ಮುಂಡಗಾರು ಲತಾ ಸೇರಿದಂತೆ ಸಕ್ರಿಯ ನಕ್ಸಲರನ್ನೂ ಮುಖ್ಯವಾಹಿನಿಗೆ ತರಲು ಶರಣಾಗತಿ ಸಮಿತಿ ಯತ್ನ
'ರಾಜ್ಯದ ಜಾನ್ (ಜಯಣ್ಣ), ಮುಂಡಗಾರು ಲತಾ, ಸುಂದರಿ ಹಾಗೂ ವನಜಾಕ್ಷಿ ಸೇರಿದಂತೆ ನಾಲೈದು ಮಂದಿ ಮಾತ್ರ ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದಾರೆ. ಇವರು ಮುಖ್ಯವಾಹಿನಿಗೆ ಬರಬೇಕೆಂದು ನಕ್ಸಲ್ ಶರಣಾಗತಿ ಸಮಿತಿ ಹೇಳಿದೆ.;
ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಕ್ರಿಯರಾಗಿರುವ ನಿಷೇಧಿತ ಸಿಪಿಐಎಂಎಲ್-ಮಾವೋವಾದಿ ಪಕ್ಷದ ಕಾರ್ಯಕರ್ತರ ಮನವೊಲಿಸಿ ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ನಿರ್ಧರಿಸಿದೆ.
ಈ ಬಗ್ಗೆ ಸಮಿತಿಯ ಸದಸ್ಯರಾದ ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ, ಕೆ.ಪಿ. ಶ್ರೀಪಾಲ್ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬಂಜಗೆರೆ ಜಯಪ್ರಕಾಶ್, "ಯಾರದೇ ಜೀವಹಾನಿಯಾಗದಂತೆ ಈ ಸಮಸ್ಯೆಯನ್ನು ಬಗೆಹರಿಸಲು ನಾವು ಬದ್ಧವಾಗಿದ್ದೇವೆ. ಪಶ್ಚಿಮಘಟ್ಟದಲ್ಲಿರುವ ಆದಿವಾಸಿಗಳು, ಕೃಷಿಕರ ಸಮಸ್ಯೆಗಳು ಮತ್ತು ಆತಂಕಗಳನ್ನು ನಿವಾರಿಸುವ ಮೂಲಕ ಮಾವೋವಾದಿ ನಕ್ಸಲರಿಗೆ ಹೋರಾಡಲು ವಿಷಯಗಳಿರದಂತೆ ಸರ್ಕಾರ ನೋಡಿಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
'ರಾಜ್ಯದ ಜಾನ್ (ಜಯಣ್ಣ), ಮುಂಡಗಾರು ಲತಾ, ಸುಂದರಿ ಹಾಗೂ ವನಜಾಕ್ಷಿ ಸೇರಿದಂತೆ ನಾಲೈದು ಮಂದಿ ಮಾತ್ರ ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದಾರೆ. ಇವರು ಮುಖ್ಯವಾಹಿನಿಗೆ ಬರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಹೋರಾಟ ಮುಂದುವರಿಸಬೇಕು. ಸರ್ಕಾರ ಘೋಷಿಸಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಇವರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ತ್ವರಿತಗತಿ ನ್ಯಾಯಾಲಯಗಳನ್ನು ರಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು' ಎಂದು ಹೇಳಿದರು.
ತನಿಖೆಗೆ ಒತ್ತಾಯ
ಇತ್ತೀಚೆಗೆ ಪೊಲೀಸರ ಗುಂಡಿಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಂತೆ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಆಗ್ರಹಿಸಿದೆ.
ಇದು ಸರ್ಕಾರದ ಜವಾಬ್ದಾರಿ ಕೂಡ ಆಗಿದೆ. ಸಮಿತಿಯು ಈಗಾಗಲೇ ವಿಕ್ರಂಗೌಡ ಅವರ ಎನ್‌ಕೌಂಟರ್ ನಡೆದ ಸ್ಥಳ ಸೇರಿದಂತೆ ಹೆಬ್ರಿ ತಾಲ್ಲೂಕಿನ ಹಲವು ಸ್ಥಳಗಳಿಗೆ ಭೇಟಿ ನೀಡಿದೆ. ಅಲ್ಲಿರುವ ಆದಿವಾಸಿಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕೊರತೆಗಳ ಲಾಭ ಪಡೆದು ಕೆಲ ತೀವ್ರಗಾಮಿ ಸಂಘಟನೆಗಳು ಅಲ್ಲಲ್ಲಿ ಸಂಚರಿಸುತ್ತಿರಬಹುದು. ಸರ್ಕಾರ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಸರ್ಕಾರದ ನಿರ್ಲಕ್ಷ್ಯ ಅಥವಾ ನಿಧಾನಗತಿಯ ಕ್ರಮಗಳು ಬೇರೆ ಸ್ವರೂಪ ಪಡೆದುಕೊಂಡು ಇಂತಹ ಹೋರಾಟಗಾರರಿಗೆ ಜನ್ಮಕೊಡುತ್ತವೆ. ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಕಿರುಕುಳ ನೀಡುತ್ತಿರುವ ಬಗ್ಗೆ ಆದಿವಾಸಿಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.