Bank Fraud | ನಕಲಿ ದಾಖಲೆ ಬಳಸಿ 22 ಬ್ಯಾಂಕ್‌ಗಳಲ್ಲಿ ಸಾಲ: 6 ಜನರ ಬಂಧನ
ನಕಲಿ ದಾಖಲೆಗಳನ್ನು ಬಳಸಿ 22 ಬ್ಯಾಂಕ್‌ಗಳಿಗೆ ವಂಚನೆ ಮಾಡಿದ ಆರೋಪದ ಮೇಲೆ ಒಂದೇ ಕುಟುಂಬದ ಐವರು ಸೇರಿ ಒಟ್ಟು 6 ಜನರನ್ನು ಬಂಧಿಸಲಾಗಿದೆ. ಆಸ್ತಿ ಪತ್ರಗಳನ್ನು ನಕಲು ಮಾಡಿ ವಂಚನೆ ಮಾಡಿದ್ದರು.;
ಒಂದೇ ಆಸ್ತಿಗೆ ಸಂಬಂಧಪಟ್ಟ ವಿವಿಧ ನಕಲಿ ದಾಖಲೆಗಳನ್ನು ಸೃಷ್ಟಿಸಿ, ದಾಖಲೆಯ ಆಧಾರದ ಮೇಲೆ 22 ಬ್ಯಾಂಕ್ಗಳಿಂದ 10 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಒಂದೇ ಕುಟುಂಬದ 5 ವ್ಯಕ್ತಿಗಳು ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?
ಬ್ಯಾಂಕ್ ಮ್ಯಾನೇಜರ್ ಒಬ್ಬರು ನೀಡಿದ ದೂರಿನ ಆಧಾರದ ಪೊಲೀಸರು ತನಿಖೆ ನಡೆಸಿದ್ದರು. ʻಬೆಂಗಳೂರಿನ ಜಯನಗರ 3ನೇ ಬ್ಲಾಕ್ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್ ಒಂದರ ಮ್ಯಾನೇಜರ್ ಆಗಿರುವ ವ್ಯಕ್ತಿ ನಮ್ಮ ಬ್ಯಾಂಕ್ನಲ್ಲಿ ಖಾತೆದಾರರಾಗಿದ್ದಾರೆ. ಸಾಲ ಪಡೆದಿರುವ ದಂಪತಿ ಅವರ ಬೇಗೂರು ಗ್ರಾಮದಲ್ಲಿರುವ 2,100 ಅಡಿ ಉದ್ದಳತೆಯ ಜಾಗದಲ್ಲಿ ಕಟ್ಟಡ ಇರುವುದಾಗಿ ಹೇಳಿ ಈ ಕಟ್ಟಡಕ್ಕೆ ಸಂಬಂಧಿಸಿದಂತೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬ್ಯಾಂಕ್ನಲ್ಲಿ ಅಡಮಾನವಾಗಿ ಇಟ್ಟು, ಬ್ಯಾಂಕ್ನಿಂದ ಕಂತು ಸಾಲ ಮತ್ತು ಯಂತ್ರೋಪಕರಣ ಸಾಲವೆಂದು ಒಟ್ಟು 130,00,000 (ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ) ಸಾಲವನ್ನು ಪಡೆದಿದ್ದಾರೆ. ನಂತರ ಸಾಲವನ್ನು ಬ್ಯಾಂಕಿಗೆ ಮರುಪಾವತಿಸದೆ, ವಂಚನೆ ಮಾಡಿದ್ದಾನೆʼ ಎಂದು ಬ್ಯಾಂಕ್ನ ಮ್ಯಾನೇಜರ್ ಜಯನಗರ ಪೊಲೀಸ್ ಠಾಣೆಯಲ್ಲಿ 2022ರ ಡಿಸೆಂಬರ್ 12ರಂದು ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದ ಪೊಲೀಸರು, ಆರೋಪಿಯ ಪತಿಯನ್ನು 2024ರ ಮಾರ್ಚ್ 16ರಂದು ವಶಕ್ಕೆಪಡೆದು ವಿಚಾರಣೆಗೆ ಒಳಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಅರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.
ಅರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಈ ಕೃತ್ಯದಲ್ಲಿ ಆತನ ಪತ್ನಿ, ಪತ್ನಿಯ ತಮ್ಮ. ಪತ್ನಿಯ ಅಕ್ಕ-ಭಾವಾ ಮತ್ತು ಸ್ನೇಹಿತೆಯೊಬ್ಬರು ಸೇರಿದಂತೆ ಒಟ್ಟು 6 ಜನ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಪತಿ-ಪತ್ನಿಯ ಹೆಸರಿನಲ್ಲಿದ್ದ ಕಟ್ಟಡಕ್ಕೆ ವಿವಿಧ ಸರ್ವೆ ನಂಬರ್ ಮತ್ತು ವಿವಿಧ ಸೈಟ್ ನಂಬರ್‌ಗಳನ್ನು ನಮೂದಿಸಿ ಹಾಗೂ ಸೈಟ್ ಉದ್ದಳತೆಯಲ್ಲೂ ಸಹ ಬದಲಾವಣೆ ಮಾಡಿ, ಈ ರೀತಿ ಬದಲಾವಣೆ ಮಾಡಿದ ನಕಲಿ ದಾಖಲಾತಿಗಳಿಂದ ಡೀಡ್ ಮಾಡಿಸಿ ನಂತರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿತ್ತು. ನಕಲಿ ದಾಖಲಾತಿಗಳ ಆಧಾರದ ಮೇಲೆ ಹಲವಾರು ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಕೋ-ಆಪರೇಟಿವ್ ಬ್ಯಾಂಕ್ಗಳಿಗೆ ಅಡಮಾನ ಇರಿಸಿ, ಕಂತು ಸಾಲ ಮತ್ತು ಯಂತ್ರೋಪಕರಣ ಸಾಲವೆಂದು ಒಟ್ಟು 22 ಬ್ಯಾಂಕ್ಗಳಿಂದ ಸುಮಾರು 10,00,00,000 (ಹತ್ತು ಕೋಟಿ ರೂಪಾಯಿ) ಗೂ ಅಧಿಕ ಲೋನ್ ಪಡೆದುಕೊಂಡು ವಂಚಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಆರೋಪಿತನ ಪತ್ನಿಯನ್ನು 2024ರ ಮಾರ್ಚ್ 22ರಂದು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಅಕೆಯ ತಮ್ಮ, ಆಕೆಯ ಅಕ್ಕ - ಬಾವಾ ಮತ್ತು ಆಕೆಯ ತಮ್ಮನ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಈ ಎಲ್ಲಾ 6 ಜನ ಆರೋಪಿಗಳು ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ್ ಭರಮಪ್ಪ ಜಗಲಾಸರ್, ಐ.ಪಿ.ಎಸ್ ಅವರ ನಿರ್ದೇಶನದಂತೆ ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾರಾಯಣಸ್ವಾಮಿ ವಿ ಅವರು ಮಾರ್ಗದರ್ಶನ ನೀಡಿದ್ದರು. ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಅಧಿಕಾರಿ, ಸಿಬ್ಬಂದಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.