Bengaluru Bandh | ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಬೆಳಗಾವಿ, ಬೆಂಗಳೂರು, ಮೈಸೂರಿನಲ್ಲಿ ಪ್ರತಿಭಟನೆ
Bengaluru Bandh ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುವ ಸಾಧ್ಯತೆ ಇದ್ದು, ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.;
ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಕರ್ನಾಟಕ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದು ಸೇರಿದಂತೆ ಮಹಾರಾಷ್ಟ್ರ ಗಡಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಸಮಸ್ಯೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ (Karnataka Bandh) ಬೆಳಗಾವಿ, ಬೆಂಗಳೂರು ಮಹಾನಗರ ಸೇರಿದಂತೆ ಬಹುತೇಕ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗಾವಿ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಕೆಲವು ಕಡೆ ಬೆಳಿಗ್ಗೆ ಕನ್ನಡಪರ ಸಂಘಟನೆಗಳು ಬಂದ್ ಅಂಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ಬೆಂಗಳೂರಿನ ರಾಜಾಜಿನಗರ ಮೆಟ್ರೊ ಸ್ಟೇಷನ್ ಮೇಲೆ ಮುತ್ತಿಗೆ ಹಾಕುವ ಪ್ರಯತ್ನಗಳು ನಡೆದಿವೆ.
ಘಟನೆಯ ಕೇಂದ್ರ ತಾಣ ಬೆಳಗಾವಿಯಲ್ಲಿ ಬಂದ್‌ಗೆ ನಿರೀಕ್ಷಿತ ಬೆಂಬಲ ದೊರಕಿಲ್ಲ. ಅದೇ ರೀತಿ ಬೆಂಗಳೂರಿನಲ್ಲಿ ಬಸ್, ಆಟೋ ಓಡಾಟ ಎಂದಿನಂತೆಯೇ ಇದೆ. ಆದರೆ ಕೆಲವೊಂದು ಕಡೆ ಕನ್ನಡಪರ ಸಂಘಟನೆಗಳು ಮುಖಂಡರು ಪ್ರತಿಭಟನೆ ಆಯೋಜಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್, ಆಟೋ, ಓಲಾ, ಉಬರ್ ಸಂಚಾರ ನಡೆಸುತ್ತಿವೆ. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ ಕಾರಣ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುವ ಸಾಧ್ಯತೆ ಇದ್ದು, ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ದಾವಣಗೆರೆಯಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲಿಯೂ ಜನಜೀವನ ಎಂದಿನಂತೆಯೇ ಆರಂಭವಾಗಿದೆ.
ಮಂಡ್ಯದಲ್ಲಿ ಪ್ರತಿಭಟನೆಯ ಕಾವು
ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ರಸ್ತೆಯಲ್ಲಿಯೇ ಮಲಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಶಿವರಾಮೇಗೌಡ ಬಣದಿಂದ ಈ ಪ್ರತಿಭಟನೆ ನಡೆದಿದೆ.
ಮೈಸೂರು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ವಕೀಲರ ಸಂಘ ಸೇರಿ ಹಲವರಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.
ಕ್ಯಾರೇ ಎನ್ನದ ಬೀದರ್ ಮಂದಿ
ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೀದರ್ ಜಿಲ್ಲೆಯಲ್ಲಿ ಬೆಂಬಲ ಸಿಗಲಿಲ್ಲ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ತೆಲಂಗಾಣ, ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಬಸ್‌ಗಳು, ಆಟೋ, ಟಂಟಂ ಸೇರಿದಂತೆ ಎಲ್ಲ ಪ್ರಕಾರದ ವಾಹನಗಳು ಯಥಾಪ್ರಕಾರ ಸಂಚರಿಸುತ್ತಿವೆ.
ವಾಟಾಳ್ ವಿರುದ್ಧವೇ ಆಕ್ರೋಶ
ಉತ್ತರ ಕರ್ನಾಟಕ ಭಾಗದ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಕುಳಿತು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ ಎಂದು ಉತ್ತರ ಕರ್ನಾಟಕ ಆಟೊ ಚಾಲಕ ಮಾಲಕರ ಸಂಘದ ಸದಸ್ಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣ ರಶ್
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕ್ಯಾಬ್ ಸೇವೆ ಇರದು ಎಂದು ಭಾವಿಸಿದ ಪ್ರಯಾಣಿಕರು ಬೆಳಗ್ಗೆ 11ರ ನಂತರ ಮತ್ತು ಮಧ್ಯಾಹ್ನದ ವಿಮಾನಗಳಿಗೆ ತೆರಳಲು ಬೆಳಗ್ಗೆ 8 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದರಿಂದಾಗಿ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕ್ಯಾಬ್ ಸೇವೆ ಇರಲಾರದು ಎಂದು ಪ್ರಯಾಣಿಕರು ಬೆಳಗ್ಗೆ 11ರ ನಂತರ ಹಾಗೂ ಮಧ್ಯಾಹ್ನ ವಿಮಾನಗಳಿಗೆ ತೆರಳಲು ಬೆಳಗ್ಗೆ 8 ಗಂಟೆಗೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿತು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕ್ಯಾಬ್ ಸೇವೆ ಇರಲಾರದು ಎಂದು ಪ್ರಯಾಣಿಕರು ಬೆಳಗ್ಗೆ 11ರ ನಂತರ ಹಾಗೂ ಮಧ್ಯಾಹ್ನ ವಿಮಾನಗಳಿಗೆ ತೆರಳಲು ಬೆಳಗ್ಗೆ 8 ಗಂಟೆಗೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿ ಹೋಗಿತ್ತು.#bengaluru #Airport pic.twitter.com/oU9kIfnfHq
— Prajavani (@prajavani) March 22, 2025
ಕನ್ನಡ ಕಾರ್ಯಕರ್ತರು ವಶಕ್ಕೆ
ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆಗಾಗಿ ಸುಮಾರು ಇಪ್ಪತ್ತು ಬೈಕ್‌ಗಳಲ್ಲಿ ಕನ್ನಡ ಕಾರ್ಯಕರ್ತರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡರು. ರೇಸ್ ಕೊರ್ಸ್ ರಸ್ತೆಯ ಫ್ಲೈ ಓವರ್ ಮೇಲೆ ಬಸ್ ಗಳ ತಡೆದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಅನ್ಯರಾಜ್ಯದ ಬಸ್‌ಗಳನ್ನು ತಡೆ ಕಪ್ಪು ಮಸಿ ಬಳಿದ ಸಾರಾ ಗೋವಿಂದು ಹಾಗೂ ವಾಟಾಳ್ ನಾಗರಾಜ್ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕಂಡೆಕ್ಟರ್ ಮೇಲೆ ನಡೆದ ಹಲ್ಲೆ ಖಂಡಿಸಿ ಕೆರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜಾಜಿನಗರ ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಮರಾಠಿಗರು, ಎಂಇಎಸ್ ಸಂಘಟನೆಯ ಕುರಿತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೆಜೆಸ್ಟಿಕ್, ಬಸವೇಶ್ವರನಗರ, ಕೆ.ಆರ್.ಪುರ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಮಾಡುತ್ತಿರುವ ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪ್ರತಿಭಟನೆ ಹತ್ತಿಕ್ಕುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಂದ್‌ಗೆ ಅವಕಾಶ ನೀಡುತ್ತಿಲ್ಲ ಎಂದು ಹೋರಾಟಗಾರರು ಆರೋಪಿಸಿದರು.
ಬಿಕೋ ಎನ್ನುತ್ತಿರುವ ರಸ್ತೆಗಳು
ಬೆಳಗಾವಿಯಲ್ಲಿ ಸರ್ಕಾರಿ ಬಸ್ಸಿನ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದರಿಂದ ಬೆಂಗಳೂರಿನಲ್ಲಿ ರಸ್ತೆಗಳು ಅಷ್ಟೊಂದು ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಹೋರಾಟಗಾರರು ಪೊಲೀಸ್ ವಶಕ್ಕೆ
ಕರ್ನಾಟಕ ಬಂದ್ ಬೆಂಬಲಿಸಿ ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮನ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಿಸಬೇಕು ಎಂದು ಘೋಷಣೆ ಕೂಗಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮನ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸಬೇಕು ಎಂದು ಘೋಷಣೆ ಕೂಗಿದರು.