ಯೂಟ್ಯೂಬರ್ ಸಮೀರ್ ವಿಚಾರಣೆ ತೀವ್ರ ; ಹಣಕಾಸು ಮೂಲದ ಮಾಹಿತಿ ಪಡೆದ ಎಸ್ಐಟಿ ಅಧಿಕಾರಿಗಳು

ಗೂಗಲ್ ಆಡ್ ಸೆನ್ಸ್ ಮೂಲಕ ಆತನಿಗೆ ಬರುವ ಆದಾಯ ಮತ್ತು ಆತನ ಖರ್ಚು ವೆಚ್ಚ ತಾಳೆಯಾಗುತ್ತಿಲ್ಲ ಎಂದು ಗುಮಾನಿ ವ್ಯಕ್ತಪಡಿಸಿರುವ ಅಧಿಕಾರಿಗಳು, ಆತನ ಹಣಕಾಸಿನ ಬಾಹ್ಯ ಮೂಲಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.;

Update: 2025-08-24 13:15 GMT

ಸಮೀರ್  ಎಂ ಡಿ

ಯೂಟ್ಯೂಬರ್ ಸಮೀರ್ ಎಂ. ಡಿ. ಅವರನ್ನು ಬೆಳ್ತಂಗಡಿ‌ ಎಸ್ಐಟಿ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದರು.

ದೂತ ಸಮೀರ್ ಎಂ.ಡಿ.ಗೆ ಹಣಕಾಸು ಮೂಲದ ಬಗ್ಗೆ ಪ್ರಶ್ನೆ ಮಾಡಲಾಗಿದೆ ಎಂದು ಹೇಳಲಾಗಿದರ.

ದೂತ ಚಾನೆಲ್ ಮೂಲಕ ಸೌಜನ್ಯ ಪ್ರಕರಣದ ಪ್ರಚಾರ ಮತ್ತು ವೀಕ್ಷಕರ ಸಂಖ್ಯೆ ಹೆಚ್ಚು ಮಾಡಿಕೊಂಡಿದ್ದ ಸಮೀರ್, ಅತ್ಯಾಧುನಿಕ ಮತ್ತು ದುಬಾರಿ ಎನ್ನಬಹುದಾದ ವ್ಯವಸ್ಥೆಯ ಸ್ಟುಡಿಯೋ ರೂಪಿಸಿಕೊಂಡಿದ್ದ.

ಗೂಗಲ್ ಆಡ್ ಸೆನ್ಸ್ ಮೂಲಕ ಆತನಿಗೆ ಬರುವ ಆದಾಯ ಮತ್ತು ಆತನ ಖರ್ಚು ವೆಚ್ಚ ತಾಳೆಯಾಗುತ್ತಿಲ್ಲ ಎಂದು ಗುಮಾನಿ ವ್ಯಕ್ತಪಡಿಸಿರುವ ಅಧಿಕಾರಿಗಳು, ಆತನ ಹಣಕಾಸಿನ ಬಾಹ್ಯ ಮೂಲಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಭಾನುವಾರ ಸಂಜೆಯ ವೇಳೆಗೆ ಎಸ್ಐಟಿ ವಿಚಾರಣೆ ಮುಗಿಯಲಿದೆಯೋ ಅಥವಾ ಮುಂದುವರಿಯಲಿದೆಯೋ ತಿಳಿಯಲಿದೆ.

ಸುಜಾತಾ ಭಟ್ ಸುಳಿವಿಲ್ಲ!

ತನ್ನ ಮಗಳು ಅನನ್ಯ ಭಟ್ ಕೊಲೆಯಾಗಿದೆ ಎಂದು ಆರೋಪಿಸಿದ್ದ ಸುಜಾತಾ ಭಟ್, ಎಸ್ಐಟಿ ನೀಡಿದ್ದ ಎರಡನೇ ನೋಟೀಸ್ ಗೂ ಉತ್ತರ ನೀಡಿಲ್ಲ. ಸಾಕ್ಷಿ ದೂರುದಾರ ಚಿನ್ನಯ್ಯನ ಬಂಧನದ ಬಳಿಕ ಸುಜಾತಾ ಭಟ್ ಎಲ್ಲೂ ಕಾಣಿಸಿಕೊಂಡಿಲ್ಲ. ಪೊಲೀಸರಿಗೆ ಆಕೆ ನೀಡಿರುವ ಮೊಬೈಲ್ ನಂಬರ್ ಗಳು ವ್ಯಾಪ್ತಿ ಪ್ರದೇಶದಿಂದ ಹೊರಗಿರುವ ಸಂದೇಶ ನೀಡುತ್ತಿವೆ.

ತಿಮರೋಡಿ, ಮಟ್ಟೆಣ್ಣವರ್ ವಿಚಾರಣೆ ಸನ್ನಿಹಿತ!

ಬಂಧಿತ ಚಿನ್ನಯ್ಯ ನೀಡಿರುವ ಸುಳಿವುಗಳ ಪ್ರಕಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟೆಣ್ಣವರ್ ಕೂಡ ಎಸ್ಐಟಿ ಮುಂದೆ ಹಾಜರಾಗಬೇಕಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ವಿಚಾರಣೆಗೆ ತೆರಳಿದ್ದ ತಿಮರೋಡಿ, ಚಿನ್ನಯ್ಯನ ಮಂಪರು ಪರೀಕ್ಷೆಗೆ ಆಗ್ರಹಿಸಿದ್ದರು.

ಈ ಮಧ್ಯೆ ಎಸ್ಐಟಿ ವಿಚಾರಣೆಯಿಂದ ಪಾರಾಗುವ ಬಗ್ಗೆ ಮನೆಯಲ್ಲಿ ವಕೀಲರ ಜೊತೆಗೆ ತಡರಾತ್ರಿವರೆಗೂ ಚರ್ಚೆ ನಡೆದಿದೆ‌ ಎಂದು ಮೂಲಗಳು ತಿಳಿಸಿವೆ.

ಚಿನ್ನಯ್ಯನ ವಿಚಾರಣೆ ನಡೆಸುತ್ತಿರುವ ತಂಡವು, ಆತನ ಸಹೋದರ ತಾನಯ್ಯ ಅವರನ್ನೂ ಪ್ರತ್ಯೇಕವಾಗಿ ಇರಿಸಿದ್ದು, ಆತನಿಂದಲೂ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಇಬ್ಬರು ತಮಿಳು ಮೂಲದ ಮಹಿಳೆಯರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಇಂದು ಬೆಳಿಗ್ಗೆ ಆಗಮಿಸಿದ್ದು, ತಾನಯ್ಯ ಇರುವಿಕೆ ತಿಳಿದು ವಾಪಸ್ ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Similar News