ಹವಾಮಾನ ಬದಲಾವಣೆಯು ತೀರ್ಥಯಾತ್ರೆ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಕಳೆದ ತಿಂಗಳು ಪ್ರಕಟವಾದ ಸೌದಿ ಅಧ್ಯಯನವೊಂದು ಹೇಳಿದೆ. ಪ್ರಾರ್ಥನೆ ಇತ್ಯಾದಿಯನ್ನು ನೆರವೇರಿಸುವ ಸ್ಥಳದಲ್ಲಿ ತಾಪಮಾನ 10 ವರ್ಷಕ್ಕೆ 0.4 ಡಿಗ್ರಿ ಸೆ. ಹೆಚ್ಚುತ್ತದೆ. ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರವು ಸೋಮವಾರ (ಜೂನ್ 17) ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ 51.8 ಡಿಗ್ರಿ ಸೆ. ತಾಪಮಾನವನ್ನು ದಾಖಲಿಸಿದೆ.
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಲು, ಛತ್ರಿಗಳನ್ನು ಬಳಸಲು ಮತ್ತು ಅತ್ಯಂತ ಬಿಸಿ ಇರುವ ಅವಧಿಯಲ್ಲಿ ನೆರಳಿನಲ್ಲಿ ಆಶ್ರಯ ಪಡೆಯುವಂತೆ ಸೌದಿ ಅರೇಬಿಯದ ಅಧಿಕಾರಿಗಳು ಯಾತ್ರಿಕರಿಗೆ ಸಲಹೆ ನೀಡಿದ್ದಾರೆ.
ಎಎಫ್‌ಪಿ ವರದಿ ಪ್ರಕಾರ, ಯಾತ್ರಾರ್ಥಿಗಳು ತಲೆ ಮೇಲೆ ನೀರು ಸುರಿದುಕೊಂಡು, ಸ್ವಯಂಸೇವಕರು ನೀಡುವ ತಂಪು ಪಾನೀಯ ಮತ್ತು ಐಸ್ ಕ್ರೀಂ ಸೇವಿಸುವ ಮೂಲಕ ತಂಪಾಗಿಸಿಕೊಳ್ಳುತ್ತಾರೆ. ಆದರೆ, ಈ ಕ್ರಮಗಳು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಸಾಕಾಗುವುದಿಲ್ಲ ಎಂದು ತೋರುತ್ತದೆ. ಏಕೆಂದರೆ, ಹಲವು ಹಜ್ ಆಚರಣೆಗಳು ಹೊರಾಂಗಣದಲ್ಲಿ ಗಂಟೆಗಳ ಕಾಲ ಸೂರ್ಯನಿಗೆ ಒಡ್ಡಿಕೊಳ್ಳುವುದನ್ನು ಒಳಗೊಂಡಿರುತ್ತವೆ.
ನೋಂದಾಯಿಸಿಕೊಳ್ಳದ ಯಾತ್ರಿಗಳು: ವಿಷಯಗಳನ್ನು ಇನ್ನಷ್ಟು ಹದಗೆಡಿಸುವ ಸಂಗತಿಯೆಂದರೆ, ಪ್ರತಿ ವರ್ಷ ನೂರಾರು ಯಾತ್ರಿಕರು ಅಕ್ರಮವಾಗಿ ಹಜ್ ಗೆ ಆಗಮಿಸುತ್ತಾರೆ. ಅಂಥವರಿಗೆ ಅಧಿಕೃತ ವೀಸಾ ವೆಚ್ಚವನ್ನು ಭರಿಸಲು ಆಗುವುದಿಲ್ಲ. ಸೌದಿ ಆಡಳಿತ ತೀರ್ಥಯಾತ್ರೆಯ ಮಾರ್ಗದಲ್ಲಿ ಒದಗಿಸಿದ ಹವಾನಿಯಂತ್ರಿತ ಸೌಲಭ್ಯಗಳನ್ನು ಬಳಸಲು ಇವರಿಗೆ ಅವಕಾಶ ಇರುವುದಿಲ್ಲ. ಈಜಿಪ್ಟಿ ನ ಮೃತ ಯಾತ್ರಿಕರಲ್ಲಿ ಇಂಥ ನೋಂದಾಯಿಸದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ರಾಜತಾಂತ್ರಿಕರೊಬ್ಬರು ಹೇಳಿದರು.
ʻಯಾತ್ರಾರ್ಥಿಗಳು ಆಹಾರ, ನೀರು ಅಥವಾ ಹವಾನಿಯಂತ್ರಣ ಸೌಲಭ್ಯವಿಲ್ಲದೆ ಬಹಳ ಕಾಲ ಹೊರಗೆ ಇದ್ದುದರಿಂದ ಬಿಸಿಲ ತಾಪದಿಂದ ಸಾವಿಗೀಡಾಗಿದ್ದಾರೆ. ರಸ್ತೆ ಬದಿಯಲ್ಲಿ ಚಲನರಹಿತ ದೇಹಗಳು ಬಿದ್ದಿರುವುದನ್ನು ಜನ ನೋಡಿದ್ದಾರೆ,ʼ ಎಂದು ಹೇಳಿದರು.
ಆಂಬ್ಯುಲೆನ್ಸ್ ಸೇವೆ ಲಭ್ಯವಿದೆ. ಆದರೆ, ಎಲ್ಲ ಯಾತ್ರಿಗಳನ್ನು ನಿಭಾಯಿಸಲು ಸಾಲುವಷ್ಟಿಲ್ಲ. ಸೌದಿ ಅಧಿಕಾರಿಗಳು 2,000 ಕ್ಕೂ ಹೆಚ್ಚು ಯಾತ್ರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಸಾವಿನ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಈ ವರ್ಷ 1.8 ದಶಲಕ್ಷ ಯಾತ್ರಿಕರು: ಪ್ರತಿಯೊಬ್ಬ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ತೀರ್ಥಯಾತ್ರೆ ಮಾಡಲು ಪ್ರಯತ್ನಿಸುತ್ತಾರೆ. ಸೌದಿ ಅಧಿಕಾರಿಗಳ ಪ್ರಕಾರ, ಈ ವರ್ಷ ಸುಮಾರು 1.8 ದಶಲಕ್ಷ ಯಾತ್ರಿಕರು ಮೆಕ್ಕಾಗೆ ಭೇಟಿ ನೀಡಿದ್ದಾರೆ. ಇದರಲ್ಲಿ ವಿದೇಶಿಯರ ಪಾಲು 1.6 ದಶಲಕ್ಷ.