BANGALORE WATER CRISIS | ಬೆಂಗಳೂರಿಗೆ 500 ಎಂಎಲ್‌ಡಿ ನೀರು ಕೊರತೆ: ಸಿ.ಎಂ ಸಿದ್ದರಾಮಯ್ಯ

ನೀರು ಪೂರೈಕೆಗೆ ಹಣದ ಕೊರತೆ ಇಲ್ಲ: ಸಿದ್ದರಾಮಯ್ಯ ಹೇಳಿಕೆ;

Update: 2024-03-18 11:49 GMT
ಸಿ.ಎಂ ಸಿದ್ದರಾಮಯ್ಯ

Bengaluru water crisis ಜೂನ್ ಅಂತ್ಯದ ವರೆಗೆ ಅವಶ್ಯವಿರುವಷ್ಟು ನೀರು ಸಂಗ್ರಹಿಸಲಾಗಿದೆ. ಆದರೆ, ಬೆಂಗಳೂರಿಗೆ 500 ಎಂಎಲ್‌ಡಿ ನೀರು ಕೊರತೆ ಇದೆ. ಈ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕುಡಿಯುವ ನೀರಿಗೆ ಅಗತ್ಯವಿರುವಷ್ಟು ನೀರನ್ನು ಕೆಆರ್‌ಎಸ್ (11.02 ಟಿಎಂಸಿ) ಹಾಗೂ ಕಬಿನಿಯಲ್ಲಿ(9.02 ಟಿಎಂಸಿ) ಸಂಗ್ರಹಿಸಿದ್ದೇವೆ. ಜೂನ್ ಅಂತ್ಯದವರೆಗೂ ಅವಶ್ಯವಿರುವಷ್ಟು ನೀರಿನ ಸಂಗ್ರಹ ಇದೆ. ಇನ್ನು 14 ಸಾವಿರ ಸರ್ಕಾರಿ ಬೋರ್‌ವೆಲ್‌ಗಳಲ್ಲಿ 6,900 ಬೋರ್‌ವೆಲ್‌ಗಳು ಬತ್ತಿವೆ. ಹೀಗಾಗಿ, ಸಮಸ್ಯೆ ಆಗಿದೆ. 110 ಹಳ್ಳಿಗಳ ಪೈಕಿ 55 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಜೂನ್ ಅಂತ್ಯದ ವೇಳೆಗೆ ಕಾವೇರಿ 5 ನೇ ಹಂತದ ಕಾಮಗಾರಿ ಮುಕ್ತಾಯವಾಗಲಿದ್ದು, 775 ಎಂಎಲ್‌ಡಿ ಹೆಚ್ಚುವರಿ ನೀರು ಸಿಗಲಿದೆ. ಇದನ್ನು 110 ಹಳ್ಳಿಗಳಿಗೆ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಕುಡಿಯಲು ಮತ್ತು ಕೈಗಾರಿಕೆಗಳಿಗೆ ಒಟ್ಟು 2600 ಎಂಎಲ್‌ಡಿ ನೀರು ಅಗತ್ಯವಿದೆ. ಇದರಲ್ಲಿ 1450 ಎಂಎಲ್‌ಡಿ. ನೀರು ಕಾವೇರಿ ನದಿಯಿಂದ ದೊರೆಯುತ್ತಿದೆ. 650 ಎಂಎಲ್‌ಡಿ ನೀರು ಬೋರ್‌ವೆಲ್‌ಗಳಿಂದ ಸಿಗುತ್ತಿದ್ದು, 500 ಎಂಎಲ್‌ಡಿ ನೀರಿನ ಕೊರತೆ ಇದೆ. ನೀರಿನ ದುರುಪಯೋಗ ತಡೆಗಟ್ಟಲು ಸೂಚಿಸಲಾಗಿದ್ದು, 143 ವಿಚಕ್ಷಣದಳ ಕಾರ್ಯ ನಿರ್ವಹಿಸುತ್ತಿವೆ. ಕೇಂದ್ರೀಯ ಸಹಾಯವಾಣಿ ಸಂಖ್ಯೆ 1916 ಹಾಗೂ ವಾಟ್ಸ್ಆ್ಯಪ್ ಮೂಲಕ ದೂರು ದಾಖಲಿಸಬಹುದು. ಈ ದೂರುಗಳನ್ನು ಕೂಡಲೇ ಬಗೆಹರಿಸಲು ನಿರ್ದೇಶಿಸಲಾಗಿದೆ ಎಂದರು.

1,200 ಬೋರ್‌ವೆಲ್‌ಗಳಿಗೆ ಮರುಜೀವ

ಇನ್ನು ಸರ್ಕಾರದಿಂದ 313 ಸ್ಥಳಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲಾಗುತ್ತಿದ್ದು, 1200 ನಿಷ್ಕ್ರಿಯ ಬೋರ್‌ವೆಲ್‌ಗಳಿಗೆ ಮರುಜೀವ ನೀಡಲಾಗುವುದು. ಕೊಳೆಗೇರಿ, ಎತ್ತರದ ಪ್ರದೇಶದಲ್ಲಿ ಹಾಗೂ ಬೋರ್‌ವೆಲ್ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕೆಎಂಎಫ್ ಸೇರಿದಂತೆ ಲಭ್ಯವಿರುವ  ಖಾಸಗಿ ಟ್ಯಾಂಕರ್‌ಗಳನ್ನು ನೀರು ಪೂರೈಕೆ ಮಾಡಲು ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. 1700 ನೀರಿನ ಟ್ಯಾಂಕರ್ ನೋಂದಣಿ ಆಗಿದ್ದು, ಮಾಲ್‌ಗಳು ಸೇರಿ ಖಾಸಗಿ ಬೋರ್‌ವೆಲ್‌ಗಳಿಂದ ಟ್ಯಾಂಕರ್ ತುಂಬಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಬತ್ತಿ ಹೋಗಿರುವ ಪ್ರಮುಖ 14 ಕೆರೆಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಅಂತರ್ಜಲ ಭರ್ತಿ ಆಗಿ ಬೋರ್‌ವೆಲ್‌ಗಳಿಗೆ ಮರುಜೀವ ಬರಲಿದೆ ಎಂದು ಹೇಳಿದರು.

ನೀರು ಪೂರೈಕೆಗೆ ಹಣದ ಕೊರತೆ ಇಲ್ಲ

ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಹಣದ ಕೊರತೆ ಇಲ್ಲ. ನೀರು ಪೂರೈಕೆಗೆ ಅವಶ್ಯಕತೆ ಇರುವಷ್ಟು ಹಣವನ್ನು ಸರ್ಕಾರ ಹಾಗೂ ಬಿಬಿಎಂಪಿ ನೀಡಲಿದೆ. ಇನ್ನು ಕಂಟ್ರೋಲ್ ರೂಮ್‌ಗಳ ಸಂಖ್ಯೆ ಹೆಚ್ಚಿಸುವುದಕ್ಕೆ ನಿರ್ದೇಶನ ನೀಡಲಾಗಿದ್ದು, ದೂರು ಬಂದ ಕೂಡಲೇ ಆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಅಲ್ಲದೇ ವಿಚಕ್ಷಣದಳ ಹೆಚ್ವಿಸಿ ದೂರುಗಳಿಗೆ ತಕ್ಷಣ ಸ್ಪಂದಿಸಲು ಸೂಚಿಸಲಾಗಿದೆ. ಉದ್ಯಾನಗಳಲ್ಲಿ ಶುದ್ಧೀಕರಿಸಿದ ನೀರು ಬಳಸುವಂತೆ ಹಾಗೂ ಕೆ.ಸಿ.ವ್ಯಾಲಿ ಮಾದರಿಯಲ್ಲಿ ಬೆಂಗಳೂರಿನ ಕೆರೆಗಳನ್ನೂ ಭರ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಸಿ.ಎಂ ಸಭೆಯ ಮುಖ್ಯಾಂಶಗಳು

* ಅಧಿಕಾರಿಗಳು ಪ್ರತಿ ದಿನ ಸಭೆ ನಡೆಸಿ ವಾರಕ್ಕೊಮ್ಮೆ ಕ್ರಿಯಾಯೋಜನೆ ಸಿದ್ದಪಡಿಸಬೇಕು.

* ಭವಿಷ್ಯದಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ತಜ್ಞರ ಸಮಿತಿ ರಚನೆ.

* ನೀರು ನಿರ್ವಹಣೆ ಲೋಪವಾದರೆ ಬಿಬಿಎಂಪಿ, ಜಲ ಮಂಡಳಿಯೇ ನೇರ ಹೊಣೆ.

* ಬೋರ್‌ವೆಲ್ ನೀರು ಅವಲಂಬಿತರಿಗೆ ತೊಂದರೆ ಆಗದಂತೆ ಕ್ರಮ.

* ಸಾರ್ವಜನಿಕರು ಕುಡಿಯುವ ನೀರಿನ ದುಂದುವೆಚ್ಚ ಮಾಡಬಾರದು. ಗಾರ್ಡನ್‌ಗೆ ಕುಡಿಯುವ ನೀರು ಬಳಸದಂತೆ ಎಚ್ಚರಿಕೆ.

* ಮಳೆನೀರು ಕೊಯ್ಲು, ನೀರು ಶುದ್ದೀಕರಿಸಿ ಹೆಚ್ಚಿನ ಪ್ರಮಾಣದಲ್ಲಿ ಮರು ಬಳಕೆಗೆ ಸೂಚನೆ. 

Tags:    

Similar News